ಸಮಸ್ಯೆಯಾಗದಂತೆ ಜಾಗ್ರತೆ ವಹಿಸಿ

ಬಾಗಲಕೋಟೆ: ಜಿಲ್ಲೆಯಲ್ಲಿ ಭೀಕರ ಬರವಿದ್ದು, ಕುಡಿವ ನೀರಿನ ಸಮಸ್ಯೆಯಾಗದಂತೆ, ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಜಾಗೃತಿ ವಹಿಸಬೇಕು. ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ ಮಾಡ ಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ ನೀಡಿದರು.

ನಗರದ ತೋವಿವಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಪ್ರತಿ ತಾಲೂಕಿಗೊಂದರಂತೆ ಮೇವು ಬ್ಯಾಂಕ್ ಆರಂಭಿಸಬೇಕು. ಪರಿಸ್ಥಿತಿ ನೋಡಿಕೊಂಡು ಶಾಸಕರೊಂದಿಗೆ ರ್ಚಚಿಸಿ ಹೆಚ್ಚುವರಿಯಾಗಿ ಮೇವು ಬ್ಯಾಂಕ್ ಸ್ಥಾಪಿಸಬೇಕು. ಬಹುಹಳ್ಳಿ ಕುಡಿವ ನೀರಿನ ಯೋಜನೆ ಬೇಗ ಪೂರ್ಣಗೊಳಿಸಬೇಕು. ತೀವ್ರ ಕುಡಿಯವ ನೀರಿನ ಸಮಸ್ಯೆಯಿರುವ ಜನ ವಸತಿ ಪ್ರದೇಶಗಳಿಗೆ ತುರ್ತಾಗಿ ಕೊಳವೆಬಾವಿ ಕೊರೆಯಿಸಿ ನೀರು ಪೂರೈಸಬೇಕು. ಜನರು ಗುಳೆ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ತರಾಟೆ: ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಾಗಲಕೋಟೆ ಮಾತನಾಡಿ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಶೇ.34 ಮಳೆ ಕೊರತೆಯಾಗಿ ಅಪಾರ ಪ್ರಮಾಣದ ಬೆಳೆನಾಶ ವಾಗಿದೆ. ಹಿಂಗಾರು ಹಂಗಾಮಿನಲ್ಲಿ ಶೇ. 84 ಮಳೆ ಕೊರತೆಯಾಗಿದ್ದರಿಂದ ಜೋಳ, ಕಡಲೆ ಸೇರಿ ಬಹುತೇಕ ಹಿಂಗಾರು ಬೆಳೆಗಳು ಒಣಗಿವೆ. ಹೆಚ್ಚಾಗಿ ಒಣ ಬೇಸಾಯವಿರುವ ಬಾಗಲಕೋಟೆ, ಹುನಗುಂದ, ಬಾದಾಮಿ ತಾಲೂಕಿನಲ್ಲಿ ಬರಗಾಲದ ತೀವ್ರ ಸಮಸ್ಯೆಯಾಗಲಿದೆ ಎಂದು ಹೇಳಿದರು.

