Wednesday, 12th December 2018  

Vijayavani

Breaking News

ಮುಟ್ಟಾದವರು ಮೂರು ದಿನ ಗಡಿಪಾರು

Saturday, 17.03.2018, 3:03 AM       No Comments

ರಾಜ್ಯ ಸರ್ಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡಿದ್ದರೂ ರಾಜ್ಯದ ಕೆಲವೆಡೆ ಮೌಢ್ಯಾಚರಣೆ ಇನ್ನೂ ಜಾರಿಯಲ್ಲಿದೆ. ಅದರಲ್ಲೂ ಹೆಣ್ಣನ್ನು ಶೋಷಣೆಗೆ ಈಡುಮಾಡುವಂಥ ಕೆಲ ಪದ್ಧತಿಗಳಿಗೆ ನಿಷೇಧ ಹೇರಿದ್ದರೂ ಹಲವೆಡೆ ಮಹಿಳೆಯರು ಅದರಿಂದಲೇ ಶೋಷಣೆಗೆ ಗುರಿಯಾಗುತ್ತಿರುವುದು ಕಂಡುಬಂದಿದೆ. ಅರ್ಥಾತ್, ಮಹಿಳೆಯರು ಋತುಮತಿಯಾದಾಗ, ಮುಟ್ಟಾದಾಗ, ಹೆರಿಗೆ ಸಂದರ್ಭದಲ್ಲಿ ಊರಿನಿಂದ ಹೊರಗೆ ಜೀವನ ಮಾಡಬೇಕಾದ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ರಾಜ್ಯದ ಅನೇಕ ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರು ಅನಿಷ್ಟ ಪದ್ಧತಿಗೆ ಬಲಿಯಾಗುತ್ತಿದ್ದಾರೆ.

|ಹರೀಶ್ ನೇರಲಕೆರೆ

ನಾಗಮಂಗಲ/ಬೆಂಗಳೂರು: ಮಂಡ್ಯ ಜಿಲ್ಲೆಯ ಕುಗ್ರಾಮ ಗೊಲ್ಲರಹಟ್ಟಿಯಲ್ಲಿ ಕಾಡುಗೊಲ್ಲ ಜಾತಿಗೆ ಸೇರಿದ 20 ಕುಟುಂಬಗಳಿದ್ದು, ಇಲ್ಲಿ ಋತುಮತಿಯಾದವರು 12 ದಿನ, ಹೆರಿಗೆ ಬಳಿಕ 15 ದಿನ ಮತ್ತು ಮುಟ್ಟಾದಾಗ 3 ದಿನ ಊರ ಹೊರಭಾಗದ ಜಮೀನುಗಳಲ್ಲಿ ಬಿಸಿಲು, ಮಳೆ, ಗಾಳಿ ಮತ್ತು ಚಳಿಯನ್ನು ಲೆಕ್ಕಿಸದೆ ಕಾಲದೂಡಬೇಕು. ಯಾರೊಬ್ಬರೂ ಅವರ ಸಹಾಯಕ್ಕೆ ಇರುವುದಿಲ್ಲ ಎಂಬುದು ಆತಂಕದ ಸಂಗತಿ.

ಜಿ.ಗೊಲ್ಲರಹಟ್ಟಿ ಮಾತ್ರವಲ್ಲದೆ, ಚಿಕ್ಕಜಟಕಾದಟ್ಟಿ, ಕಾರಗೆರೆಹಟ್ಟಿ, ಹೊಸಕ್ಕಿಪಾಳ್ಯದಹಟ್ಟಿ, ಇರಬನಹಳ್ಳಿಹಟ್ಟಿ, ಬೆಳ್ಳೂರುಹಟ್ಟಿ ಮತ್ತು ಕಾರಬಯಲು ಹಟ್ಟಿ ಸೇರಿ ಹಲವೆಡೆ ಇಂಥ ಪರಿಸ್ಥಿತಿ ಇದೆ. ಈ ಸಮುದಾಯ ಬೇರಾವುದೇ ಜಾತಿ, ಜನಾಂಗದವರ ಜತೆ ವಾಸಿಸದೆ ಪ್ರತ್ಯೇಕವಾಗಿ ನೆಲೆಸುವುದು ವಿಶೇಷ. ಆ ಕಾರಣದಿಂದಲೇ ಇಂಥ ಅನಿಷ್ಟ ಪದ್ಧತಿ ಬೆಳಕಿಗೆ ಬರುವುದು ಕಡಿಮೆ.

