More

  ಮೆಗ್ಗಾನ್ ಆಸ್ಪತ್ರೆ ವೈದ್ಯರ ಅಪರೂಪದ ಶಸ್ತ್ರಚಿಕಿತ್ಸೆ, ಮಹಿಳೆಗೆ ಜೀವದಾನ

  ಶಿವಮೊಗ್ಗ: ವಿಶ್ವದಲ್ಲೇ ಅತಿ ವಿರಳ ಮತ್ತು ಅಪರೂಪದಲ್ಲೇ ಅಪರೂಪದ ಬಾಂಬೆ ಬ್ಲಡ್ ಗ್ರೂಪ್ ಹೊಂದಿರುವ ಹಾಗೂ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯ ಶಸ್ತ್ರಚಿಕಿತ್ಸೆ(ರಪ್ಚರಡ್ ಎಕ್ಟೋಪಿಕ್)ಯನ್ನು ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿ ಗರ್ಭಿಣಿಯನ್ನು ಮೃತ್ಯಕೂಪದಿಂದ ಹೊರತಂದಿದ್ದಾರೆ.

  ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹಳೆ ಜೋಗದ ವೀರಭದ್ರಪ್ಪ ಅವರ ಪತ್ನಿ ಬೇಬಿ(31) ಎಂಬುವರು ನ.12ರಂದು ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸೆ ವಿಭಾಗಕ್ಕೆ ಹೊಟ್ಟೆ ನೋವೆಂದು ದಾಖಲಾಗಿದ್ದರು. ಪರೀಕ್ಷಿಸಿದಾಗ ಆಕೆ ಒಂದೂವರೆ ತಿಂಗಳ ಗರ್ಭಿಣಿಯಾಗಿರುವುದು ದೃಢಪಟ್ಟಿತ್ತು. ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಿದಾಗ ಗರ್ಭಕೋಶದ ಬದಲು ಗರ್ಭನಾಳದಲ್ಲಿ ಗರ್ಭ(ಎಕ್ಟೋಪಿಕ್ ಪ್ರೆಗ್ನೆನ್ಸಿ) ಧರಿಸಿರುವುದು ಕಂಡುಬಂದಿತ್ತು.
  ಬೇಬಿ ಆಸ್ಪತ್ರೆಗೆ ಬಂದಾಗ ತೀವ್ರ ತರಹದ ಆಘಾತಕ್ಕೊಳಗಾಗಿದ್ದು, ಅವರ ರಕ್ತ ತಪಾಸಣೆ ಮತ್ತು ಇತರೆ ಪರೀಕ್ಷೆಗಳನ್ನು ನಡೆಸಿದಾಗ ಹಿಮೋಗ್ಲೊಬಿನ್ ಪ್ರಮಾಣ 2.5 ಗ್ರಾಂ ಮತ್ತು ರಕ್ತದೊತ್ತಡ( 80/50) ಕುಸಿದಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅಲ್ಲದೆ, ಅರೆಪ್ರಜ್ಞಾವಸ್ಥೆ ತಲುಪಿದ್ದರು. ಸ್ಕ್ಯಾನಿಂಗ್‌ನಲ್ಲಿ ಗರ್ಭನಾಳದಲ್ಲಿ ಧರಿಸಿರುವ ಗರ್ಭವು ತುಂಡಾಗಿರುವುದು(ರಪ್ಚರಡ್ ಎಕ್ಟೋಪಿಕ್) ಕಂಡುಬಂದಿತ್ತು.
  ತಕ್ಷಣ ಗರ್ಭಿಣಿಯನ್ನು ಪ್ರಸೂತಿ ಐಸಿಯು ವಿಭಾಗಕ್ಕೆ ಸ್ಥಳಾಂತರಿಸಿ ಅವರ ರಕ್ತ ಪರೀಕ್ಷಿಸಿದಾಗ ಪ್ರಪಂಚದಲ್ಲೇ ಅತಿ ವಿರಳವಾದ, ಅಪರೂಪದ ಬಾಂಬೆ ಬ್ಲಡ್ ಗ್ರೂಪ್ ಅವರಿಗೆ ಇರುವುದು ಖಚಿತಗೊಂಡಿತ್ತು. ಆಕೆಗೆ ಅತಿ ತುರ್ತಾಗಿ 4ರಿಂದ 5 ಯೂನಿಟ್ ರಕ್ತದ ಅವಶ್ಯಕತೆ ಕಂಡುಬಂದಿತ್ತು. ಇಲ್ಲವಾದಲ್ಲಿ ಆಕೆಯ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು ಎನ್ನುತ್ತಾರೆ ವೈದ್ಯರು.

