ಮೇಕೆದಾಟು ಯೋಜನೆಗೆ ಒತ್ತಾಯಿಸಿ ಸಂಸತ್‌ ಎದುರು ರಾಜ್ಯದ ಸಂಸದರಿಂದ ಪ್ರತಿಭಟನೆಗೆ ನಿರ್ಧಾರ

ನವದೆಹಲಿ: ಮೇಕೆದಾಟು ವಿಚಾರವಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ದೆಹಲಿ ನಿವಾಸದಲ್ಲಿ ನಡೆದ ರಾಜ್ಯದ ಸರ್ವಪಕ್ಷ ಸಂಸದರ ಸಭೆಯು ಮುಕ್ತಾಯವಾಗಿದ್ದು, ಡಿ. 27ರಂದು ರಾಜ್ಯದ ಸಂಸದರಿಂದಲೂ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಮೇಕೆದಾಟು ಯೋಜನೆ ಪರ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಸಭೆ ಬಳಿಕ ಮಾತನಾಡಿದ ಸದಾನಂದಗೌಡ ಅವರು ಪ್ರತಿಕ್ರಿಯಿಸಿ, ಮೇಕೆದಾಟು, ಮಹದಾಯಿ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. ಮೇಕೆದಾಟು ವಿಚಾರದಲ್ಲಿ ರಾಜ್ಯ ಹೇಗೆ ಕೆಲಸ ಮಾಡಬೇಕು. ಮೇಕೆದಾಟು ನೀರನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ಕುರಿತು ಚರ್ಚಿಸಲಾಗಿದೆ. ಕಳಸಾ-ಬಂಡೂರಿ ಯೋಜನೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಮೇಕೆದಾಟು ವಿಚಾರವಾಗಿ ಡಿ. 27ಕ್ಕೆ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಸಂಸತ್​ನ ಗಾಂಧಿ ಪ್ರತಿಮೆ ಬಳಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಈ ಕುರಿತು ಟ್ವೀಟ್‌ ಮಾಡಿರುವ ಸಚಿವರು, ಇಂದು ನಡೆದ ರಾಜ್ಯದ ಸರ್ವ ಸಂಸದರ, ನೀರಾವರಿ ಸಚಿವರ, ಅಧಿಕಾರಿಗಳ ಸಭೆಯಲ್ಲಿ ರಾಜ್ಯದಲ್ಲಿ ಜಾರಿಯಾಗಬೇಕಾದ ನೀರಾವರಿ ಯೋಜನೆಗಳ ವಿಷಯದಲ್ಲಿ ಪಕ್ಷಾತೀತವಾಗಿ ಒಂದಾಗಿ. ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕ್ಕೊಂಡು ಒಗ್ಗಟ್ಟಿನಿಂದ ಯೋಜನೆ ಜಾರಿಯಾಗುವತ್ತ ದೃಢ ಹೆಜ್ಜೆ ಇಡಲು ನಿರ್ಧರಿಸಲಾಯಿತು ಎಂದಿದ್ದಾರೆ.

ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್‌ಚ್.ಡಿ ದೇವಗೌಡ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಅನಂತ‌ಕುಮಾರ್ ಹೆಗಡೆ, ಬಿ.ಕೆ ಹರಿಪ್ರಸಾದ್, ಶಿವರಾಮೇಗೌಡ, ಉಗ್ರಪ್ಪ, ಧ್ರುವನಾರಯಣ್, ಜಿ.ಜಿ. ಚಂದ್ರಶೇಖರ್, ಎಲ್ ಹನುಮಂತಯ್ಯ, ಕರಡಿ ಸಂಗಣ್ಣ, ರಾಜೀವ್ ಚಂದ್ರಶೇಖರ್, ಡಿ.ಕೆ. ಸುರೇಶ್, ಕೆ.ಸಿ. ರಾಮಮೂರ್ತಿ, ಬಿ.ವೈ. ರಾಘವೇಂದ್ರ, ಭಗವಂತ ಖೂಬಾ, ರಾಜೀವ್ ಗೌಡ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರರು ಭಾಗವಹಿಸಿದ್ದರು.

ಕೇಂದ್ರ ಸರ್ಕಾರವು ಮೇಕೆದಾಟು ಯೋಜನೆಗೆ ಒಪ್ಪಿಗೆ ಸೂಚಿಸಿತ್ತು. ಆದರೆ, ತಮಿಳುನಾಡು ಸರ್ಕಾರವು ಇದಕ್ಕೆ ವಿರೋಧ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಚಳಿಗಾಲದ ಅಧಿವೇಶನದಲ್ಲಿಯೂ ಭಾರಿ ಕೋಲಾಹಲ ಎಬ್ಬಿಸಿದ್ದ ತಮಿಳುನಾಡು ಸಂಸದರು ಮೇಕೆದಾಟು ಯೋಜನೆ ವಿರೋಧಿಸಿ ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿದ್ದರು. (ದಿಗ್ವಿಜಯ ನ್ಯೂಸ್)