ಆಮ್‌ ಆದ್ಮಿ ಪಕ್ಷದ ನಾಯಕಿ ಮೀರಾ ಸನ್ಯಾಲ್‌ ಇನ್ನಿಲ್ಲ

ನವದೆಹಲಿ: ಶ್ರೇಷ್ಠ ಬ್ಯಾಂಕರ್‌ ಆಗಿದ್ದು ಬಳಿಕ ರಾಜಕೀಯಕ್ಕೆ ಬಂದು ಆಮ್‌ ಆದ್ಮಿ ಪಕ್ಷಕ್ಕೆ ಸೇರಿದ್ದ ಮೀರಾ ಸನ್ಯಾಲ್‌ ಅವರಿಂದು ತಮ್ಮ ನಿವಾಸದಲ್ಲಿ ಅನಾರೋಗ್ಯದಿಂದಾಗಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
57 ವರ್ಷದ ಸನ್ಯಾಲ್‌ ಅವರು ಎರಡು ವರ್ಷಗಳಿಂದಲೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ನನ್ನ ಸಹೋದ್ಯೋಗಿ, ಪಕ್ಷದ ನಾಯಕಿ ಮೀರಾ ಸನ್ಯಾಲ್ ಅವರು ಇಲ್ಲ ಎನ್ನುವುದನ್ನು ಅತ್ಯಂತ ನೋವಿನಿಂದ ಹಂಚಿಕೊಳ್ಳುತ್ತಿದ್ದೇನೆ. ನಾನು ಎಂದಿಗೂ ಅವರಂತ ಹೆಚ್ಚು ಆಕರ್ಷಕ, ಗಂಭೀರವಾದ ವ್ಯಕ್ತಿಯನ್ನು ಭೇಟಿಯಾಗಿಲ್ಲ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ತಡೆಯುವ ಶಕ್ತಿ ಬರಲೆಂದು ಪ್ರಾರ್ಥಿಸುತ್ತೇನೆ ಎಂದು ಆಪ್‌ನ ಕಾರ್ಯಕಾರಿ ಸಮಿತಿಯ ಸದಸ್ಯೆ ಪ್ರೀತಿ ಶರ್ಮಾ ಮೆನನ್‌ ಅವರು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸಂತಾಪ ವ್ಯಕ್ತಪಡಿಸಿದ್ದು, ದುಖಃವನ್ನು ವ್ಯಕ್ತಪಡಿಸಲು ಯಾವುದೇ ಪದಗಳಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಪಕ್ಷದ ನಾಯಕ ಮನಿಶ್‌ ಸಿಸೋಡಿಯಾ ಕೂಡ ಟ್ವೀಟ್‌ ಮಾಡಿ, ಮೀರಾ ಸನ್ಯಾಲ್‌ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತೇನೆ. ದೇಶವು ಚುರುಕಾದ ಆರ್ಥಿಕ ಮಿದುಳನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರೆಂದು ನಮ್ಮ ಹೃದಯದಲ್ಲಿರುತ್ತಾರೆ ಎಂದು ಹೇಳಿದ್ದಾರೆ.

ರಾಯಲ್‌ ಬ್ಯಾಂಕ್‌ ಆಫ್‌ ಸ್ಕಾಟ್ಲೆಂಡ್​ನ ಮುಖ್ಯ ಕಾರ್ಯನಿರ್ವಹಕರಾಗಿದ್ದ ಸನ್ಯಾಲ್‌ ಅವರು ಕೆಲಸವನ್ನು ತೊರೆದ ನಂತರ ಆಮ್​ ಆದ್ಮಿ ಪಕ್ಷವನ್ನು ಸೇರಿದ್ದರು. ಮುಂಬೈ ದಕ್ಷಿಣದಿಂದ 2014ರಲ್ಲಿ ಕಾಂಗ್ರೆಸ್‌ನ ಮಿಲಿಂದ್‌ ಡಿಯೋರಾ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಉತ್ತಮ ಸಾಮಾಜಿಕ ಕಾರ್ಯಕರ್ತೆಯು ಆಗಿದ್ದ ಇವರು ದಿ ಬಿಗ್‌ ರಿವರ್ಸ್‌: ಹೌವ್‌ ಡಿಮಾನಿಟೈಜೇಶನ್‌ ನಾಕಡ್‌ ಇಂಡಿಯಾ ಔಟ್‌(The Big Reverse: How Demonetization Knocked India Out) ಪುಸ್ತಕವನ್ನು ಕೂಡ ಬರೆದಿದ್ದರು. (ಏಜೆನ್ಸೀಸ್)