ಹೆಸರುಕಾಳು ಖರೀದಿಗೆ ಮೀನಮೇಷ

ಬಸವರಾಜ ಇದ್ಲಿ ಹುಬ್ಬಳ್ಳಿ

ಧಾರವಾಡ, ಗದಗ ಜಿಲ್ಲೆ ಸೇರಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರುಕಾಳು ಖರೀದಿ ಕೇಂದ್ರ ಆರಂಭಿಸಲು ಸರ್ಕಾರ ಸೂಚನೆ ನೀಡಿ ಒಂದು ತಿಂಗಳು ಕಳೆಯುತ್ತ ಬಂದರೂ ಪ್ರಕ್ರಿಯೆ ಶುರವಾಗದೇ ಬೆಳೆಗಾರರು ನೂರೆಂಟು ತೊಂದರೆ ಎದುರಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಹೆಸರುಕಾಳು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಮುಂದಾಗಿ ಅಗತ್ಯ ಸಹಕಾರ ನೀಡಿದೆ. ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಕಳೆದ ತಿಂಗಳು ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಆಯಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.

ಅದರಂತೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 20 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೂ ನೋಂದಣಿ ಪ್ರಕ್ರಿಯೆ ಮಾತ್ರ ನಡೆಸಲಾಗಿದೆ. ಕಾಳು ಖರೀದಿ ಮಾಡುತ್ತಿಲ್ಲ. ಇದರಿಂದ ರೈತರು ಬೇಸತ್ತು ಹೋಗಿದ್ದಾರೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಮೊರಬ, ಆರೇಕುರಹಟ್ಟಿ, ಬ್ಯಾಹಟ್ಟಿ, ನೂಲ್ವಿ ಸೇರಿ 20 ಕೇಂದ್ರಗಳಲ್ಲಿ ಈ ವರೆಗೆ 4,123 ರೈತರು ಹೆಸರುಕಾಳು ಖರೀದಿಗೆ ಕೊಡಲು ನೋಂದಣಿ ಮಾಡಿಕೊಂಡಿದ್ದಾರೆ.

ಆದರೆ, ಖರೀದಿ ಕೇಂದ್ರಕ್ಕೆ ಹೆಸರುಕಾಳು ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಹೇಳುತ್ತಿಲ್ಲ. ಬೆಳೆಗಾರರು ಫಸಲು ಮನೆಯಲ್ಲಿ ಇಟ್ಟುಕೊಳ್ಳಲು ಆಗದೇ, ಮಾರಾಟ ಮಾಡಲೂ ಆಗದೇ ತಾಪತ್ರಯ ಎದುರಿಸುತ್ತಿದ್ದಾರೆ.

ಗದಗ ಹಾಗೂ ಧಾರವಾಡ ಜಿಲ್ಲೆಯ ಮುಕ್ತ ಮಾರುಕಟ್ಟೆಯಲ್ಲಿ ಹೆಸರುಕಾಳು ದರ ಕಡಿಮೆ ಇದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಹೆಸರುಕಾಳು ಬುಧವಾರ ಪ್ರತಿ ಕ್ವಿಂಟಾಲ್​ಗೆ 6,500 ರೂಪಾಯಿಗೆ ಮಾರಾಟವಾಗಿದೆ. ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಾಲ್​ಗೆ 8,682 ರೂ. ನಿಗದಿ ಮಾಡಲಾಗಿದೆ. ಸುಮಾರು 2 ಸಾವಿರ ರೂ. ವ್ಯತ್ಯಾಸ ಇದೆ.

ಹಾಗಾಗಿ, ಖರೀದಿ ಕೇಂದ್ರದ ಮೇಲೆ ಭರವಸೆ ಇಟ್ಟುಕೊಂಡು ರೈತರು ಕಾಯುತ್ತಿದ್ದಾರೆ. ನಿತ್ಯವೂ ಖರೀದಿ ಕೇಂದ್ರಗಳಿಗೆ ಹೋಗಿ ವಿಚಾರಿಸುತ್ತಿದ್ದಾರೆ. ಸದ್ಯ ಖರೀದಿ ಕೇಂದ್ರಗಳಲ್ಲಿ ಸಾಫ್ಟ್​ವೇರ್ ಅಳವಡಿಕೆ ಹಾಗೂ ಅದರ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಇನ್ನೆರಡು ದಿನದಲ್ಲಿ ಖರೀದಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ವಿಳಂಬಕ್ಕೆ ಕಾರಣವೇನು:

ಖರೀದಿ ಪ್ರಕ್ರಿಯೆಯನ್ನು ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಇದರಿಂದ ರೈತರು ಅನಿವಾರ್ಯವಾಗಿ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಬೆಂಬಲ ಬೆಲೆಯಲ್ಲಿ ಖರೀದಿ ಆರಂಭವಾಗುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಹೆಸರುಕಾಳು ಇಲ್ಲಿಗೂ ಬರುತ್ತದೆ. ಈ ಮೂಲಕ ಅಧಿಕಾರಿಗಳು ಯಾರಿಗೆ ಲಾಭ ಮಾಡಿಕೊಡಲು ಹೊರಟಿದ್ದಾರೆ? ಎಂಬುದೇ ಗೊತ್ತಾಗುವುದಿಲ್ಲ ಎಂದು ಅನೇಕ ರೈತರು ಪ್ರಶ್ನಿಸುತ್ತಿದ್ದಾರೆ.

ಗುರಿ ಮೀರಿ ಬಿತ್ತನೆ:

2024ರ ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 2,70,840 ಹೆಕ್ಟೇರ್ ಬಿತ್ತನೆ ಪ್ರದೇಶ ನಿಗದಿ ಮಾಡಲಾಗಿತ್ತು. ಇದರಲ್ಲಿ ಪ್ರಮುಖ ಬೆಳೆ ಹೆಸರು 67,150 ಹೆಕ್ಟೇರ್ ಬಿತ್ತನೆಯ ಗುರಿ ಇತ್ತು. ಆದರೆ, ಗುರಿ ಮೀರಿ ಹೆಸರು ಬಿತ್ತನೆಯಾಗಿದ್ದು, 94,956 ಹೆಕ್ಟೇರ್​ನಲ್ಲಿ ಬೆಳೆಯಲಾಗಿದೆ. ಸುಮಾರು 27ಸಾವಿರ ಹೆಕ್ಟೇರ್ ಹೆಚ್ಚು ಬಿತ್ತನೆಯಾಗಿದೆ. ಹಾಗಾಗಿ, ಗುರಿ ಮೀರಿ ಬಿತ್ತನೆಯಾಗಿದ್ದು, ನಿರೀಕ್ಷೆಗಿಂತ ಹೆಚ್ಚು ಫಸಲು ಬಂದಿದೆ.

ಧಾರವಾಡ ಜಿಲ್ಲೆಯಲ್ಲಿ 20 ಖರೀದಿ ಕೇಂದ್ರ ತೆರೆಯಲಾಗಿದೆ. ನೋಂದಣಿಯಾಗಿರುವ ರೈತರಿಂದ ಶೀಘ್ರ ಹೆಸರು ಖರೀದಿ ಮಾಡಲಾಗುವುದು. ಇದಕ್ಕಾಗಿ ಸಾಫ್ಟ್​ವೇರ್ ಪರಿಶೀಲನೆ ನಡೆಸಲಾಗುತ್ತಿದೆ.

ವಿನಯ ಪಾಟೀಲ, ಶಾಖಾ ವ್ಯವಸ್ಥಾಪಕರು, ಮಾರ್ಕೆಟಿಂಗ್ ಫೆಡರೇಷನ್

ಹೆಸರುಕಾಳು ಫಸಲು ಕೈಗೆ ಬಂದು ಒಂದೂವರೇ ತಿಂಗಳು ಕಳೆದಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿಲ್ಲ ಎಂದು ಬೆಂಬಲ ಬೆಲೆ ಖರೀದಿ ಕೇಂದ್ರಗಳಿಗೆ ಕೊಡಬೇಕೆಂದರೆ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ಸಣ್ಣ ರೈತರು ಫಸಲು ಇಟ್ಟುಕೊಳ್ಳಲು ಆಗದೇ ತೊಂದರೆ ಪಡುತ್ತಿದ್ದಾರೆ. ಕೂಡಲೇ ಖರೀದಿ ಆರಂಭಿಸಬೇಕು.

ಸುಭಾಸ ಬೂದಿಹಾಳ, ಕೋಳಿವಾಡ ರೈತರು

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…