  6 ಗಂಟೆಯಲ್ಲೇ ರಕ್ತ ಸಂಗ್ರಹ
  ಆ ಸಮಯದಲ್ಲಿ ವೈದ್ಯರ ಸಮಯ ಪ್ರಜ್ಞೆಯಿಂದ ಡಾ. ಬಿ.ಜಿ.ಲೇಪಾಕ್ಷಿ ಮತ್ತು ಡಾ. ಅಶ್ವಿನಿ ವೀರೇಶ್ ತಂಡದ ಸತತ ಪ್ರಯತ್ನ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಸಿದ್ದನಗೌಡ ಅವರ ಮಾರ್ಗದರ್ಶನದಲ್ಲಿ ಈ ಅತೀ ವಿರಳ ರಕ್ತದ ಗುಂಪಿನ ದಾನಿಗಳನ್ನು ಸತತ 6 ಗಂಟೆಗಳ ಪ್ರಯತ್ನದಿಂದ ಹುಡುಕಿ, ರಕ್ತ ಸಂಗ್ರಹಿಸಿ ಗರ್ಭಿಣಿ ಸ್ತ್ರೀಗೆ ನೀಡುವಲ್ಲಿ ರಕ್ತನಿಧಿ ಕೇಂದ್ರದ ವೈದ್ಯೆ ಡಾ. ವೀಣಾ ಮತ್ತು ತಂಡವರು ಶ್ರಮಿಸಿದ್ದಾರೆ.

  ರಕ್ತದಾನಿಗಳು
  ವಿಜಯನಗರ ಜಿಲ್ಲೆಯ ಕೊಟ್ಟೂರಿನ ಸಿದ್ದೇಶ್, ದಾವಣಗೆರೆ ಜಿಲ್ಲೆಯ ಮಾಯಕೊಂಡದ ಜಿ.ಪ್ರವೀಣ್ ಹಾಗೂ ಮತ್ತೊಬ್ಬರು, ಬೆಂಗಳೂರಿನ ಸಂಕಲ್ಪ ಫೌಂಡೇಷನ್‌ನ ಸಹಾಯದಿಂದ ಮತ್ತೊಂದು ಯೂನಿಟ್ ಅನ್ನು ಬೆಂಗಳೂರು ರಕ್ತನಿಧಿ ಕೇಂದ್ರದಿಂದ ಸಂಗ್ರಹಿಸಿ ಪರೀಕ್ಷಿಸಿ ಗರ್ಭಿಣಿಗೆ ನೀಡಲಾಗಿತ್ತು.

  ಸತತ 3 ಗಂಟೆ ಕಾಲ ಆಪರೇಷನ್
  ಗರ್ಭಿಣಿಗೆ ತಕ್ಷಣ ಶಸ್ತ್ರಚಿಕಿತ್ಸೆ ಅವಶ್ಯಕತೆ, ಅದರ ಸಾಧಕ ಬಾಧಕಗಳ ಬಗ್ಗೆ ತಿಳಿಸಿ ಶಸ್ತ್ರಚಿಕಿತ್ಸೆಗೆ ಒಪ್ಪಿಸಿ ಅರವಳಿಕೆ ತಜ್ಞ ವೈದ್ಯರಾದ ಡಾ. ಪಿ.ಟಿ.ಶಿವಾನಂದ ಮತ್ತು ತಂಡದವರಿಂದ ಸಹಾಯ ಪಡೆದು ಯಶಸ್ವಿ 3 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಹೊಟ್ಟೆಯೊಳಗೆ ಸಂಗ್ರಹವಾಗಿದ್ದ ಸುಮಾರು 2.5 ಲೀಟರ್‌ನಷ್ಟು ರಕ್ತವನ್ನು ಹೊರತೆಗೆದು ಗರ್ಭಿಣಿಯ ಜೀವ ಉಳಿಸಿದ್ದಾರೆ.

  ಅಪರೂಪದ ಶಸ್ತ್ರಚಿಕಿತ್ಸೆಗೆ ಅತಿ ವಿರಳ ಗುಂಪಿನ ರಕ್ತದಾನ ಮಾಡಿ ಜೀವ ಉಳಿಸಿದ ಮಾಯಕೊಂಡದ ಜಿ.ಪ್ರವೀಣ್, ಕೊಟ್ಟೂರಿನ ಸಿದ್ದೇಶ್, ಬೆಂಗಳೂರು ಸಂಕಲ್ಪ ಫೌಂಡೇಶನ್‌ನ ರಕ್ತನಿಧಿ ಕೇಂದ್ರ ಹಾಗೂ ಶಿವಮೊಗ್ಗ ಮೆಗ್ಗಾನ್ ರಕ್ತನಿಧಿ ಕೇಂದ್ರಕ್ಕೆ ತುಂಬು ಹೃದಯದ ಧನ್ಯವಾದಗಳು. ಅತಿ ವಿರಳ ರಕ್ತದ ಗುಂಪಾದ ಬಾಂಬೆ ಬ್ಲಡ್ ಗ್ರೂಪ್ ಬಗ್ಗೆ ಅರಿವು ಅಗತ್ಯವಾಗಿದೆ.
  ಡಾ. ವಿರೂಪಾಕ್ಷಪ್ಪ, ಸಿಮ್ಸ್ ನಿರ್ದೇಶಕ

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts