ಪ್ರಜಾಕೀಯಕ್ಕೆ ಅಬ್ಬರ ಬೇಡ…!

ಮಂಡ್ಯ: ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಮತ್ತು ಪದಾಧಿಕಾರಿಗಳು ಅಬ್ಬರಕ್ಕೆ ಬದಲಾಗಿ ಜನರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ಮತಯಾಚನೆ ಮಾಡುತ್ತಾರೆಂದು ಚಿತ್ರನಟ, ಪಕ್ಷದ ಸ್ಥಾಪಕ ಉಪೇಂದ್ರ ಹೇಳಿದರು.

ಸಭೆ, ಸಮಾರಂಭ, ರ‌್ಯಾಲಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ. ಒಂದು ವೇಳೆ ಅದನ್ನು ಮಾಡಬೇಕಾದರೆ ನಾವು ಹಣವಿರುವವರನ್ನೇ ಹುಡುಕಬೇಕಾಗುತ್ತದೆ. ಅದು ನಮ್ಮ ಉದ್ದೇಶವಲ್ಲ. ಅದರ ಬದಲಿಗೆ ನಮ್ಮ ವಿಚಾರ ಜನರಿಗೆ ತಿಳಿಸಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಚಾರದಿಂದಲೇ ಜನರನ್ನು ತಲುಪುವ ಉದ್ದೇಶವಿದೆ. ಅದು ಅಷ್ಟೊಂದು ಸುಲಭವಲ್ಲ. ಆದರೆ, ಮುಂದಿನ ಕೆಲ ವರ್ಷಗಳಲ್ಲಿ ಸಾಧ್ಯವಾಗಲಿದೆ. ಪ್ರಧಾನಿ ಮೋದಿ ಅವರು ನೋಟು ಅಮಾನ್ಯೀಕರಣಗೊಳಿಸಿದ ಕೆಲ ಗಂಟೆಯಲ್ಲಿಯೇ ದೇಶದ ಮೂಲೆ ಮೂಲೆಗೂ ಮಾಹಿತಿ ಹೋಗಿತ್ತು. ಅಂತೆಯೇ, ನಮ್ಮ ವಿಚಾರಗಳು ಜನರನ್ನು ತಲುಪುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಣಾಳಿಕೆ ಹೆಸರಿನಲ್ಲಿ ಪಕ್ಷಗಳು ಹುಡುಗಾಟ ಆಡುತ್ತಿವೆ. ಅಲ್ಲದೆ, ಏನು ಬೇಕಾದರೂ ಬರೆದುಕೊಳ್ಳಬಹುದೆಂಬಂತೆ ನಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ಈ ಬಗ್ಗೆ ಹೊಸ ಕಾನೂನು ರೂಪುಗೊಂಡು, ಪ್ರಣಾಳಿಕೆಯಲ್ಲಿ ಘೋಷಿಸಿದ ಕೆಲಸ ಆಗದಿದ್ದರೆ ಕ್ರಮ ತೆಗೆದುಕೊಳ್ಳುವಂತಾಗಬೇಕು. ರಾಜಕೀಯದಲ್ಲಿ ಜಾತಿ, ಹಣ ಹೆಮ್ಮರವಾಗಿ ಬೆಳೆದಿದೆ. ಆದರೆ, ಮುಂದಿನ ಪೀಳಿಗೆಗಾಗಿ ಇದು ಬದಲಾಗಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ನಮ್ಮ ಪಕ್ಷದಲ್ಲಿ ಸ್ಟಾರ್‌ಗಳಿಲ್ಲ. ಬದಲಿಗೆ ಇರುವವರೆಲ್ಲ ಸ್ಟಾರ್‌ಗಳೇ. ಯಾರು ಬೇಕಾದರೂ ಬರಬಹುದು. ಸಮಾಜಸೇವೆ, ಪ್ರಾಮಾಣಿಕತೆ ಬೆಳೆಸಿಕೊಂಡಿರಬೇಕು. ಇನ್ನು ನಾವು ಮುಂದಿನ ದಿನಗಳಲ್ಲಿಯೂ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ಮಾಡಿಕೊಂಡರೆ ಜನರು ತಿಳಿಸುವ ಸಲಹೆ, ಮಾರ್ಗದರ್ಶನದ ನಿಯಮ ಪಾಲಿಸುವಂತೆ ಸೂಚಿಸಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದರು. ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ದಿವಾಕರ್ ಸಿ.ಪಿ.ಗೌಡ ಇದ್ದರು.