ಸಸಿ ನೆಟ್ಟಿದ್ದ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

ಇಳಕಲ್ಲ (ಗ್ರಾ): ಹುಚನೂರ ರಸ್ತೆ ಪಕ್ಕದಲ್ಲಿ ನೆಟ್ಟಿದ್ದ 300 ಸಸಿಗಳು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಒಣಗುತ್ತಿರುವ ಕುರಿತ ದೂರು ಬಂದ ಹಿನ್ನೆಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ ಹಂಚಾಟೆ ಅವರ ಆದೇಶ ಮೇರೆಗೆ ಹುನಗುಂದ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಧೀಶ ಮೋಹನ್ ಬಾಬು ಹಾಗೂ ಅಡಿಷನಲ್ ಸಿವಿಲ್ ನ್ಯಾಯಾಧೀಶ ಜಗದೀಶಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅರಣ್ಯ ಇಲಾಖೆ ನಿರ್ಲಕ್ಷೃ, ಸಸಿಗಳು ನೆಟ್ಟ ಜಾಗದಲ್ಲಿ ಗ್ರಾನೈಟ್ ಕಾರ್ಖಾನೆ ತ್ಯಾಜ್ಯ (ಮಡ್ಡು) ಸಸಿಗಳಿಗೆ ನೀರು ಹಾಕಿದಾಗ ಬಂದು ಸೇರುತ್ತಿರುವುದು, ರಾತ್ರಿ ಕುಡುಕರ ದಂಡು ಕುಡಿದು ಪ್ಲಾಸ್ಟಿಕ್, ಗಾಜಿನ ಬಾಟಲ್, ಕಸವನ್ನು ಸಸಿಗಳ ಮೇಲೆ ಹಾಕಿ ಹೋಗುತ್ತಿರುವುದರಿಂದ ಸಸಿಗಳು ಒಣಗುತ್ತಿವೆ. ಈ ಕುರಿತು ಬಂದ ದೂರಿನ ಅನ್ವಯ ನ್ಯಾಯಾಧೀಶರು ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆ ಬಗೆಹರಿಸಲು ಮುಂದಾದರು.

ನ್ಯಾಯಾಧೀಶರು ಮಾತನಾಡಿ, ಅಧಿಕಾರಿಗಳೊಡನೆ ಸಾರ್ವಜನಿಕರು ಸಹಕಾರ ನೀಡಬೇಕು. ಕಾನೂನು ಬಾಹಿರ ಚಟುವಟಿಕೆ ನಡೆದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ನಂತರ ಹುಚನೂರು ರಸ್ತೆ ಹಾಗೂ ಹುನಗುಂದ ಇಳಕಲ್ಲ ಹೆದ್ದಾರಿ ಪಕ್ಕದ ಹಳ್ಳದ ಮೇಲೆ ಹಾಕಿರುವ ಗ್ರಾನೈಟ್ ತ್ಯಾಜ್ಯದ ಕುರಿತು ಪರಿಶೀಲನೆ ನಡೆಸಿದರು. ನಗರಸಭೆ ಸಿಬ್ಬಂದಿ, ಪಿಎಸ್‌ಐ ಅನಿಲ ರಾಠೋಡ, ಹುನಗುಂದ ಆರ್‌ಎ್ಒ ವೀರೇಶ, ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.