ಮಳೆಹಾನಿ ಪ್ರದೇಶಕ್ಕೆ ಶಾಸಕರ ಭೇಟಿ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಸ್.ರಾಮಪ್ಪ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳೆ ನಷ್ಟ ವೀಕ್ಷಿಸಿದರು.

ಗೋವಿನಹಾಳು ಗ್ರಾಮದ ಹೊರವಲಯದಲ್ಲಿ ತುಂಗಭದ್ರಾ ನದಿ ನೀರು ರಸ್ತೆ ಮೇಲೆ ಹರಿಯುವ ಪ್ರದೇಶ, ಹಾನಿಗೊಳಗಾದ ಮನೆ, ಅಡಕೆ ತೋಟ, ಭತ್ತದ ಗದ್ದೆ, ಹೂತೋಟಗಳನ್ನು ವೀಕ್ಷಿಸಿ, ಬೆಳೆ ನಷ್ಟದ ಅಂದಾಜು ನಡೆಸುವಂತೆ ತಹಸೀಲ್ದಾರ್ ರೆಹಾನ್ ಪಾಷಾ ಅವರಿಗೆ ಸೂಚಿಸಿದರು.

ಫತ್ಯಾಪುರ-ಉಕ್ಕಡಗಾತ್ರಿ, ತುಮ್ಮಿನಕಟ್ಟೆ-ಉಕ್ಕಡಗಾತ್ರಿ ನಡುವೆ ಎತ್ತರದ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು, ಉಕ್ಕಡಗಾತ್ರಿ ದೇವಸ್ಥಾನದ ಬಳಿ ನದಿಗೆ ತಡೆಗೋಡೆ ನಿರ್ಮಿಸುವಂತೆ ಟ್ರಸ್ಟ್ ಕಾರ್ಯದರ್ಶಿ ಸುರೇಶ್ ಮನವಿ ಮಾಡಿದರು.

ತಡೆಗೋಡೆ ನಿರ್ಮಾಣಕ್ಕೆ 1.90 ಕೋಟಿ ರೂ. ವೆಚ್ಚದ ಯೋಜನೆ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಶಾಸಕ ರಾಮಪ್ಪ ಭರವಸೆ ನೀಡಿದರು.

ರಸ್ತೆ ಸಂಪರ್ಕ ಕಡಿತಗೊಂಡ ಉಕ್ಕಡಗಾತ್ರಿಗೆ ಸಂಗಾಪುರ ಮೂಲಕ ತೆರಳಿ ನದಿ ನೀರು ನುಗ್ಗಿದ ಪ್ರದೇಶಕ್ಕೆ ಶಾಸಕರು ಭೇಟಿ ನೀಡಿದರು.
ಎಪಿಎಂಸಿ ಅಧ್ಯಕ್ಷ ನರೇಂದ್ರ, ಉಪಾಧ್ಯಕ್ಷ ಬಸವರಾಜ್, ಸದಸ್ಯ ರುದ್ರಗೌಡ, ಕಂದಾಯ ನಿರೀಕ್ಷಕ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬಿದ್ ಅಲಿ, ಪುರಸಭೆ ಸದಸ್ಯ ದಾದಾವಲಿ, ಗ್ರಾಮಸ್ಥರು ಇದ್ದರು.