ತಿಂಗಳ ಕಿರಿಕಿರಿ ಸಹ್ಯವಾಗಲಿ

| ಡಾ. ಲತಾ ಪದ್ಯಾಣ 

ತಿಂಗಳ ಆ ದಿನಗಳು ಹತ್ತಿರ ಬಂತೆಂದರೆ ಮಹಿಳೆಯರಿಗೆ ಅದೇಕೋ ಬೇಜಾರು..ಒತ್ತಡ. ಗೊಂದಲದ ವಾತಾವರಣ ಸೃಷ್ಟಿಯಾಗುವುದು ಸಹಜ. ಮುಟ್ಟಿನ ಆ 3 ದಿನಗಳನ್ನು ಕಳೆಯುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ರಕ್ತಸ್ರಾವದ ಜತೆಗೆ ಕಿಬ್ಬೊಟ್ಟೆಯ ನೋವು, ಸುಸ್ತು, ತಲೆ ತಿರುಗುವುದು, ಕಾಲಿನ ಸ್ನಾಯುಗಳ ಸೆಳೆತ, ಕೂರಲೂ ಆಗದ ನಿಲ್ಲಲೂ ಆಗದ ಪರಿಸ್ಥಿತಿಯಲ್ಲಿ ಆಗಾಗ್ಗೆ ಪ್ಯಾಡ್​ಗಳನ್ನ ಬದಲಿಸಲು ಪಡುವ ಕಷ್ಟದೊಂದಿಗೆ ಮನಸ್ಥಿತಿಯ ಒತ್ತಡವೂ ಸೇರಿ ಯಾತನೆ ಅನುಭವಿಸುತ್ತಾರೆ.

ಋತುಚಕ್ರವು ಮಹಿಳೆಯರ ಜೀವನದ ಮಹತ್ವದ ಘಟ್ಟ, ಒಂದು ನೈಸರ್ಗಿಕ ಕ್ರಿಯೆ. ಪ್ರತಿ ತಿಂಗಳು ಮುಟ್ಟಾಗುವುದು ಸಹಜ. ಆಗದಿರುವುದೇ ಏರುಪೇರಾಗಿರುವುದರ ಸೂಚನೆ. ಆರೋಗ್ಯವಂತ ಮಹಿಳೆಯ ಚಕ್ರವು 28 ದಿನಗಳಾಗಿದ್ದು ಸಹಜವಾಗಿ 3ರಿಂದ 5 ದಿನಗಳವರೆಗೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ತಪ್ಪಾದ ಜೀವನಶೈಲಿ ಹಾಗೂ ಆಹಾರಪದ್ಧತಿಗಳಿಂದಾಗಿ ಹೆಣ್ಣು ಮಕ್ಕಳು ಪ್ರತಿ ತಿಂಗಳು ಸರಿಯಾಗಿ ಮುಟ್ಟು ಆಗುತ್ತಾರೋ ಇಲ್ಲವೋ ಎಂಬ ಹಂತಕ್ಕೆ ತಲುಪಿದ್ದೇವೆ. ಜತೆಗೆ, ಋತುಚಕ್ರದ ಏರುಪೇರು, ವಿಪರೀತ ರಕ್ತಸ್ರಾವ ಅಥವಾ ರಕ್ತಸ್ರಾವ ಇಲ್ಲದಿರುವಿಕೆ ಸಹ ಸಾಮಾನ್ಯವಾಗುತ್ತಿವೆ. ಇವು ಇನ್ಯಾವುದೋ ರೋಗಗಳ ಲಕ್ಷಣಗಳಾಗಿರಲೂಬಹುದು ಎನ್ನುವುದು ಆತಂಕಕಾರಿ ಅಂಶ.

ಸಾಮಾನ್ಯ ಕಿರಿಕಿರಿಗಳು

ಸಾಮಾನ್ಯವಾಗಿ, ಮುಟ್ಟಾಗುವ 1 ವಾರದ ಮೊದಲೇ ಮಹಿಳೆಯರಿಗೆ ಅದರ ಬಗ್ಗೆ ಸೂಚನೆ ಸಿಕ್ಕಿರುತ್ತದೆ. ಹಲವರಿಗೆ ಕಿಬ್ಬೊಟ್ಟೆಯಲ್ಲಿ ನೋವು, ವಿಪರೀತ ಕೋಪ ಅಥವಾ ಡಿಪ್ರೆಷನ್, ತಲೆನೋವು ಕಾಣಿಸಿಕೊಂಡರೆ ಕೆಲವರಿಗೆ ಬೆನ್ನು ನೋವು, ಬಿಳಿ ಸೆರಗು ಹೋಗುವುದು, ಕಾಲಿನಲ್ಲಿ ಸೆಳೆತ, ಅತಿಯಾದ ಸುಸ್ತು, ಕೆಲಸ ಮಾಡಲು ಉಲ್ಲಾಸ ಇಲ್ಲದಿರುವುದು ಮೊದಲ ಕೆಲವು ಲಕ್ಷಣಗಳಾಗಿವೆ. ಆದರೆ, ಕೆಲವು ನಿರ್ದಿಷ್ಟ ತೊಂದರೆಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದು.

ಡಿಸ್ಮೆನೊರಿಯಾ

ಋತುಚಕ್ರದ ಮೊದಲು ಅಥವಾ ಋತುಚಕ್ರದ ಸಮಯದಲ್ಲಿ ಉಂಟಾಗುವಂತಹ ನೋವಿನ ಸೆಳೆತಗಳನ್ನು ಡಿಸ್ಮೆನೊರಿಯಾ ಎನ್ನಲಾಗುತ್ತದೆ. ಗರ್ಭಾಶಯದ ಸಂಕುಚನದಿಂದಾಗಿ ಹೊಟ್ಟೆಯಲ್ಲಿ ಒತ್ತಡದ ಭಾವನೆ, ಕಿಬ್ಬೊಟ್ಟೆ ಹಾಗೂ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ನೋವು ಜಾಸ್ತಿಯಾದಾಗ ಅತಿಸಾರ, ಬೆವರುವುದು, ಡಿಹೈಡ್ರೇಷನ್, ತಲೆ ತಿರುಗುವುದು ಹಾಗೂ ವಾಂತಿ ಸಹ ಆಗುವುದು.

ಅಮೆನೋರಿಯಾ

ಅನಿಯಮಿತ ಋತುಚಕ್ರದ ಸಮಸ್ಯೆಯಾಗಿದ್ದು, ಸತತವಾಗಿ ಮೂರು ಋತುಚಕ್ರದ ಅವಧಿಯಲ್ಲಿ ಏರುಪೇರು ಕಾಣಿಸಿಕೊಳ್ಳುವುದು ಅಮೆನೋರಿಯಾ ಲಕ್ಷಣ.

ಮೆನೋರಾಜಿಯಾ

ಅತಿಯಾದ ಹಾಗೂ ದೀರ್ಘಾವಧಿ ಋತುಸ್ರಾವವಾಗುವುದು. ಇದು ಗರ್ಭಾಶಯದಲ್ಲಿ ಗಡ್ಡೆಗಳು, ಅನಿಮಿಯಾ, ಹಾರ್ವೇನುಗಳ ಅಸಮತೋಲನದಿಂದ ಕಂಡು ಬರುತ್ತದೆ.

ತೊಂದರೆಗೆ ಕಾರಣಗಳು

1) ಒತ್ತಡ 2)ಥೈರಾಯ್ಡ್  ಸಮಸ್ಯೆ 3)ಅನಿಮಿಯಾ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ 4) ಔಷಧಗಳ ವಿಪರೀತ ಸೇವನೆ  5) ಆಹಾರದ ಸಮಸ್ಯೆ 6)ಸುರಕ್ಷಿತ ಲೈಂಗಿಕ ಕ್ರಿಯೆ 7) ಗರ್ಭಕೋಶ ಸಂಬಂಧಿ ಕಾಯಿಲೆಗಳು

ಪರಿಹಾರೋಪಾಯಗಳು

ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹಲವು ತೊಂದರೆಗಳಿಗೆ ಪರಿಹಾರ ಹುಡುಕುವುದು ಕಷ್ಟಸಾಧ್ಯವಾದಾಗ ಎಷ್ಟೋ ಮಹಿಳೆಯರು ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ, ಕೆಲವೊಂದು ಸುಲಭ ಮಾರ್ಗಗಳನ್ನು ಅನುಸರಿಸುವುದರಿಂದಲೂ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಬಹುದು.

