ಸಮನ್ವಯತೆ ಸಾಧಿಸಲು ಡಿವಿಎಸ್ ಮನೆಯಲ್ಲಿ ಸಭೆ: ಸಂಸದ ಬಸವರಾಜ ಬೊಮ್ಮಾಯಿ
ಬೆಂಗಳೂರು: ಪಕ್ಷದಲ್ಲಿ ಸಂಘಟನಾ ಪರ್ವ ಹಾಗೂ ಚುನಾವಣಾ ಪರ್ವ ನಡೆಯುತ್ತಿವೆ. ಅವೆರಡನ್ನು ಸಮನ್ವಯಗೊಳಿಸಿ ಮೊದಲ ಹಂತದಲ್ಲಿ ಆಗುವ ಪ್ರಕ್ರಿಯೆ ಬಗ್ಗೆ ಜಿಲ್ಲಾ ನಾಯಕರ ಜೊತೆ ಸಹಮತದ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ನಾವು ಸೇರಿದ್ದೇವು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಮನೆಯಲ್ಲಿ ಬುಧವಾರ ರಾತ್ರಿ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡಳ ಹಾಗೂ ಜಿಲ್ಲಾಮಟ್ಟದ ಅಧ್ಯಕ್ಷರ ನೇಮಕ ಕುರಿತು ಈಗಾಗಲೇ ಜಿಲ್ಲಾ ಮಟ್ಟದ ನಾಯಕರೊಂದಿಗೆ ಭೇಟಿ ಮಾಡಿ ಒಂದು ಹಂತದ ಚರ್ಚೆ ಮಾಡಿ ಬಂದಿದ್ದಾರೆ. ಅದರ ಮುಂದುವರೆದ ಭಾಗವಾಗಿ ನಾವು ಎಲ್ಲ ಜಿಲ್ಲಾ ನಾಯಕರ ಜತೆ ಚರ್ಚೆ ಮಾಡುವ ಸಲುವಾಗಿ ನಾವು ಸೇರಿದ್ದೆವು ಎಂದರು.
ಪಕ್ಷಕ್ಕೆ ಶಕ್ತಿ ತುಂಬಲು ಬದ್ಧ
ಇನ್ನೊಂದು ರಾಜ್ಯದಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಕಟ್ಟಲು ನಾವು ಬದ್ದರಾಗಿರುವವರು, ನಾವು ಬಿಜೆಪಿ ಪರವಾಗಿರುವವರು, ಬಿಜೆಪಿಯನ್ನ ಶಕ್ತಿಯುತವಾಗಿ ಕಟ್ಟುವ ಸಲುವಾಗಿ ಒಗ್ಗಟ್ಟಿನಿಂದ ಸಾಗುತ್ತೇವೆ. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು.
ಕೋರ್ ಕಮಿಟಿಯಲ್ಲಿ ಯಾರಿಗೂ ಯಾರೂ ವಾರ್ನಿಂಗ್ ಮಾಡಿಲ್ಲ, ಹಲವು ವಿಚಾರಗಳು ಸೌಹರ್ದಯುತವಾಗಿ ಚರ್ಚೆ ಆಗಿದೆ. ಆದಷ್ಟು ಎಲ್ಲವನ್ನು ಬಗೆಹರಿಸಲಾಗುವುದು. ಮಾಜಿ ಸಚಿವ ಬಿ.ಶ್ರೀರಾಮುಲು ಜತೆಗೆ ಮಾತನಾಡಿದ್ದು, ಮನವೊಲಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದರು.
ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಪ್ರತಿಕ್ರಿಯಿಸಿ ಪಕ್ಷದ ರಾಜ್ಯ ಉಸ್ತುವಾರಿ ಒಂದಷ್ಟು ವಿಚಾರಗಳನ್ನು ತಿಳಿಸಿ, ಸಭೆ ಸೇರಿ ಚರ್ಚಿಸಿ ಮಾಹಿತಿ ನೀಡಲು ಸೂಚಿಸಿದ್ದಾರೆ. ಅದರಂತೆ ಮಾತುಕತೆ ನಡೆಸಿದ್ದೇವೆ. ಈ ಬಗ್ಗೆ ವರಿಷ್ಠರಿಗೆ ವರದಿ ಸಲ್ಲಿಸುತ್ತೇವೆ ಎಂದರು.