ಮೇಕೆದಾಟುಗಾಗಿ ರಾಜ್ಯ ಸಂಸದರ ಒಗ್ಗಟ್ಟು

ನವದೆಹಲಿ: ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದನ್ನು ವಿರೋಧಿಸಿದ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಸಂಸತ್ ಭವನದ ಗಾಂಧಿ ಪ್ರತಿಮೆ ಎದುರು ರಾಜ್ಯದ ಸಂಸದರು ಒಗ್ಗಟ್ಟು ಪ್ರದರ್ಶಿಸಿದರು.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​ನ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ತಮಿಳುನಾಡು ಸಂಸತ್ತಿನಲ್ಲಿ ಗದ್ದಲವೆಬ್ಬಿಸುವ ಬದಲು ರಾಜ್ಯ ಸರ್ಕಾರದ ಜತೆಗೆ ಮಾತುಕತೆ ನಡೆಸಲು ಒಪ್ಪಿಗೆ ಸೂಚಿಸಬೇಕು. ವಿನಾಕಾರಣ ಪ್ರತಿಭಟನೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಗದ್ದಲ ಬೇಡ, ಮಾತುಕತೆ ಬೇಕು ಎಂದು ಘೊಷಣಾ ಪತ್ರಗಳನ್ನು ಹಿಡಿದು ತಮಿಳುನಾಡಿಗೆ ಸಂದೇಶ ರವಾನಿಸಿದರು. ಮೇಕೆದಾಟು ಯೋಜನೆಯಿಂದ ಕರ್ನಾಟಕದಷ್ಟೇ ತಮಿಳು ನಾಡಿಗೂ ಲಾಭವಿದೆ. ಈ ವಾಸ್ತವ ತಿಳಿದಿದ್ದರೂ ರಾಜಕೀಯ ಲಾಭಕ್ಕಾಗಿ ತಮಿಳುನಾಡಿನ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿ ಆ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಅಭಿಪ್ರಾಯಪಟ್ಟರು.

ನನ್ನ ಬೈಟ್ ತಗೊಳ್ಳಿ: ಮಂಡ್ಯದ ನೂತನ ಸಂಸದ ಶಿವರಾಮೇಗೌಡರು, ಟಿವಿ ಮಾಧ್ಯಮಗಳಿಗೆ ಬಹಳ ಆಸಕ್ತಿಯಿಂದ ಹೇಳಿಕೆ (ಬೈಟ್) ನೀಡುತ್ತಿದ್ದ ದೃಶ್ಯ ಕಂಡು ಬಂತು. ಎಲ್ಲ್ಲ ಟಿವಿ ವಾಹಿನಿಯವರೂ ನನ್ನ ಬೈಟ್ ತೆಗೆದು ಕೊಳ್ಳಲೇಬೇಕು ಎಂದು ವರದಿಗಾರರ ಬೆನ್ನುಬಿದ್ದು ಮೇಕೆ ದಾಟು ಯೋಜನೆ ಪರ ಭರ್ಜರಿ ಬ್ಯಾಟಿಂಗ್ ಮಾಡಿದರು!