ಗುಂಪು ಹತ್ಯೆ ಮಾಡಬಹುದು ಜಾಮೀನು ರಹಿತ ವಾರಂಟ್​ ರದ್ದುಗೊಳಿಸಿ ಎಂದ ಮೆಹುಲ್​ ಛೋಕ್ಸಿ

<< ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನ ಬಹುಕೋಟಿ ಹಗರಣದ ಪ್ರಮುಖ ಆರೋಪಿ >>

ಮುಂಬೈ: ಭಾರತದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗೆ ನಾನೂ ಗುರಿಯಾಗಬಹುದು. ಆದ್ದರಿಂದ ನನ್ನ ವಿರುದ್ಧ ನೀಡಿರುವ ಜಾಮೀನು ರಹಿತ ವಾರಂಟನ್ನು ರದ್ದುಗೊಳಿಸಿ ಎಂದು ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಹಗರಣದ ಪ್ರಮುಖ ಆರೋಪಿ ಹಾಗೂ ಗೀತಾಂಜಲಿ ಜೆಮ್ಸ್​ ಪ್ರಾಯೋಜಕ ಮೆಹುಲ್​ ಛೋಕ್ಸಿ ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಮನಿ ಲಾಂಡರಿಂಗ್​ ತಡೆಗಟ್ಟುವ ಕಾಯಿದೆ ಅಡಿ ವಿಶೇಷ ನ್ಯಾಯಾಲಯ ಕಳೆದ ಮಾರ್ಚ್​ ಹಾಗೂ ಇದೇ ಜುಲೈನಲ್ಲಿ ಛೋಕ್ಸಿ ಅವರನ್ನು ಬಂಧಿಸಲು ಜಾಮೀನು ರಹಿತ ವಾರಂಟನ್ನು ನೀಡಿತ್ತು. ಜಾರಿ ನಿರ್ದೇಶನಾಲಯ ಛೋಕ್ಸಿ ವಿರುದ್ಧ ಚಾರ್ಜ್​ ಶೀಟ್​ ದಾಖಲಿಸಿದ ನಂತರ ವಾರಂಟ್​ ಜಾರಿಗೊಳಿಸಿತ್ತು.

ಸಂಬಳ ಪಡೆಯದಿರುವ ನನ್ನ ಕಂಪನಿಯ ಮಾಜಿ ಉದ್ಯೋಗಿಗಳು ಹಾಗೂ ನನಗೆ ಹಣ ನೀಡಿರುವ ಸಾಲಗಾರರಿಂದ ಜೀವ ಬೆದರಿಕೆ ಇದೆ. ಅಲ್ಲದೆ, ಜೈಲಿನ ಸಿಬ್ಬಂದಿ ಹಾಗೂ ಜೈಲು ಕೈದಿಗಳಿಂದ ಬೆದರಿಕೆ ಇದೆ. ಭಾರತದಲ್ಲಿ ಇತ್ತೀಚೆಗೆ ಟ್ರೆಂಡ್​ ಆಗಿರುವ ಗುಂಪು ಹಲ್ಲೆ ಮಾದರಿಯಲ್ಲೇ ನನ್ನನ್ನೂ ಹತ್ಯೆಗೈಯುವುದಾಗಿ ಬೆದರಿಕೆ ಬರುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ನನ್ನನ್ನು ಭಾರತಕ್ಕೆ ಕರೆತಂದು ಜೈಲಿಗೆ ಹಾಕಿದರೂ ಜೈಲಿನ ಸಿಬ್ಬಂದಿ ಹಾಗೂ ಜೈಲಿನಲ್ಲಿರುವ ಕೈದಿಗಳಿಂದಲೂ ನನ್ನ ಜೀವಕ್ಕೆ ತೊಂದರೆಯಿದೆ. ಯಾವುದೇ ತನಿಖೆಯಿಂದ ನಾನೂ ದೂರ ಉಳಿಯುವುದಿಲ್ಲ. ಎಲ್ಲದಕ್ಕೂ ಸಹಕರಿಸುತ್ತೇನೆ ಎಂದು ಹೇಳಿದ್ದಾರೆ. ಅನಾರೋಗ್ಯ, ಪಾಸ್​ಪೋರ್ಟ್​ ಹಿಂತೆಗೆದುಕೊಂಡಿರುವುದು ಹಾಗೂ ಜೀವ ಬೆದರಿಕೆ ಇರುವುದರಿಂದ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಹಗರಣ ಈ ವರ್ಷದ ಬಹುದೊಡ್ಡ ಹಗರಣ ಎಂಬ ಕುಖ್ಯಾತಿಗೆ ಒಳಗಾಗಿತ್ತು. ಪ್ರಕರಣದ ರೂವಾರಿ ನೀರವ್​ ಮೋದಿ ಹಾಗೂ ಅವರ ಅಂಕಲ್​ ಛೋಕ್ಸಿ 13,400 ಕೋಟಿ ರೂ. ಸಾಲ ಪಡೆದು ಹಿಂದಿರುಗಿಸಲಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. (ಏಜೆನ್ಸೀಸ್​)