ಬಾಗಲಕೋಟೆ: ಮಾನಸಿಕ ಅಸ್ವಸ್ಥನಾಗಿ ಕಳೆದ ಐದು ವರ್ಷ ತನ್ನವರಿಂದ ದೂರಾಗಿದ್ದ ವ್ಯಕ್ತಿಗೆ ತನ್ನ ಕುಟುಂಬ ಸೇರಲು ಫೇಸ್ಬುಕ್ ನೆರವಾಗಿದೆ.
ಹೌದು, ಮಾನಸಿಕ ಅಸ್ವಸ್ಥ ಮಾಡುತ್ತಿದ್ದ ಸಮಾಜಮುಖಿ ಕೆಲಸವೊಂದನ್ನು ಯಾರೋ ವಿಡಿಯೋ ಮಾಡಿ ಫೇಸ್ಬುಕ್ಗೆ ಹಾಕಿದ ಪರಿಣಾಮ ಆತ ತನ್ನ ಕುಟುಂಬ ಸೇರುವಂತಾಗಿದ್ದು, ಇಂಥ ಮನಮಿಡಿಯುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ಲ ನಗರದಲ್ಲಿ ನಡೆದಿದೆ.
ಇಳಕಲ್ಲ ಜೋಗಿ ಎಂದೇ ಹೆಸರಾಗಿದ್ದ ನರಸಿಂಹ ಎಂಬ ಮಾನಸಿಕ ಅಸ್ವಸ್ಥ ಮಾಡುತ್ತಿದ್ದ ಸಮಾಜಮುಖಿ ಕೆಲಸವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಗಮನಿಸಿದ ಆತನ ಕುಟುಂಬಸ್ಥರು ಮನೆಗೆ ಕರೆದೊಯ್ದಿದ್ದಾರೆ. ತಲೆ ತುಂಬ ಕೂದಲು ಬಿಟ್ಟುಕೊಂಡು ಹುಚ್ಚನಾಗಿದ್ದ ನರಸಿಂಹನನ್ನು ಎಲ್ಲರೂ ಇಳಕಲ್ಲ ಜೋಗಿ ಎಂದು ಕರೆಯುತ್ತಿದ್ದರು. ಮೂಲತಃ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ನರಸಿಂಹ ಐದು ವರ್ಷದಿಂದ ನಾಪತ್ತೆಯಾಗಿದ್ದ. ಮನೆಯವರೆಲ್ಲರೂ ಹುಡುಕಿದರೂ ಸಿಕ್ಕಿರಲಿಲ್ಲ. ನಂತರ ಆತ ಪತ್ತೆಯಾಗುವ ಭರವಸೆಯನ್ನೇ ಕಳೆದುಕೊಂಡಿದ್ದರು.
ಮಾನಸಿಕ ಅಸ್ವಸ್ಥನಾಗಿದ್ದರೂ ನರಸಿಂಹ ಇಳಕಲ್ಲ ನಗರದಲ್ಲಿ ಸರ್ವ ವಿಜಯ ಸಂಸ್ಥೆಯವರು ನೆಟ್ಟ ನೂರಾರು ಗಿಡಗಳಿಗೆ ಪ್ರತಿ ನಿತ್ಯ ತಪ್ಪದೆ ಬಕೆಟ್ ಹಿಡಿದು ನೀರು ಹಾಕುತ್ತ ಪರಿಸರ ಪ್ರೇಮ ಮೆರೆಯುತ್ತಿದ್ದ. ಈತನ ಪರಿಸರ ಪ್ರೀತಿ ಎಲ್ಲರ ಮನಮಿಡಿಯುವಂತೆ ಮಾಡಿತ್ತು. ಈತ ಗಿಡಕ್ಕೆ ನೀರು ಹಾಕೋದನ್ನು ವಿಡಿಯೋ ಮಾಡಿದ ಸ್ಥಳೀಯರು ಅದಕ್ಕೆ ಒಳಿತು ಮಾಡು ಮನಸಾ ಎಂಬ ಹಾಡನ್ನು ಅಳವಡಿಸಿ ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಸಾಕಷ್ಟು ಜನರಿಂದ ಶೇರ್, ಲೈಕ್, ಕಮೆಂಟ್ ಪಡೆಯುತ್ತ ನರಸಿಂಹನ ಕುಟುಂಬಕ್ಕೂ ತಲುಪಿತ್ತು.
ವಿಡಿಯೋ ನೋಡಿದ ತಕ್ಷಣ ಆತನ ಕುಟುಂಬಸ್ಥರು ಇಳಕಲ್ಲ ನಗರಕ್ಕೆ ಆಗಮಿಸಿದರು. ಕ್ಷೌರ, ಸ್ನಾನ ಮಾಡಿಸಿ ಹೊಸ ಟಿ ಶರ್ಟ್ ಹಾಕಿಸಿಕೊಂಡು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಕ್ಷೌರ ಮಾಡಿಸಿದ ನಂತರ ನರಸಿಂಹ ಲಕ್ಷಣವಾಗಿ ಕಾಣುತ್ತಿದ್ದ. ಫೇಸ್ಬುಕ್ನಿಂದ ನರಸಿಂಹ ಮತ್ತೆ ಮನೆಯವರ ಜತೆ ಒಂದಾದ ಘಟನೆ ಎಲ್ಲರ ಮನ ಕಲುಕುವಂತೆ ಮಾಡಿದೆ.