ಈ ವೇಳೆ ಸಚಿವ ಶಿವಾನಂದ ಪಾಟೀಲ, ಜಿಲ್ಲಾದ್ಯಂತ ಬರಗಾಲವಿರುವುದು ಖಾತ್ರಿಯಾಗಿದೆ. ಆದರೆ, ಫಸಲ್ ಬಿಮಾ ಯೋಜನೆಯಲ್ಲಿ ಎಷ್ಟು ಜನ ರೈತರು ವಿಮೆ ಮಾಡಿಸಿದ್ದಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ರಾಜಶೇಖರ 2 ಲಕ್ಷ 27 ಸಾವಿರ 731 ರೈತರ ಪೈಕಿ 42 ಸಾವಿರ ರೈತರು ವಿಮೆ ಮಾಡಿಸಿದ್ದಾರೆ. ನಿಗದಿತ ಗುರಿಗಿಂತ ಜಾಸ್ತಿ ರೈತರಿಗೆ ವಿಮೆ ಮಾಡಿಸಲಾಗಿದೆ ಎಂದರು. ಕೇವಲ 42 ಸಾವಿರ ಜನ ರೈತರು ವಿಮೆ ಮಾಡಿಸಿದ್ದಾರೆ ಎಂದರೆ ಹೇಗೆ ? ಎಂದು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ವಿಮಾ ಯೋಜನೆ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿಲ್ಲ. ಜೋಳ ಬೆಳೆವಿಮೆ ಕುರಿತು ಕೊನೆಯ ದಿನಾಂಕದಂದು ತಿಳಿಸಲಾಗಿದೆ. ಇದರಿಂದ ಅನೇಕ ಜನ ರೈತರು ವಿಮೆ ಮಾಡಿಸಿಲ್ಲ ಎಂದು ದೂರಿದರು. ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಿಂತ ಅಧಿಕಾರಿಗಳೇ ಜಾಸ್ತಿ ಇದ್ದಾರೆ. ಯಾರಿಗೂ ಫೀಲ್ಡ್ ವರ್ಕ್ ಗೊತ್ತಿಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರವಾಗುತ್ತಿಲ್ಲ ಎಂದು ದೂರಿದ ಅವರು, ಪ್ರತಿಯೊಬ್ಬ ಕೃಷಿ ಇಲಾಖೆ ಅಧಿಕಾರಿಗಳು ಪಂಚಾಯಿತಿ ಹಂಚಿಕೊಂಡು ಫಸಲ್​ಬಿಮಾ ಯೋಜನೆಯ ವಿಮೆ ರೈತರಿಂದ ಮಾಡಿಸಬೇಕು ಎಂದು ಹೇಳಿದರು.

ಹುನಗುಂದ ತಾಲೂಕಿನ ರಾಮಥಾಳ- ಮರೋಳ ಏತ ನೀರಾವರಿ ಯೋಜನೆಯಲ್ಲಿ 65 ಸಾವಿರ ಎಕರೆ ಒಳಪಡಿಸಲಾಗಿದೆ. ಆದರೆ, ಇದರಲ್ಲಿ ಶೇ.20ರಷ್ಟು ಮಾತ್ರ ನೀರಾವರಿಯಾಗುತ್ತಿದೆ. ಇದರಿಂದ ಅನೇಕ ರೈತರಿಗೆ ಸಮಸ್ಯೆಯಾಗುತ್ತಿದೆ. ಯಾವುದು ನೀರಾವರಿ ಒಳಪಡುತ್ತಿಲ್ಲವೋ ಖುಷ್ಕಿ ಜಮೀನು ಎಂದು ಪರಿಗಣಿಸಬೇಕು. ವಿಮಾ ಯೋಜನೆಗೆ ಒಳಪಡಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಮನವಿ ಮಾಡಿದರು. ಇದಕ್ಕೆ ಸಚಿವ ಶಿವಾನಂದ ಪಾಟೀಲ ಮತ್ತು ಅಧಿಕಾರಿಗಳು ಸಮ್ಮತಿ ಸೂಚಿಸಿದರು.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಪ್ರಭುರಾಜ ಹಿರೇಮಠ ಅವರು ಜಿಲ್ಲೆಯಲ್ಲಿರುವ ತೋಟಗಾರಿಕೆ ಬೆಳೆಗಳಿಗೆ ವಿಮಾ ಯೋಜನೆಯಲ್ಲಿ ರೈತರಿಂದ ವಿಮೆ ತುಂಬಿಸಿರುವ ಬಗ್ಗೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಸಚಿವರು, ಶಾಸಕರು ಸಿಡಿಮಿಡಿಗೊಂಡರು. ಸರಿಯಾದ ಮಾಹಿತಿ ತೆಗೆದುಕೊಂಡು ಸಭೆಗೆ ಬರಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಶಾಸಕರಾದ ಆನಂದ ನ್ಯಾಮಗೌಡ, ಸಿದ್ದು ಸವದಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ ಗಿರಿನಾಥ, ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಪಂ ಸಿಇಒ ಗಂಗೂಬಾಯಿ ಮಾನಕರ ಇತರರು ಇದ್ದರು.

