ಕ್ಷುಲ್ಲಕ ಕಾರಣಕ್ಕೆ ಸಾಮಾನ್ಯ ಸಭೆ ಮುಂದೂಡಿಕೆ

ಹಾವೇರಿ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಕಳೆದ ನಾಲ್ಕು ತಿಂಗಳಿಂದ ನೀತಿ ಸಂಹಿತೆ ನೆಪದಲ್ಲಿ ಜನರ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಬೇಕಿದ್ದ ತಾಪಂ ಸಾಮಾನ್ಯ ಸಭೆ ಜರುಗಿಲ್ಲ. ಈಗ ನೀತಿ ಸಂಹಿತೆ ಮುಗಿದು ತಿಂಗಳಾಗುತ್ತ ಬಂದ ಸಮಯದಲ್ಲಿ ಕರೆದಿದ್ದ ತಾಪಂ ಸಾಮಾನ್ಯ ಸಭೆಯೂ ಅಧಿಕಾರಿಗಳ ನಿರ್ಲಕ್ಷ್ಯಂದ ಮುಂದಕ್ಕೆ ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಾವೇರಿ ತಾಪಂ ಸಾಮಾನ್ಯ ಸಭೆ ಜೂ. 14ರಂದು ನಿಗದಿಯಾಗಿತ್ತು. ಆದರೆ, ಅಧಿಕಾರಿಗಳು ಸದಸ್ಯರಿಗೆ ಸಕಾಲದಲ್ಲಿ ಸಭೆಯ ನೋಟಿಸ್ ಮುಟ್ಟಿಸಿದ ಪರಿಣಾಮ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ. ಇದರಿಂದ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳ ಚರ್ಚೆ ಹಾಗೂ ನಿವಾರಣೆಗೆ ಮತ್ತಷ್ಟು ವಿಳಂಬವಾಗಿದ್ದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ತಪ್ಪಿಗೆ ಅಧ್ಯಕ್ಷರು ಹೊಣೆ: ಸಭೆಯನ್ನು ತಾಪಂ ಅಧ್ಯಕ್ಷ ಕರಿಯಪ್ಪ ಉಂಡಿ ಜೂ. 14ರಂದು ನಿಗದಿಗೊಳಿಸಿದ್ದರು. ಸಭೆಯ ಮಾಹಿತಿಯ ನೋಟಿಸ್ ಅನ್ನು ತಾಪಂ ಇಒ ಸಭೆಯ 7 ದಿನಗಳ ಮುಂಚಿತವಾಗಿ ಸದಸ್ಯರಿಗೆ ಮುಟ್ಟಿಸಬೇಕಿತ್ತು. ಆದರೆ, ಇಒ ಅನ್ನಪೂರ್ಣ ಮುದಕ್ಕಮ್ಮನವರ ನಿರ್ಲಕ್ಷ್ಯಂದಾಗಿ ಸಭೆ ನಡೆಯುವ 2 ದಿನಗಳ ಹಿಂದೆ ಗ್ರಾಪಂನ ಬಿಲ್​ಕಲೆಕ್ಟರ್, ಗುಮಾಸ್ತರ ಮೂಲಕ ಸದಸ್ಯರಿಗೆ ತಲುಪಿವೆ. ಇದರಿಂದ ಸಭೆಯಲ್ಲಿ ಸದಸ್ಯರು ಗಲಾಟೆ ಮಾಡುವುದಾಗಿ ತಿಳಿಸಿದ್ದರಿಂದ ಅಧ್ಯಕ್ಷರು ತಾಪಂ ಸಭೆಯನ್ನೇ ಮುಂದೂಡಿದ್ದಾರೆ.

ಸಾಮಾನ್ಯ ಸಭೆ ಜೂ. 14ರಂದು ನಿಗದಿ ಯಾಗಿತ್ತು. ಅಧ್ಯಕ್ಷರು ಸಭೆಯನ್ನು ಜೂ. 26ಕ್ಕೆ ಮುಂದೂ ಡುವಂತೆ ತಿಳಿಸಿದ್ದರಿಂದ ಮುಂದೂಡಿದ್ದೇವೆ. ಸಭೆಯ ನೋಟಿಸ್ ಮುಟ್ಟದ ಕುರಿತು ನನಗೆ ಮಾಹಿತಿಯಿಲ್ಲ.

| ಅನ್ನಪೂರ್ಣ ಮುದಕಮ್ಮನವರ, ತಾಪಂ ಇಒ ಹಾವೇರಿ

ಸಾಮಾನ್ಯ ಸಭೆಯ ನೋಟಿಸ್​ಗಳನ್ನು ಇಒ ಸಕಾಲದಲ್ಲಿ ತಲುಪಿಸಿಲ್ಲ ಎಂದು ಸದಸ್ಯರು ದೂರಿ, ಸಭೆಯಲ್ಲಿ ಗಲಾಟೆ ಮಾಡುವುದಾಗಿ ಹೇಳಿದ್ದರಿಂದ ಸಭೆಯನ್ನು ಮುಂದೂಡಿದ್ದೇನೆ. ಇಒ ಅವರು ಮಹಿಳೆಯಾಗಿರುವುದರಿಂದ ಅವರ ತಪ್ಪಿನ ಜವಾಬ್ದಾರಿಯನ್ನು ನಾನು ಹೊರುತ್ತೇನೆ.

| ಕರಿಯಪ್ಪ ಉಂಡಿ, ಅಧ್ಯಕ್ಷರು ತಾಪಂ ಹಾವೇರಿ

ಅಧಿಕಾರಿಗಳು ಸಭೆಯ ಮಾಹಿತಿಯನ್ನು ಸದಸ್ಯರಿಗೆ ಸಕಾಲಕ್ಕೆ ನೀಡದೇ ನಿರ್ಲಕ್ಷ್ಯ ವಹಿಸಿದ್ದರಿಂದ ಜನರಿಂದ ನಾವು ಛೀಮಾರಿ ಹಾಕಿಸಿಕೊಳ್ಳುವ ಸ್ಥಿತಿ ನಿರ್ವಣವಾಗಿದೆ. ಜಿಪಂ ಸಿಇಒ ಇದನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.

| ಸತೀಶ ಸಂದಿಮನಿ, ಮಾಲತೇಶ ಬನ್ನಿಮಟ್ಟಿ, ತಾಪಂ ಸದಸ್ಯರು ಹಾವೇರಿ

Leave a Reply

Your email address will not be published. Required fields are marked *