ಖಾದಿ ಉತ್ಸವಕ್ಕೆ ಚಾಲನೆ

ಮೈಸೂರು: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಗರದ ಜೆಕೆ ಮೈದಾನದಲ್ಲಿ ನ.29ರವರೆಗೆ ಹಮ್ಮಿಕೊಂಡಿರುವ ‘ಖಾದಿ ಉತ್ಸವ-2018’ಕ್ಕೆ ಗುರುವಾರ ಚಾಲನೆ ದೊರೆಯಿತು.

ಉತ್ಸವದಲ್ಲಿ ಒಟ್ಟು 91 ಮಳಿಗೆಗಳನ್ನು ತೆರೆಯಲಾಗಿದ್ದು, ಈ ಪೈಕಿ 40 ಖಾದಿ, 51 ಗ್ರಾಮೋದ್ಯಮ ಮಳಿಗೆಗಳು ಇವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಹರಿಯಾಣದಿಂದ ನೇಕಾರರು, ಗುಡಿಕೈಗಾರಿಕೋದ್ಯಮಿಗಳು ಆಗಮಿಸಿದ್ದಾರೆ.

ಮೇಳದಲ್ಲಿ ಹರಳೆ ಖಾದಿ, ಪಾಲಿಸ್ಟಾರ್ ಖಾದಿ, ರೇಷ್ಮೆ ಖಾದಿಯ ವಸ್ತ್ರಗಳು, ಬಳ್ಳಾರಿ ಜೀನ್ಸ್, ರಾಷ್ಟ್ರಧ್ವಜ, ರೇಷ್ಮೆ ಸೀರೆಗಳು, ಕುರ್ತಾ, ಚೂಡಿದಾರ್, ಲುಂಗಿ, ಟವಲ್, ಚನ್ನಪಟ್ಟಣದ ಗೊಂಬೆಗಳು, ಮಣ್ಣಿನ ಉತ್ಪನ್ನಗಳು, ಆಯುರ್ವೇದ ಔಷಧಗಳು ಸೇರಿದಂತೆ ಹಲವು ಉತ್ಪನ್ನಗಳು ದೊರೆಯುತ್ತವೆ.

ಖಾದಿ ಉತ್ಸವಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಖಾದಿ ನಮ್ಮ ದೇಶದ ಸ್ವಾತಂತ್ರೃ ಹೋರಾಟದ ಸಂಕೇತವಾಗಿದೆ. ನಾವು ಖಾದಿ ಉತ್ಪನ್ನಗಳನ್ನು ಬಳಕೆ ಮಾಡಿದರೆ ಸ್ವಾತಂತ್ರೃ ಹೋರಾಟಗಾರರಿಗೆ ಗೌರವ ನೀಡಿದಂತೆ ಎಂದು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗದಿಂದ ಗ್ರಾಮದ ಹಾಗೂ ಗ್ರಾಮೀಣ ಜನರ ಆರ್ಥಿಕ ಪ್ರಗತಿ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಗಾಂಧೀಜಿ ಖಾದಿ ಮತ್ತು ಗ್ರಾಮೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಸ್ವತಃ ಅವರೂ ಚರಕದಿಂದ ನೂಲು ತೆಗೆದು ಬಟ್ಟೆಯನ್ನು ತಯಾರಿಸಿಕೊಳ್ಳುತ್ತಿದ್ದರು. ಪ್ರತಿಯೊಬ್ಬರು ಖಾದಿಯನ್ನು ಬಳಕೆ ಮಾಡಿದರೆ ಈ ಉದ್ಯಮವನ್ನು ನಂಬಿ ಬದುಕುತ್ತಿರುವವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವುದು ಮಾತ್ರವಲ್ಲದೆ ನಿರುದ್ಯೋಗ ಸಮಸ್ಯೆ ಕೂಡ ದೂರವಾಗಲಿದೆ ಎಂದರು.

ಖಾದಿ ಉತ್ಪನ್ನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ವಿಶೇಷವಾಗಿ ಯುವ ಸಮುದಾಯದವರಲ್ಲಿ ಖಾದಿ ಬಗ್ಗೆ ಆಸಕ್ತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಾದಿ ಉತ್ಸವ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು. ಶಾಸಕ ಎಲ್. ನಾಗೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ್ ಇದ್ದರು.

ಕೋಟ್…
ಕಳೆದ ಬಾರಿಯ ಖಾದಿ ಉತ್ಸವದಲ್ಲಿ 2.70 ಕೋಟಿ ರೂ. ವಹಿವಾಟು ನಡೆದಿತ್ತು. ಈ ಬಾರಿ 4 ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ. ಖಾದಿ ಮತ್ತು ಗ್ರಾಮೋದ್ಯಮಿಗಳಿಗೆ ಹೊಸ ತಂತ್ರಜ್ಞಾನದ ಪರಿಚಯ ಮಾಡಿಕೊಡುವುದು ಹಾಗೂ ಹೊಸ ಗ್ರಾಹಕರನ್ನು ಸೆಳೆಯುವುದು ಖಾದಿ ಉತ್ಸವದ ಪ್ರಮುಖ ಉದ್ದೇಶವಾಗಿದೆ.
ಮಹಾಂತೇಶ್ ಕರೂರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