ಊರೊಳಗಿದ್ದರೆ ಸಂಕಷ್ಟವಂತೆ: ಋತುಮತಿಯಾದಾಗ, ಮುಟ್ಟಿನ ಅವಧಿಯಲ್ಲಿ ಗ್ರಾಮದೊಳಗಿದ್ದರೆ ಗ್ರಾಮದ ದೇವರಾದ ಹಟ್ಟಿಲಕ್ಕಮ್ಮ ಮತ್ತು ಕಾಟಿಲಿಂಗೇಶ್ವರ ಶಾಪ ನೀಡಲಿವೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಗ್ರಾಮದೊಳಗೆ ಅಂಥ ಹೆಣ್ಣು ಮಕ್ಕಳು ಉಳಿದರೆ ಇತರರಿಗೆ ಸುಸ್ತು, ಹೊಟ್ಟೆನೋವು, ಮನೆಯೊಳಗೆ ಹಾವು ಬರುವುದು ಸೇರಿ ವಿಚಿತ್ರ ಸಮಸ್ಯೆಗಳು ಕಾಡಲಿವೆ ಎಂಬ ಮೂಢನಂಬಿಕೆಗಳಿವೆ.

ಸೂತಕದ ಮನೆ ಇಲ್ಲ: ಮಹಿಳೆಯರು ಹೀಗೆ ಊರಿನಿಂದ ಹೊರಗೆ ವಾಸಿಸಲು ಅನುಕೂಲವಾಗುವಂತೆ ಸೂತಕದ ಮನೆ ಮತ್ತು ಇವರಿಗೆ ಸಹಾಯ ಮಾಡುವವರಿಗೆ ಕಾಯುವ ಮನೆ ಅವಶ್ಯಕತೆ ಇದೆ. ಈ ಬಗ್ಗೆ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ. ಇನ್ನಾದರೂ ಈ ಬಗ್ಗೆ ಗಮನಹರಿಸಿ ಶೀಘ್ರ ಸೂತಕದ ಮನೆ ಮತ್ತು ಕಾಯುವ ಮನೆಯನ್ನು ನಿರ್ವಿುಸಿಕೊಡಬೇಕು ಎನ್ನುತ್ತಾರೆ ಗ್ರಾಮದ ಮಹಿಳೆಯರು.

ಮಹಿಳಾ ಭವನ

ದಾವಣಗೆರೆ ಜಿಲ್ಲೆಯ ಜಗಳೂರು, ಆನಗೋಡು, ಚನ್ನಗಿರಿ ಮುಂತಾದೆಡೆ ಗಡಿಪಾರು ಸಂಪ್ರದಾಯ ಮೊದಲಿನಷ್ಟು ಇರದಿದ್ದರೂ ಈಗಲೂ ಆಚರಣೆಯಲ್ಲಿವೆ. ಕೆಲವು ಗೊಲ್ಲರಹಟ್ಟಿಗಳಲ್ಲಿ ಇದಕ್ಕಾಗಿ ಸರ್ಕಾರದಿಂದ ಮಹಿಳಾ ಭವನಗಳನ್ನು ನಿರ್ವಿುಸಲಾಗಿದೆ. ಇದಕ್ಕೆ ಕೆಲವರ ವಿರೋಧವೂ ವ್ಯಕ್ತವಾಗಿದೆ.

ಮೌಢ್ಯ ನಿಷೇಧ ಕಾಯ್ದೆ ಏನು ಹೇಳುತ್ತದೆ

ಕರ್ನಾಟಕ ಮೌಢ್ಯ ನಿಷೇಧ ಕಾಯ್ದೆ 2017 ಕಳೆದ ವರ್ಷದ ನವೆಂಬರ್​ನಲ್ಲಿ ಅಂಗೀಕಾರಗೊಂಡಿದೆ. ಈ ಕಾನೂನಿನ ಪ್ರಕಾರ, ಋತುಸ್ರಾವದ ಅವಧಿಯಲ್ಲಿ ಮಹಿಳೆಯರನ್ನು ಮನೆಯಿಂದ, ಗ್ರಾಮದಿಂದ ದೂರ ಇರಿಸುವುದು ಹಾಗೂ ಈ ಅವಧಿಯಲ್ಲಿ ದೇವಸ್ಥಾನಗಳಿಗೆ ಪ್ರವೇಶ ನೀಡದಿರುವುದು ಅಪರಾಧ.

