ಜಿಎಸ್​ಟಿ ಧಮಾಕಾ!

ನವದೆಹಲಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ, ಆರ್ಥಿಕವಾಗಿ ದುರ್ಬಲರಾದ ಮೇಲ್ವರ್ಗದವರಿಗೆ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಶೇ.10 ಮೀಸಲಾತಿ ಘೋಷಿಸಿದ್ದ ಕೇಂದ್ರ ಸರ್ಕಾರ ಇದೀಗ ದೇಶದ 18 ಲಕ್ಷ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಜಿಎಸ್​ಟಿಯಲ್ಲಿ ಭರ್ಜರಿ ವಿನಾಯಿತಿ ಪ್ರಕಟಿಸಿದೆ. ಗುರುವಾರ ನಡೆದ 32ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಸಣ್ಣ, ಮಧ್ಯಮ ಉದ್ದಿಮೆಗಳ ಜಿಎಸ್​ಟಿ ವಿನಾಯಿತಿ ಮಿತಿಯನ್ನು 20ರಿಂದ 40 ಲಕ್ಷ ರೂ.ಗೆ ಏರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜತೆಯಲ್ಲೇ ಈಶಾನ್ಯ ರಾಜ್ಯಗಳ ಸಣ್ಣ ಉದ್ದಿಮೆಗಳಿಗಿದ್ದ ಜಿಎಸ್​ಟಿ ಸಂಯೋಜಿತ ಯೋಜನೆ ಮಿತಿಯನ್ನೂ 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಜಿಎಸ್​ಟಿ ಸಂಯೋಜಿತ ಯೋಜನೆಗೆ ಅರ್ಹತೆ ಪಡೆಯ ಬೇಕಾದ ಸಣ್ಣ ಉದ್ದಿಮೆಗಳ ವಾರ್ಷಿಕ ವಹಿವಾಟು ಮೊತ್ತವನ್ನು 1 ಕೋಟಿ ರೂ.ನಿಂದ 1.5 ಕೋಟಿ ರೂ.ಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು ಏ.1ರಿಂದಲೇ ಇದು ಜಾರಿಗೆ ಬರಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.

ವಾರ್ಷಿಕ ರಿಟರ್ನ್ಸ್: ಸಂಯೋಜಿತ ಯೋಜನೆಗೆ ಒಳಪಡುವ ಉದ್ದಿಮೆ ಗಳು ಇನ್ಮುಂದೆ ತೆರಿಗೆಯನ್ನು ತ್ರೖೆಮಾಸಿಕ ಆಧಾರದಲ್ಲಿ ಕಟ್ಟಬೇಕು. ಆದರೆ ರಿಟರ್ನ್ಸ್ ಮಾತ್ರ ವಾರ್ಷಿಕವಾಗಿ ಸಲ್ಲಿಸಬೇಕಿದೆ.

ಉತ್ಪಾದಕರಿಗೆ ವಿನಾಯಿತಿ: ಸೇವಾದಾರರು ಮತ್ತು ಸರಕು, ಸೇವೆಗಳನ್ನು ಪೂರೈಸುವವರ ವಾರ್ಷಿಕ ವಹಿವಾಟು ಮೊತ್ತ 50 ಲಕ್ಷ ರೂ.ವರೆಗಿದ್ದರೆ, ಅಂಥವರು ಜಿಎಸ್​ಟಿ ಸಂಯೋಜಿತ ಯೋಜನೆಗೆ ಅರ್ಹತೆ ಪಡೆಯಲಿದ್ದಾರೆ. ಯೋಜನೆಗೆ ಸೇರ್ಪಡೆಯಾದ ಉತ್ಪಾದಕರು, ವಿತರಕರು ಶೇ. 1 ವಿನಾಯಿತಿ ದರದಲ್ಲಿ ತೆರಿಗೆ ಪಾವತಿಸಬೇಕಿದೆ. ರೆಸ್ಟೋರೆಂಟ್​ಗಳಿಗೆ ಶೇ. 5 ಜಿಎಸ್​ಟಿ ಅನ್ವಯವಾಗಲಿದೆ. ಈ ನಿರ್ಧಾರಗಳಿಂದ ವಾರ್ಷಿಕ ತೆರಿಗೆ ಸಂಗ್ರಹದಲ್ಲಿ 3ಸಾವಿರ ಕೋಟಿ ರೂ. ಏರುಪೇರಾಗುವ ಅಂದಾಜಿದೆ.

ಜಿಎಸ್​ಟಿಗೆ ರಿಯಲ್ ಎಸ್ಟೇಟ್, ಲಾಟರಿ: ಜಿಎಸ್​ಟಿ ಮಂಡಳಿಯು ರಿಯಲ್​ಎಸ್ಟೇಟ್ ಮತ್ತು ಲಾಟರಿಯನ್ನು ಜಿಎಸ್​ಟಿಪಿ ವ್ಯಾಪ್ತಿಗೆ ತಂದಿದೆ.

ಈ ಕುರಿತು ಸಭೆಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆ ಏಳು ಸಚಿವರ ಸಮಿತಿ ರಚಿಸಲಾಗಿದ್ದು, ಅಂತಿಮ ನಿರ್ಧಾರವನ್ನು ಸಮಿತಿಗೆ ಒಪ್ಪಿಸಲಾಗಿದೆ.

