ಮತಗಟ್ಟೆಗಳಲ್ಲಿ ರ್ಯಾಂಪ್ ನಿರ್ಮಿಸಿ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಜಿಲ್ಲೆಯಲ್ಲಿ ಸ್ಥಾಪಿಸಿರುವ ಎಲ್ಲ ಮತದಾನ ಕೇಂದ್ರಗಳಲ್ಲಿ ವಿಕಲಚೇತನ ಮತ್ತು ಹಿರಿಯ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಿಯಾದ ರ್ಯಾಂಪ್ ವ್ಯವಸ್ಥೆ ಇರುವ ಬಗ್ಗೆ ಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ರ್ಯಾಂಪ್ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದ್ದಾರೆ.

ಗುರುವಾರ ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 76 ಸೆಕ್ಟರ್ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗವು ಯಾವುದೇ ಮತದಾರ ಮತದಾನದಿಂದ ವಂಚಿತವಾಗಬಾರದು ಎಂಬ ಉದ್ದೇಶ ಹೊಂದಿದೆ. ಆದ್ದರಿಂದ ಮತದಾರರು ಸುಗಮವಾಗಿ ಮತದಾನ ಮಾಡಲು ಬೇಕಾಗಿರುವ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 1,135 ಮತಗಟ್ಟೆಯಲ್ಲಿ ರ್ಯಾಂಪ್, ಕುಡಿಯುವ ನೀರು, ವಿದ್ಯುತ್, ಶೌಚಾಲಯ ವ್ಯವಸ್ಥೆ ಇರಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಶಾಲೆಯ ಮುಖ್ಯಶಿಕ್ಷಕರು, ಅಂಗನವಾಡಿ ಶಿಕ್ಷಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚಚರ್ಿಸಿ, ಈ ಸೌಲಭ್ಯಗಳು ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ಹಿಂದಿನ ಚುನಾವಣೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿಯೇ ಮತದಾನ ನಡೆಯಬೇಕೆಂಬ ನಿರ್ಬಂಧ ಇಲ್ಲ. ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದರೆ ಅಥವಾ ಇನ್ನಾವುದೇ ಬದಲಾವಣೆ ಮಾಡಬಹುದಾದ ಸಮಸ್ಯೆ ಇದ್ದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಮತಗಟ್ಟೆಯನ್ನು ಒಂದೇ ಆವರಣದಲ್ಲಿರುವ ಮತ್ತೊಂದು ಕೊಠಡಿ ಅಥವಾ ಕಟ್ಟಡಕ್ಕೆ ಬದಲಾವಣೆ ಮಾಡಬಹುದಾಗಿದೆ. ಬದಲಾವಣೆ ಮಾಡುವಾಗ ಆ ಶಾಲೆಯ ಹೆಸರು ಸರಿಯಾಗಿ ನಮೂದಿಸಬೇಕು. ಅಲ್ಲದೆ, ಮತಗಟ್ಟೆಯ ಕೋಣೆ ಅಥವಾ ಕಟ್ಟಡ ಬದಲಾವಣೆ ಮಾಡಿದಾಗ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರ ಗಮನಕ್ಕೆ ಬರುವ ರೀತಿಯಲ್ಲಿ ಪ್ರಚಾರ ಮಾಡಬೇಕು ಎಂದು ಅವರು ನಿರ್ದೇಶಿಸಿದರು.

ಜಿಪಂ ಸಿಇಒ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಮತಗಟ್ಟೆಗಳಲ್ಲಿ ಏನಾದರೂ ದುರಸ್ಥಿ ಅಥವಾ ಯಾವುದೇ ನ್ಯೂನತೆಗಳಿದ್ದರೆ ಅದನ್ನು ಕೂಡಲೇ ಸರಿಪಡಿಸಲು ಪಂಚಾಯಿತಿ ಅಭಿವೃದ್ಧಿಗಳಿಗೆ ತಾಪಂ ಇಒಗಳ ಮುಖಾಂತರ ಇಂದು ಪತ್ರ ಕಳುಹಿಸಲಾಗುವುದು. ಸೆಕ್ಟರ್ ಅಧಿಕಾರಿಗಳು ಕೂಡ ಪಿಡಿಒ ಅವರ ಗಮನಕ್ಕೆ ತಂದು ದುರಸ್ಥಿ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಮಾತನಾಡಿ, ಸೆಕ್ಟರ್ ಅಧಿಕಾರಿಗಳು ತಮಗೆ ವಹಿಸಿದ ಕಾರ್ಯಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಚುನಾವಣಾ ಕಾರ್ಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ಕಿವಿಮಾತು ಹೇಳಿದರು.

ಐಸಿಟಿ ನೋಡಲ್ ಅಧಿಕಾರಿ ಶ್ರೀನಿವಾಸರಾವ್ ಅವರು ತರಬೇತಿ ನೀಡಿ, ಸೆಕ್ಟರ್ ಅಧಿಕಾರಿಗಳು ತಮಗೆ ವಹಿಸಿದ ಮತಗಟ್ಟೆಗಳ ಭೌತಿಕ ಸೌಲಭ್ಯಗಳಾದ ರ್ಯಾಂಪ್, ಕುಡಿಯುವ ನೀರು, ಶೌಚಾಲಯ, ಮತಗಟ್ಟೆಯ ಹೆಸರು ಹಾಗೂ ಸಂಪೂರ್ಣ ಕಟ್ಟಡದ ಫೋಟೊಗಳನ್ನು ಕೆಪಿಎಸ್ಐಎಸ್ ಆ್ಯಪ್ ಮೂಲಕ ಅಪ್ಲೋಡ್ ಮಾಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ಅರುಣಕುಮಾರ ಕುಲಕಣರ್ಿ, ಖಲೀಲ್ಸಾಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.