  1. ಪ್ರಕೃತಿದತ್ತ ಆಹಾರ ಸೇವನೆ ಅತ್ಯಗತ್ಯ. ಅತಿ ಖಾರ, ಎಣ್ಣೆಯ ಪದಾರ್ಥಗಳನ್ನು ವರ್ಜಿಸಬೇಕು. ಹಣ್ಣು, ತರಕಾರಿಗಳ ಸೇವನೆ ಹೆಚ್ಚಿನ ಪ್ರಮಾಣದಲ್ಲಿರಬೇಕು.
  2. ಜೀವಸತ್ವಗಳು, ಖನಿಜಗಳು, ಪ್ರೊಟೀನ್ ಹಾಗೂ ಕಬ್ಬಿಣದ ಅಂಶಗಳು ಹೇರಳವಾಗಿರುವ ಆಹಾರಗಳನ್ನು ಸೇವಿಸಬೇಕು.
  3. ಶುಂಠಿಯು ನೈಸರ್ಗಿಕ ನೋವು ನಿವಾರಕವಾಗಿದ್ದು, ಆಹಾರದಲ್ಲಿ ಬಳಕೆ ಮಾಡಬೇಕು. ಕುದಿಸಿದ ಜೀರಿಗೆ ನೀರನ್ನು ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ.
  4. ಮುಟ್ಟಿನ ದಿನ ಹತ್ತಿರವಿರುವಾಗ ಪಪ್ಪಾಯಿ ಹಣ್ಣು ಸೇವಿಸುವುದರಿಂದ ಸಮಯಕ್ಕೆ ಸರಿಯಾಗಿ ಮುಟ್ಟನ್ನು ಹೊಂದಬಹುದು.
  5. ಮುಟ್ಟಿನ ಸಮಯದಲ್ಲಿ ಡಿಹೈಡ್ರೇಷನ್ ಆಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಗೂ ಜ್ಯೂಸ್ ಸೇವನೆಯೂ ಮುಖ್ಯ.
  6. ಕೋಲ್ಡ್ ಅಬ್ದೊಮನ್ ಪ್ಯಾಕ್ ಸಹ ನೋವು ಕಡಿಮೆ ಮಾಡುವುದರೊಂದಿಗೆ ಸರಿಯಾದ ಪ್ರಮಾಣದಲ್ಲಿ ರಕ್ತಸ್ರಾವವಾಗುವಂತೆ ಮಾಡುತ್ತದೆ.
  7. ಆಕ್ಯುಪಂಕ್ಚರ್ ಮಾಡಿಸಿಕೊಳ್ಳುವುದರಿಂದ ಅನಿಮಿಯತ ಮುಟ್ಟು ಸಮಸ್ಯೆ ನಿಂತು, ತಿಂಗಳಿಗೊಮ್ಮೆ ನಿಯಮಿತವಾಗಿ ಮುಟ್ಟು ಹೊಂದಲು ಸಾಧ್ಯ.
  8. ತಣ್ಣೀರಿನ ಕಟಿಸ್ನಾನದಿಂದ ಹಾರ್ವೇನುಗಳ ಸಮತೋಲನವಾಗಿ ಮುಟ್ಟಿನ ತೊಂದರೆಗಳನ್ನು ನಿವಾರಿಸಬಹುದು.
  9. ಆ ಸಂದರ್ಭದಲ್ಲಿ ಆಗುವಂತಹ ಮನಸ್ಸಿನ ಚಂಚಲತೆ ನಿವಾರಿಸಲು ಯೋಗ, ಧ್ಯಾನವು ಸಹಾಯ ಮಾಡುತ್ತದೆ.
  10. ಹೊಟ್ಟೆಯ ಮಾಂಸಖಂಡಗಳನ್ನು ಬಲಗೊಳಿಸುವ ವ್ಯಾಯಾಮಗಳನ್ನು ಪ್ರತಿದಿನ ಮಾಡಬೇಕು.
  11. ಲ್ಯಾವೆಂಡರ್ ಎಣ್ಣೆಯನ್ನು ನೋವಿನ ಸಂದರ್ಭದಲ್ಲಿ ಹಚ್ಚುವುದರಿಂದ 10ರಿಂದ 15 ನಿಮಿಷಗಳಲ್ಲಿ ನೋವಿಗೆ ಮುಕ್ತಿ ದೊರೆಯುವುದು.