ಚಾಮರಾಜನಗರದಲ್ಲಿ ಕಾಂಗ್ರೆಸ್ ಪಕ್ಷದ ವೀರಶೈವ-ಲಿಂಗಾಯತ ಮುಖಂಡರು ಹಾಗೂ ಕಾರ್ಯಕರ್ತರ ಸಭೆ

ಚಾಮರಾಜನಗರ: ವೀರಶೈವ ಲಿಂಗಾಯತರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬರುತ್ತಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆರ್.ಧ್ರುವನಾರಾಯಣ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕು ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಮನವಿ ಮಾಡಿದರು.

ನಗರದ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ವೀರಶೈವ ಲಿಂಗಾಯತ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ವೀರಶೈವ ಲಿಂಗಾಯತರು ಬಿಜೆಪಿ ಪಕ್ಷದ ಪರವಾಗಿದ್ದಾರೆ ಎಂಬ ಭ್ರಮೆ ಎಲ್ಲರಲ್ಲಿಯೂ ಇದೆ. ಇದನ್ನೇ ಬಿಜೆಪಿ ನಾಯಕರು ಬಳಸಿಕೊಂಡು ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಲು ವೀರಶೈವ ಲಿಂಗಾಯತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯದಡಿ ಎಲ್ಲ ವರ್ಗದವರಿಗೂ ಸಮಾನ ಅವಕಾಶ ನೀಡಿದೆ. ನಿಜಲಿಂಗಪ್ಪ, ಬಿ.ಡಿ.ಜತ್ತಿ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದು, ರಾಜಶೇಖರಮೂರ್ತಿ ಅವರು ಕೇಂದ್ರ ಸಚಿವರಾಗಿ ದೊಡ್ಡ ಹೆಸರು ಗಳಿಸಲು ಕಾಂಗ್ರೆಸ್ ಪಕ್ಷ ಕಾರಣವಾಗಿದೆ. ತನ್ನ ಪತಿ ದಿ.ಎಚ್.ಎಸ್.ಮಹದೇವಪ್ರಸಾದ್ ಅವರು ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ಅಕಾಲಿಕ ನಿಧನದ ಬಳಿಕ ಸಿದ್ದರಾಮಯ್ಯ ಅವರು ತನ್ನನ್ನು ಶಾಸಕಿಯಾಗಿ ಮಾಡಿ ಪ್ರಥಮ ಅವಧಿಯಲ್ಲಿಯೇ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರು ಎಂದು ಸ್ಮರಿಸಿದರು.

ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ದಿ.ಎಂ.ರಾಜಶೇಖರಮೂರ್ತಿ ಅವರು ತನ್ನ ರಾಜಕೀಯ ಗುರುಗಳಾಗಿದ್ದು ಅವರು ಹಾಕಿ ಕೊಟ್ಟ ಹಾದಿಯಲ್ಲಿಯೇ ನಡೆಯುತ್ತಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕೋಮು ಗಲಭೆಗಳಿಗೆ ಅವಕಾಶ ನೀಡದೆ ಸದಾ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿದ್ದೇನೆ. 1994 ರಲ್ಲಿ ದಿ.ಎಸ್.ಪುಟ್ಟಸ್ವಾಮಿ ಅವರು ತನಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ನೀಡಿದ್ದರು ಎಂದರು.

ಅಲ್ಲಿಂದ ರಾಜಕೀಯ ಜೀವನ ಆರಂಭಿಸಿದ ತಾನು ಜನರ ಆಶೀರ್ವಾದದಿಂದ ಎರಡು ಬಾರಿ ಶಾಸಕ ಹಾಗೂ ಎರಡು ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಸಂಸದನಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ವೀರಶೈವ ಸಮಾಜದ ಮುಖಂಡರಿಗೆ ಸಾಧ್ಯವಾದಷ್ಟು ಅಧಿಕಾರ ನೀಡಿದ್ದು, ಈ ಬಾರಿಯ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಸಾಮಾಜಿಕ ಬದ್ಧತೆ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಸಂಸದ ಆರ್.ಧ್ರುವನಾರಾಯಣ ಅವರನ್ನು ಪಕ್ಷದ ವೀರಶೈವ-ಲಿಂಗಾಯತ ಮುಖಂಡರು ಬೆಂಬಲಿಸುವ ಮೂಲಕ ಅವರಿಗೆ ಹೆಚ್ಚಿನ ಶಕ್ತಿಯನ್ನು ನೀಡಬೇಕು ಎಂದರು.

ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ಅಧ್ಯಕ್ಷ ಎಂ.ಗುರುಮಲ್ಲಪ್ಪ, ಜಿಪಂ ಸದಸ್ಯ ಸದಾಶಿವ ಮೂರ್ತಿ, ಮುಖಂಡರಾದ ಗಣೇಶ್‌ಪ್ರಸಾದ್, ಪ್ರಭುಪ್ರಸಾದ್, ಸಿದ್ದಲಿಂಗಸ್ವಾಮಿ, ಬಿ.ಪುಟ್ಟಣ್ಣ, ಗುರುಸ್ವಾಮಿ ಮಾತನಾಡಿದರು.

ಜಿಪಂ ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ಮಹೇಶ್, ಶಶಿಕಲಾ ಸೋಮಲಿಂಗಪ್ಪ, ಚೆನ್ನಪ್ಪ, ಲೇಖಾ, ವೀರಶೈವ ಮಹಾಸಭಾದ ಕೋಶಾಧ್ಯಕ್ಷ ಬಂಡಳ್ಳಿ ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪಾಪಣ್ಣ, ಬ್ಲಾಕ್ ಅಧ್ಯಕ್ಷರಾದ ತೋಟೇಶ್, ಗುರುಸ್ವಾಮಿ, ರಾಜಶೇಖರ್, ಎಪಿಎಂಸಿ ಅಧ್ಯಕ್ಷ ಶಿವಶಂಕರಮೂರ್ತಿ ಇತರರಿದ್ದರು.