ಬೆಂಗಳೂರು: ಭವಿಷ್ಯದಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆ, ಜಲವಿದ್ಯುತ್ ಯೋಜನೆ ಮತ್ತು ನೀರು ಸಂಗ್ರಹಣೆ ಸೇರಿ ಹಲವು ಕಾರಣಗಳಿಗಾಗಿ ಮೇಕದಾಟು ಯೋಜನೆ ಕರ್ನಾಟಕದ ಪಾಲಿಗೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ತನ್ನ ಈ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ವಿಸõತ ಯೋಜನಾ ವರದಿ (ಡಿಪಿಆರ್) ಅಗತ್ಯ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ವರದಿ ಸಲ್ಲಿಕೆಯಾಗಿ ವರ್ಷ ಕಳೆದರೂ, ಇದನ್ನು ಅನುಮೋದಿಸುವ ಬಗ್ಗೆ ಕೇಂದ್ರ ಸರ್ಕಾರ ಜಾಣಮೌನಕ್ಕೆ ಶರಣಾಗಿದೆ.
80 ಟಿಎಂಸಿ ಬೇಕು: 2050ರ ಹೊತ್ತಿಗೆ ಬೆಂಗಳೂರಿಗೆ ಕುಡಿವ ನೀರು ಪೂರೈಸಲು 80 ಟಿಎಂಸಿ ನೀರು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿಗೆ ಅಗತ್ಯ ಪ್ರಮಾಣದ ನೀರು ಪಡೆಯಲು ಕಾವೇರಿ ನ್ಯಾಯಾಧಿಕರಣ ತನ್ನ ಅಂತಿಮ ತೀರ್ಪಿನಲ್ಲಿ ಅನುಮತಿ ನೀಡಿದೆ. ಈಗಿರುವ ಯೋಜನೆಗಳಿಂದ 23 ಟಿಎಂಸಿ ಮಾತ್ರ ಪಡೆದುಕೊಳ್ಳಲು ಸಾಧ್ಯ. ಆದರೆ, ಉಳಿದ ನೀರನ್ನು ಎಲ್ಲಿಂದ ಪಡೆಯುವುದು ಎಂಬ ಪ್ರಶ್ನೆಗೆ ಮೇಕೆದಾಟು ಯೋಜನೆ ಉತ್ತರವಾಗಿದೆ.
67 ಟಿಎಂಸಿ ಸಂಗ್ರಹ: ಮೇಕೆದಾಟು ಯೋಜನೆಯಡಿ ಬಿಳಿಗೊಂಡ್ಲುಗೆ ಮುನ್ನ ಮೇಕದಾಟುವಿನಲ್ಲಿ ಅಣೆಕಟ್ಟೆ ನಿರ್ವಿುಸಿ 65 ಟಿಎಂಸಿ ನೀರು ಸಂಗ್ರಹಿಸಬಹುದು. ಅದಕ್ಕಾಗಿ ಡಿಪಿಎಆರ್ ತಯಾರು ಮಾಡಲಾಗಿದೆ. ಕಂದಾಯ ಭೂಮಿ 280 ಎಕರೆ ಸೇರಿ ಒಟ್ಟು 5,200 ಹೆಕ್ಟೇರ್ ಭೂಮಿ ಈ ಯೋಜನೆಗಾಗಿ ಮುಳುಗಡೆಯಾಗುತ್ತದೆ ಎಂದು ಹೇಳಲಾಗಿದೆ.
9 ಸಾವಿರ ಕೋಟಿ ರೂ. ವೆಚ್ಚ: ಕೇಂದ್ರ ಜಲ ಆಯೋಗಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ ಡಿಪಿಆರ್ ಪ್ರಕಾರ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ 9 ಸಾವಿರ ಕೋಟಿ ರೂ. ಅಗತ್ಯವಾಗಿದೆ. ಯೋಜನೆಗೆ ಅನುಮತಿ ಕೋರಿರುವ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕೇಂದ್ರದಿಂದ ಆರ್ಥಿಕ ನೆರವು ಕೇಳಿಲ್ಲ. ಯೋಜನೆ ಅನುಷ್ಠಾನಕ್ಕೆ ಕೇಂದ್ರ ಪರಿಸರ ಇಲಾಖೆ ಅನುಮತಿಯೂ ಕಡ್ಡಾಯವಾಗಿರುವ ಕಾರಣ, ಆ ಇಲಾಖೆಗೂ ಪ್ರಸ್ತಾವನೆಯನ್ನು ಕಳಿಸಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.