ಗೊಲ್ಲರಹಟ್ಟಿಯಲ್ಲಿ ಇಂಥ ಪದ್ಧತಿ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ತಕ್ಷಣ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಕಳಿಸಿ ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ ಆ ಜನರಿಗೆ ಅರಿವು ಮೂಡಿಸಲಾಗುವುದು.

| ಎನ್.ಮಂಜುಶ್ರೀ ಜಿಲ್ಲಾಧಿಕಾರಿ, ಮಂಡ್ಯ

ಪೂರ್ವಜರ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ, ಹಾಗಾಗಿ ನಾವು ಮುಂದುವರಿಸುತ್ತಿದ್ದೇವೆ. ಆ ಸಮಯದಲ್ಲಿ ನಮ್ಮ ನೋವು, ಕಷ್ಟ ನಮಗೇ ಗೊತ್ತು. ಶೀಘ್ರ ಗ್ರಾಮದ ಹೊರಗೆ ಸೂತಕದ ಮನೆ ಮತ್ತು ಕಾಯುವ ಮನೆ ನಿರ್ವಿುಸಿಕೊಟ್ಟು ನಮ್ಮ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.

| ಚನ್ನಮ್ಮ ಜಿ.ಗೊಲ್ಲರಹಟ್ಟಿ ಗ್ರಾಮ

ಜಿ. ಗೊಲ್ಲರಹಟ್ಟಿ ಗ್ರಾಮದ ಮಹಿಳೆಯರ ಸಮಸ್ಯೆ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಅವರ ಬೇಡಿಕೆ ಈಡೇರಿಸಲಾಗುವುದು. ಜತೆಗೆ ತಾಲೂಕಿನ ಇತರೆಡೆಗಳಲ್ಲಿ ಈ ರೀತಿಯ ಸಮಸ್ಯೆ ಬಗ್ಗೆ ಗಮನಹರಿಸಿ ಕಾಡುಗೊಲ್ಲ ಸಮುದಾಯದ ಮಹಿಳೆಯರ ನೋವಿಗೆ ಸ್ಪಂದಿಸುತ್ತೇನೆ.

| ಎನ್.ಚಲುವರಾಯಸ್ವಾಮಿ ಶಾಸಕ ನಾಗಮಂಗಲ

ಹಿರಿಯರ ತಾಕೀತು

ಚಿಕ್ಕಮಗಳೂರಿನ ಕಡೂರು ತಾಲೂಕು ಎಸ್.ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬದೇವರ ಗೊಲ್ಲರಹಟ್ಟಿ, ಬಿದರೆಗೊಲ್ಲರಹಟ್ಟಿಯಲ್ಲಿ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರನ್ನು ಊರಿಂದ ಹೊರಹಾಕುವ ಸಂಪ್ರದಾಯ ಇನ್ನೂ ಜೀವಂತವಿದೆ. ಈ ಪದ್ಧತಿಯನ್ನು ಯಾವ ಕಾರಣಕ್ಕೂ ಬಿಡಬಾರದು ಎಂದು ಗ್ರಾಮದ ಹಿರಿಯರು ತಾಕೀತು ಮಾಡಿದ್ದಾರೆ.

ದೀಪಾವಳಿಯಲ್ಲೂ ನಡೆಯುತ್ತೆ

ಶಿವಮೊಗ್ಗದ ಸಾಗರ ತಾಲೂಕಿನ ಕೆಲ ಗ್ರಾಮಗಳಲ್ಲಿ ದೀಪಾವಳಿ, ಕೆಲವು ವಿಶೇಷ ಸಂದರ್ಭಗಳಲ್ಲಿ ಮುಟ್ಟಿನ ನೆಪವೊಡ್ಡಿ ಹೆಣ್ಣುಮಕ್ಕಳನ್ನು ಗ್ರಾಮದಿಂದ ಹೊರ ಕಳಿಸುವ ಪದ್ಧತಿ ಇದೆ. ಆರು ತಿಂಗಳ ಹಿಂದೆ ಇದು ಬೆಳಕಿಗೆ ಬಂದ ನಂತರ ಇಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿದೆ. ಇತ್ತೀಚೆಗೆ ಇಂತಹ ಪ್ರಕರಣಗಳು ವರದಿಯಾಗಿಲ್ಲ.

ಶೌಚಗೃಹವೂ ಬೇಡವಂತೆ!

ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಗೊಲ್ಲರಹಟ್ಟಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿನ ಕಾಡುಗೊಲ್ಲರು ಮುಟ್ಟಾದ ಹೆಣ್ಣು ಮಕ್ಕಳನ್ನು ಹಟ್ಟಿಗಳಿಂದ ಹೊರಗಿಡುತ್ತಾರೆ. ಇಲ್ಲಿನ ಬಹುತೇಕ ಎಲ್ಲ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಈ ಆಚರಣೆ ಇದೆ. ಇತ್ತೀಚಿನ ದಿನಗಳಲ್ಲಿ ಶೌಚಗೃಹಗಳನ್ನು ನಿರ್ವಿುಸಿಕೊಳ್ಳಲು ಗೊಲ್ಲರು ಹಿಂದೇಟು ಹಾಕುತ್ತಿರುವ ಪ್ರಕರಣವೂ ಬೆಳಕಿಗೆ ಬಂದಿವೆ.

ತಡೆದರೂ ಉಳಿದಿದೆ ಅನಿಷ್ಟ ಆಚರಣೆ

ಬಳ್ಳಾರಿ ಜಿಲ್ಲೆಯ ಸಂಡೂರು ಹಾಗೂ ಕೂಡ್ಲಿಗಿ ತಾಲೂಕಿನಲ್ಲಿ ಗೊಲ್ಲರಹಟ್ಟಿಗಳಲ್ಲಿ 2015ರವರೆಗೆ ಮುಟ್ಟಿನ ಸಂದರ್ಭದಲ್ಲಿ ಅನಿಷ್ಟ ಆಚರಣೆಗಳನ್ನು ತೀವ್ರವಾಗಿ ಆಚರಿಸಲಾಗುತ್ತಿತ್ತು. ಅನುಪಮಾ ಶೆಣೈ ಕೂಡ್ಲಿಗಿ ಡಿವೈಎಸ್ಪಿಯಾಗಿದ್ದಾಗ ಮಾನವ ಹಕ್ಕುಗಳ ಆಯೋಗದ ನೆರವಿನೊಂದಿಗೆ ಇಂಥ ಆಚರಣೆಗಳಿಗೆ ತಡೆಯೊಡ್ಡಿದ್ದರು. ಆದರೂ ಮುಟ್ಟಿನ ಸಂದರ್ಭದಲ್ಲಿ ಮನೆಯ ಹೊರಗೆ ಕೂರಿಸುವ ಆಚರಣೆಗಳು ಈಗಲೂ ಸಣ್ಣ ಪ್ರಮಾಣದಲ್ಲಿ ಚಾಲ್ತಿಯಲ್ಲಿವೆ.

ಜಾಗೃತಿ ಬಳಿಕವೂ ನಿಂತಿಲ್ಲ

ಮುಟ್ಟಾದ ಸಂದರ್ಭ ಮತ್ತು ಮಗುವಿಗೆ ಜನ್ಮನೀಡಿದ ನಂತರ ಮಹಿಳೆಯರನ್ನು ಹೊರಹಾಕುವ ಅನಿಷ್ಟ ಪದ್ಧತಿ ರಾಮನಗರ ಜಿಲ್ಲೆಯ ಬಹುತೇಕ ಗೊಲ್ಲರಹಟ್ಟಿಗಳಲ್ಲಿ ಜಾರಿಯಲ್ಲಿದೆ. ಬೆಂ. ಗ್ರಾಮಾಂತರ ಜಿಲ್ಲೆಯ ಕೆಂಗಲ್ ಗ್ರಾಮದಲ್ಲೂ ಈ ಪದ್ಧತಿ ಜೀವಂತವಾಗಿದೆ. ಮುಟ್ಟಾದಾಗ ಊರ ಹೊರಗೆ ಗುಡಿಸಲಲ್ಲಿ, ಸೂತಕದ ಮನೆಯಲ್ಲಿ ಇರಿಸಲಾಗುತ್ತಿದೆ. ಈ ಹಿಂದೆ ಹಲವು ಬಾರಿ ಈ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಡೆದವಾದರೂ ನಿಯಂತ್ರಣಕ್ಕೆ ಬಂದಿಲ್ಲ. ಅಧಿಕಾರಿಗಳು ಮತ್ತು ಸಮಾಜ ಸೇವಾ ಸಂಸ್ಥೆಗಳು ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದಾಗ ಪದ್ಧತಿ ನಿಲ್ಲಿಸುವ ಮಾತುಗಳನ್ನಾಡುವ ಮುಖಂಡರು ನಂತರ ಮುಂದುವರಿಸಿಕೊಂಡು ಹೋಗುತ್ತಾರೆ.

Leave a Reply

Your email address will not be published. Required fields are marked *

Back To Top