ಶ್ರೀಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ

ಮೇಲುಕೋಟೆ: ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ ಇಲ್ಲಿನ ಪಂಚಕಲ್ಯಾಣಿಯಲ್ಲಿ ಶ್ರೀಚೆಲುವನಾರಾಯಣ ಸ್ವಾಮಿ ತೆಪ್ಪೋತ್ಸವ ಬುಧವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

ಸಂಜೆ ದೇವಾಲಯದಲ್ಲಿ ಉತ್ಸವ ಮೂರ್ತಿ ಶ್ರೀಚೆಲುವನಾರಾಯಣಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಂತರ ಉತ್ಸವಮೂರ್ತಿಯನ್ನು ದೇವಾಲಯದಿಂದ ಪಂಚ ಕಲ್ಯಾಣಿವರೆಗೂ ಮೆರವಣಿಗೆ ಮೂಲಕ ತಂದು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದ ತೆಪ್ಪದಲ್ಲಿ ಕೂರಿಸಲಾಯಿತು. ಬಳಿಕ ಪಂಚ ನಾದಸ್ವರ ಹಾಗೂ ವೇದಘೋಷಗಳನ್ನು ಪಠಿಸಿ ಪೂಜಾ ಕೈಂಕರ್ಯ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.ಕಲ್ಯಾಣಿಯಲ್ಲಿ ತೆಪ್ಪವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿಸಲಾಯಿತು. ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಗೋವಿಂದ ಗೋವಿಂದ ಎಂದು ಕೂಗಿ ಭಕ್ತಿ ಮೆರೆದರು.

ಬೇಸರ : ಮೈಸೂರು ಅರಸ ಆಳ್ವಿಕೆಯ ಕಾಲದಲ್ಲಿ ತೆಪ್ಪೋತ್ಸವ ವೇಳೆ ಪಂಚಕಲ್ಯಾಣಿ ಮೆಟ್ಟಿಲುಗಳ ಮೇಲೆ ಮಣ್ಣಿನ ದೀಪಗಳನ್ನು ಇಟ್ಟು ಬೆಳಗಿಸಲಾಗುತ್ತಿತ್ತು. ಈ ಸಂಪ್ರದಾಯವನ್ನು ಕೆಲ ವರ್ಷಗಳ ಕಾಲ ದೇವಾಲಯದ ಆಡಳಿತ ಮಂಡಳಿ ನಡೆಸುತ್ತಿತ್ತು. ಈ ವೇಳೆ ತೆಪ್ಪೋತ್ಸವ ನೋಡಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಕ್ರಮೇಣ ಈ ಸಂಪ್ರದಾಯವನ್ನು ಕೈ ಬಿಡಲಾಗಿದೆ.