
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಗ್ರಾಮೀಣ ಮಾದರಿ ಕ್ಷೇತ್ರವನ್ನಾಗಿ ಮಾಡಲು ಎಲ್ಲ ರೀತಿಯ ಮೂಲಸೌಲಭ್ಯ ಕಲ್ಪಿಸಿ ಶೈಕ್ಷಣಿಕ ವ್ಯವಸ್ಥೆ ಮೇಲ್ದರ್ಜೆಗೇರಿಸಬೇಕು. ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ವಾರ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ 2 ಕಡೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸುವ ಮೂಲಕ ಗುಣಮಟ್ಟದ ಶಿಕ್ಷಣ ಒದಗಿಸುವತ್ತ ಹೆಜ್ಜೆ ಹಾಕುತ್ತಿದ್ದೇವೆ. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ವರ್ಗಗಳ ಮಕ್ಕಳಿಗೆ ವಸತಿಶಾಲೆ ಆರಂಭಿಸಲಾಗಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳನ್ನು ಜ್ಞಾನ, ಕೌಶಲ ಮತ್ತು ಉತ್ತಮ ವ್ಯಕ್ತಿತ್ವದ ರೂಪಿಸಿ ಜವಾಬ್ದಾರಿಯುತ ನಾಗರಿಕರನ್ನಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಮಗ್ರ ಅಭಿವೃದ್ಧಿಯುಳ್ಳ ಕಲಿಕಾ ವಾತಾವರಣ ಸೃಷ್ಟಿಸುವುದು ನಮ್ಮ ಗುರಿಯಾಗಿದ್ದು, ಹಿರೇಬಾಗೇವಾಡಿಗೆ ಕಳೆದ 7 ವರ್ಷದಲ್ಲಿ ಬಹಳಷ್ಟು ಯೋಜನೆ ತರಲಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ತಾಲೂಕು ಕೇಂದ್ರದ ರೀತಿಯಲ್ಲಿ ಹಿರೇಬಾಗೇವಾಡಿ ಬೆಳೆಯಬೇಕು. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಉದ್ದೇಶಿಸಲಾಗಿದೆ. ಇದರಿಂದ ಸರ್ಕಾರ ಹೆಚ್ಚಿನ ಅನುದಾನ ನೀಡಬಹುದು ಎಂದರು.
ಅಶ್ರಫ್ ಪೀರ್ ಖಾದ್ರಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿ.ಸಿ.ಪಾಟೀಲ, ಸುರೇಶ ಇಟಗಿ, ಮಹಮ್ಮದ್ ಅಲಿ ಕರಿದಾವಲ್, ಅಡಿವೇಶ ಇಟಗಿ, ಶ್ರೀಕಾಂತ ಮಾಧುಭರಮಣ್ಣವರ, ಜಯಶ್ರೀ ಜಪ್ತಿ, ಬಿ.ಎನ್.ಪಾಟೀಲ, ಗೌಸಮೋದ್ದಿನ್ ಜಾಲಿಕೊಪ್ಪ, ಪ್ರಕಾಶ ಜಪ್ತಿ, ವೈ.ಎಲ್.ಪಾಟೀಲ, ಎನ್.ಎಫ್.ಕಂಠಿ, ಖತಾಲ್ ಗೋವೆ, ನಿಂಗಪ್ಪ ತಳವಾರ, ಬಿ.ಜಿ.ವಾಲಿಇಟಗಿ, ಮನ್ಸೂರ್ ಅತ್ತಾರ, ರಾಜು ಪಾಟೀಲ ಇತರರಿದ್ದರು.