ಕುಡಿವ ನೀರಿನ ಸಮಸ್ಯೆ ಚರ್ಚೆ: ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯ 344 ಜನ ವಸತಿ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗಬಹುದೆಂದು ಅಂದಾಜಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದಾಗ, ಈ ಕುರಿತು ಕಾವೇರಿದ ಚರ್ಚೆ ನಡೆಯಿತು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಕಳೆದ ನಾಲ್ವತ್ತು ವರ್ಷದಲ್ಲಿ ಈ ರೀತಿ ಬರ ಕಾಣಿಸಿಕೊಂಡಿರಲಿಲ್ಲ. ಹಿಂಗಾರು, ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿದೆ. ಕೆಲಸವಿಲ್ಲದೆ ಅನೇಕ ಜನ ಗುಳೆ ಹೊರಟ್ಟಿ ದ್ದಾರೆ. ತಾಂಡಾಗಳು ಖಾಲಿಯಾಗುತ್ತಿವೆ. ಅಂತರ್ಜಲ ಮಟ್ಟ ಕುಸಿದಿದೆ. ಜನವರಿ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಮೇವು ಬ್ಯಾಂಕ್ ಆರಂಭಿಸಬೇಕು. ಮೇವು ಜತೆ ಪ್ರತಿ ಜಾನುವಾರುಗಳಿಗೆ 250 ಗ್ರಾಂ ಹಿಂಡಿ ಕೊಡ ಬೇಕು. ಗೋಶಾಲೆ ತೆರೆಯಬೇಕು ಎಂದರು.

ಮುಧೋಳ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಕುಟುಂಬಗಳು ಜಮೀನುಗಳಲ್ಲಿ ವಾಸಿಸುತ್ತಾರೆ. ಅವರಿಗೆ ಕುಡಿವ ನೀರು ಪೂರೈಸಬೇಕು. ನರೇಗಾ ಯೋಜನೆಯಡಿ ಉದ್ಯೋಗ ನೀಡಬೇಕು. ಬರ ನಿರ್ವಹಣೆಗಾಗಿ ಪ್ರತಿ ತಾಲೂಕಿಗೆ 50 ಲಕ್ಷ ರೂ. ಅನುದಾನ ನೀಡಲಾಗಿದೆ. 1 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೋರವೆಲ್ ಕೊರೆದರೆ ನೀರು ಸಿಗುತ್ತದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ಕೊಡುವುದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಮನವೊಲಿಸಬೇಕು ಎಂದು ಆಗ್ರಹಿಸಿದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ನಮ್ಮ ಮತಕ್ಷೇತ್ರದಲ್ಲಿ ಜಾರಿಯಲ್ಲಿರುವ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಸಂಪೂರ್ಣವಾಗಿ ಹಾಳಾಗಿವೆ. ಅನೇಕ ವರ್ಷ ಗಳಿಂದ ಕೆಲ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶಾಲಾ ಕಾಂಪೌಂಡ್ ನಿರ್ವಣ, ಕೊಠಡಿ ನಿರ್ಮಾಣ ಮಾಡಬೇಕು. ಶಾಸಕರ ನಿಧಿಯಿಂದ ಸಹ ಕಟ್ಟಡಕ್ಕೆ ಅನುದಾನ ಒದಗಿಸಲಾಗುವುದು. ರಾಂಪುರ, ಅಮೀನಗಡ, ಕಮತಗಿಯಲ್ಲಿ ಗೋಶಾಲೆ, ಮೇವು ಬ್ಯಾಂಕ್ ಆರಂಭಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯೆ ನೀಡಿ, ಗೋಶಾಲೆ, ಮೇವು ಬ್ಯಾಂಕ್ ಶಾಸಕರು ತಿಳಿಸಿದಂತೆ ಆಯಾ ಪರಿಸ್ಥಿತಿ ಅನುಗುಣವಾಗಿ ಆರಂಭಿಸಲಾಗುವುದು. ಅರಣ್ಯ ಭೂಮಿಯಲ್ಲಿ ಬೋರವೆಲ್ ಕೊರೆಯುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಕಾರಾರು ಮಾಡದಂತೆ ಆದೇಶ ಮಾಡುತ್ತೇನೆ ಎಂದು ಹೇಳಿದರು.

ಬಿಟಿಡಿಎ ಅಧಕಾರಿಗಳ ಮೇಲೆ ಗರಂ: ಹೆರಕಲ್ಲ ಗ್ರಾಮದಿಂದ ಬಾಗಲಕೋಟೆ ನಗರಕ್ಕೆ ಸರಬರಾಜು ಮಾಡುವ ಕುಡಿವ ನೀರಿನ ಯೋಜನೆ ಆಮೆಗತಿಯಲ್ಲಿ ಸಾಗಿರುವ ಬಗ್ಗೆ ಸಚಿವ ಶಿವಾನಂದ ಪಾಟೀಲ ಬಿಟಿಡಿಎ ಅಧಿಕಾರಿಗಳ ಮೇಲೆ ಗರಂ ಆದ ಪ್ರಸಂಗ ಸಭೆಯಲ್ಲಿ ನಡೆಯಿತು. 72 ಕೋಟಿ ರೂ. ವೆಚ್ಚದ ಈ ಯೋಜನೆ 2013ರಲ್ಲಿ ಆರಂಭವಾಗಿದೆ. ಐದು ವರ್ಷವಾದರೂ ಪೂರ್ಣಗೊಂಡಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಇದಕ್ಕೆ ವಿಪ ಸದಸ್ಯ ಹನುಮಂತ ನಿರಾಣಿ ಧ್ವನಿಗೂಡಿಸಿ ಅನಗವಾಡಿ ಸೇತುವೆ ಬಳಿ ಇನ್ನೂ ಪೈಪ್​ಲೈನ್ ಕಾಮಗಾರಿ ಆಗಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ಇದರಿಂದ ಮತ್ತಷ್ಟು ಕೆರಳಿದ ಸಚಿವರು ಬೇಸಿಗೆಯಲ್ಲಿ ಬಾಗಲಕೋಟೆ ನಗರಕ್ಕೆ ಕುಡಿವ ನೀರು ಸಮಸ್ಯೆ ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕೃಷಿ, ತೋಟಗಾರಿಕೆ, ಕಂದಾಯ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಯಿತು.

ಈರುಳ್ಳಿ ರೈತರಿಗೆ ಸಹಾಯ ಮಾಡಿ: ಜಿಲ್ಲೆಯಲ್ಲಿರುವ ಪುನರ್ ವಸತಿ ಕೇಂದ್ರಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಘಟಪ್ರಭಾ ನದಿ ನೀರು ಖಾಲಿಯಾದರೂ ಗಮನ ಹರಿಸುತ್ತಿಲ್ಲ. ಹಿಡಕಲ್ ಡ್ಯಾಂನಿಂದ ಕೇವಲ 1 ಟಿಎಂಸಿ ನೀರು ಬಿಡುತ್ತಾರೆ. ಅದು ಯಾತಕ್ಕೂ ಸಾಲುವುದಿಲ್ಲ. ಈರಳ್ಳಿ ರೈತರು ಕಣ್ಣೀರು ತರುವಂತಾಗಿದ್ದು, ಸರ್ಕಾರ ಇನ್ನಷ್ಟು ಸಹಾಯ ಹಸ್ತ ಚಾಚಬೇಕು ಎಂದು ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಸಭೆಯ ಗಮನಕ್ಕೆ ತಂದರು. ಇದಕ್ಕೆ ಸಚಿವ ಪಾಟೀಲ ಪ್ರತಿಕ್ರಿಯೆ ನೀಡಿ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.