ಹೆಚ್ಚುವರಿ ನೀರು ಸಂಗ್ರಹಕ್ಕೆ ಆಸ್ಪದವಿಲ್ಲ: ಕಾವೇರಿ ನ್ಯಾಯಾಧಿಕರಣ ತೀರ್ಪಿನ ಪ್ರಕಾರ ತಮಿಳುನಾಡಿಗೆ 177 ಟಿಎಂಸಿ ನೀರು ಹರಿಸಬೇಕು. ಮಳೆ ಹೆಚ್ಚಾದಾಗ 100 ರಿಂದ 200 ಟಿಎಂಸಿ ನೀರು ತಮಿಳುನಾಡಿಗೆ ಅನಾಯಾಸವಾಗಿ ಹರಿದು ಹೋಗುತ್ತದೆ. ರಾಜ್ಯದಿಂದ ಹರಿಯುವ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲು ತಮಿಳುನಾಡಿನಲ್ಲಿ ಪರ್ಯಾಯ ವ್ಯವಸ್ಥೆಗಳಿಲ್ಲ.
ತಮಿಳುನಾಡು ಅಡ್ಡಗಾಲು
ಮೇಕೆದಾಟು ಯೋಜನೆಗೆ ಪ್ರಾರಂಭದಿಂದಲೂ ತಮಿಳುನಾಡು ಅಡ್ಡಗಾಲು ಹಾಕುತ್ತಲೇ ಇದೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೂ ಅನುಕೂಲ ಆಗಲಿದೆ ಎಂಬ ಕರ್ನಾಟಕದ ವಾದವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಅರ್ಥಮಾಡಿಕೊಳ್ಳಲು ಅದು ಸುತರಾಂ ಸಿದ್ಧವಿಲ್ಲ. ಈ ಯೋಜನೆಯನ್ನು ಅದು ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿದೆ. ಸುಪ್ರೀಂಕೋರ್ಟ್ನಲ್ಲಿ ಈ ಬಗ್ಗೆ ಅದು ತಕರಾರು ಅರ್ಜಿ ಸಲ್ಲಿಸಿದ್ದು ವಿಚಾರಣೆ ಹಂತದಲ್ಲಿದೆ.
115 ಟಿಎಂಸಿ ನೀರು ಸಂಗ್ರಹಿಸಬಹುದು
ಕಾವೇರಿ ಕಣಿವೆಯ ಕೆಆರ್ಎಸ್, ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳಲ್ಲಿ 115 ಟಿಎಂಸಿ ನೀರು ಸಂಗ್ರಹಿಸಿಡಬಹುದು. ಅದಕ್ಕಿಂತ ಹೆಚ್ಚು ನೀರು ಬಂದರೆ ತಮಿಳುನಾಡಿಗೆ ಹರಿಸಲೇಬೇಕಾದ ಅನಿವಾರ್ಯತೆ ರಾಜ್ಯದ್ದು. ಈ ಕಾರಣಕ್ಕಾಗಿ ಮೇಕೆದಾಟು ಯೋಜನೆ ಮಹತ್ವ ಪಡೆದುಕೊಳ್ಳುತ್ತದೆ. ಬಿಳಿಗೊಂಡ್ಲುಗೆ ಮುನ್ನ ಮೇಕೆದಾಟು ಬಳಿ ಜಲಾಶಯ ನಿರ್ವಿುಸಿ ಹೆಚ್ಚುವರಿ ನೀರು ಹಿಡಿದಿಟ್ಟು, ವಿದ್ಯುತ್ ಉತ್ಪಾದನೆಗೆ ಬಳಸಬಹುದು. ತಮಿಳುನಾಡಿಗೆ ಅಗತ್ಯವಾದಾಗ ಅಲ್ಲಿಂದ ನೀರು ಹರಿಸಬಹುದು ಎಂಬುದು ರಾಜ್ಯದ ಲೆಕ್ಕಾಚಾರ. ಬೆಂಗಳೂರಿಗೆ ಅಗತ್ಯ ಪ್ರಮಾಣದ ನೀರು ಪಡೆಯಲು ಕಾವೇರಿ ನ್ಯಾಯಾಧಿಕರಣ ತನ್ನ ಅಂತಿಮ ತೀರ್ಪಿನಲ್ಲಿ ಅನುಮತಿ ನೀಡಿದೆ. ಈಗಿರುವ ಯೋಜನೆಗಳಿಂದ ಕೇವಲ 23 ಟಿಎಂಸಿ ಮಾತ್ರ ಪಡೆದು ಕೊಳ್ಳಲು ಸಾಧ್ಯ. ಆದರೆ, ಉಳಿದ ನೀರನ್ನು ಎಲ್ಲಿಂದ ಪಡೆಯುವುದು ಎಂಬ ಪ್ರಶ್ನೆಗೆ ಮೇಕೆದಾಟು ಯೋಜನೆಯೊಂದೇ ಉತ್ತರವಾಗಿದೆ.
| ಶಿವಾನಂದ ತಗಡೂರು