ತಿಂಗಳು ಕಳೆದರೂ ಪೂರೈಕೆಯಾಗದ ಕೆಎಫ್​ಡಿ ಲಸಿಕೆ

ಕೊಪ್ಪ: ಹೇರೂರು, ಬಸ್ರೀಕಟ್ಟೆ, ಕೆಸವೆ, ಸಿದ್ಧರಮಠ ಭಾಗದಲ್ಲಿ ತಿಂಗಳ ಹಿಂದೆ ಕೆಎಫ್​ಡಿ ಸೋಂಕು ಪತ್ತೆಯಾಗಿದ್ದು, ಈವರೆಗೂ ಲಸಿಕೆ ಪೂರೈಕೆಯಾಗಿಲ್ಲ ಎಂದು ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್ ಸೇರಿ ಎಲ್ಲ ಸದಸ್ಯರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಎನ್.ಕೆ.ಉದಯ್, ತಿಂಗಳ ಹಿಂದೆ ಹೇರೂರಿನ ವ್ಯಕ್ತಿಯೊಬ್ಬರಲ್ಲಿ ಕೆಎಫ್​ಡಿ ಸೋಂಕು ಪತ್ತೆಯಾಗಿತ್ತು. ಮುಂಜಾಗೃತಾ ಕ್ರಮವಾಗಿ ಆ ಭಾಗದ 200 ಮಂದಿಗೆ ಮಾತ್ರ ಈವರೆಗೆ ಲಸಿಕೆ ನೀಡಲಾಗಿದೆ. ಅಲ್ಲಿ ಜನಸಂಖ್ಯೆ ಜಾಸ್ತಿ ಇದ್ದರೂ ಉಳಿದವರಿಗೆ ಇನ್ನೂ ಲಸಿಕೆ ನೀಡಿಲ್ಲ. ಕೂಡಲೇ ಲಸಿಕೆ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಉದಯ್ ಮಾತಿಗೆ ಎಲ್ಲ ಸದಸ್ಯರೂ ಧ್ವನಿಗೂಡಿಸಿ, ಸಾಗರ ತಾಲೂಕಿನಲ್ಲಿ ಮಂಗನಕಾಯಿಲೆಯಿಂದ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಸಾಗರದ ಪರಿಸ್ಥಿತಿ ಉದ್ಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಅಧಿಕಾರಿ ವಿ.ಡಿ.ಲಿಸ್ಸಿ, ಆರೋಗ್ಯ ಇಲಾಖೆಯಿಂದ ಶಿವಮೊಗ್ಗದ ಕೆಎಚ್​ಎಸ್​ಡಿಆರ್​ಎಸ್ ಕೇಂದ್ರಕ್ಕೆ 5000 ಕೆಎಫ್​ಡಿ ಲಸಿಕೆ ಪೂರೈಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈವರೆಗೂ ಲಸಿಕೆ ಸರಬರಾಜು ಮಾಡಿಲ್ಲ. ವಾರದೊಳಗೆ ಪೂರೈಕೆಯಾಗುವ ಸಾಧ್ಯತೆಯಿದೆ. ಬಂದ ಕೂಡಲೇ ಲಸಿಕೆ ನೀಡಲು ಕ್ರಮ ವಹಿಸಲಾಗುವುದು ಎಂದರು.

ಮಾರ್ಚ್ 10ರಂದು ತಾಲೂಕಿನಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಸಾರ್ವಜನಿಕ ಆಸ್ಪತ್ರೆ, ಬಸ್​ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಶಾಲೆಗಳಲ್ಲಿ ಲಸಿಕೆ ನೀಡಲಾಗುವುದು. ಅಭಿಯಾನ ಶೇ.100ರಷ್ಟು ಯಶಸ್ವಿಯಾಗಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಸದಸ್ಯ ಬಿ.ಸುಧಾಕರ್, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಬಿಸಿಎಂ, ಸಹಕಾರ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ತಾಪಂ ಸದಸ್ಯರಾದ ಮಧುರಾ ಶಾಂತಪ್ಪ, ಭವಾನಿ ಆರ್. ಹೆಬ್ಬಾರ್, ಎಚ್.ಎಸ್.ಪ್ರವೀಣ್​ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಇತರರು ಹಾಜರಿದ್ದರು.