ಉಚಿತ ಬಿಲ್ಲಿಂಗ್: ಎಷ್ಟು ಜಿಎಸ್​ಟಿ ಕಟ್ಟಬೇಕು ಎಂಬ ಗೊಂದಲ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಹಿನ್ನೆಲೆ ಸಣ್ಣ ಪ್ರಮಾಣದ ವ್ಯಾಪಾರಸ್ಥರಿಗೆ ನೆರವಾಗಲು ಕೇಂದ್ರ ಸರ್ಕಾರ ಮುಂದಾಗಿದೆ. ಜಿಎಸ್​ಟಿ ಜಾಲಕ್ಕೆ (ಜಿಎಸ್​ಟಿಎನ್) ನೋಂದಾಯಿತರಾಗಿರುವ ಸಣ್ಣ ಪ್ರಮಾಣದ ತೆರಿಗೆ ಪಾವತಿದಾರರಿಗೆ ಹಣಕಾಸು ಲೆಕ್ಕಾಚಾರ ಮತ್ತು ಬಿಲ್ಲಿಂಗ್ ಸಾಫ್ಟ್​ವೇರ್ ಉಚಿತವಾಗಿ ನೀಡಲು ಜಿಎಸ್​ಟಿ ಮಂಡಳಿ ತೀರ್ವನಿಸಿದೆ.

ಮೇಲ್ತೆರಿಗೆ ಅವಕಾಶ: ಪ್ರವಾಹಕ್ಕೆ ತುತ್ತಾಗಿದ್ದ ಕೇರಳದಲ್ಲಿ ಶೇ.1 ಪ್ರಕೃತಿ ವಿಕೋಪ ಮೇಲ್ತೆರಿಗೆ ವಿಧಿಸುವುದಕ್ಕೆ ಜಿಎಸ್​ಟಿ ಮಂಡಳಿ ಸರ್ಕಾರಕ್ಕೆ ಅನುಮತಿ ನೀಡಿದೆ.

40 ಲಕ್ಷ ರೂ. ವರೆಗೆ ವಿನಾಯಿತಿ ನೀಡಿರುವುದು ಸಣ್ಣ, ಮಧ್ಯಮ ಉದ್ದಿಮೆಗಳಿಗೆ ಲಾಭದಾಯಕ. ಜತೆಗೆ ಅದನ್ನು ಜಾರಿಗೆ ತರುವ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳ ಆಯ್ಕೆಗೆ ಬಿಟ್ಟಿರುವುದು ಚುನಾವಣೆ ತಂತ್ರವೂ ಆಗಿದೆ. ಬಿಜೆಪಿ ಆಡಳಿತ ರಾಜ್ಯಗಳು ಈ ನಿಯಮ ಪಾಲಿಸುವುದು ನಿಶ್ಚಿತ. ಇತರ ರಾಜ್ಯಗಳು ಹೆಚ್ಚಿನ ತೆರಿಗೆ ಆಸೆಯಿಂದ ವಿನಾಯಿತಿ ನೀಡಲು ಒಪ್ಪದಿದ್ದರೆ ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

| ಸಿ.ಎಸ್.ಸುಧೀರ್ ಆರ್ಥಿಕ ತಜ್ಞ

ಜಿಎಸ್​ಟಿ ಸಂಯೋಜಿತ ಯೋಜನೆ ಅನ್ವಯ ವಿನಾಯಿತಿ ಮಿತಿ ಜಾರಿಗೆ ತರುವ ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದೇವೆ. ಒಂದು ವಾರದೊಳಗೆ ವಿನಾಯಿತಿ ಮಿತಿ ಅನುಸರಿಸುವ ಅಥವಾ ತಿರಸ್ಕರಿಸುವ ಕುರಿತು ಸಚಿವಾಲಯಕ್ಕೆ ಆಯಾ ರಾಜ್ಯ ಸರ್ಕಾರಗಳು ತಿಳಿಸಬೇಕಿದೆ.

| ಅರುಣ್ ಜೇಟ್ಲಿ ವಿತ್ತ ಸಚಿವ

ಇನ್ನೂ ಇದೆ ಬಂಪರ್

ಈ ಹಿಂದಿನ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಶೇ. 28 ಸ್ಲ್ಯಾಬ್​ನಲ್ಲಿರುವ ಏಳು ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿತ್ತು. ಥರ್ಡ್ ಪಾರ್ಟಿ ವಿಮೆ, ಸಿನಿಮಾ ಟಿಕೆಟ್ ದರ, ಬ್ಯಾಟರಿ, ಬ್ಯಾಂಕ್ ಸೇವಾ ಶುಲ್ಕ, ಧಾರ್ವಿುಕ ಯಾತ್ರಿಕರ ವಿಶೇಷ ವಿಮಾನ ಪ್ರಯಾಣ ದರಗಳ ಮೇಲಿನ ತೆರಿಗೆ ಇಳಿಕೆಯಾಗಿತ್ತು. ಕಳೆದ ಡಿಸೆಂಬರ್​ನಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಜನಸಾಮಾನ್ಯರು ಬಳಸುವ ಶೇ. 99 ವಸ್ತುಗಳ ಮೇಲಿನ ಜಿಎಸ್​ಟಿಯನ್ನು ಶೇ.18 ತೆರಿಗೆ ಸ್ಲ್ಯಾಬ್​ಗೆ ತರುವ ಭರವಸೆ ನೀಡಿದ್ದರು.

ಏನಿದು ಜಿಎಸ್​ಟಿ ಸಂಯೋಜಿತ ಯೋಜನೆ?

ತೆರಿಗೆ ಪಾವತಿದಾರರಿಗೆ ಜಿಎಸ್​ಟಿ ಅನ್ವಯ ಲಭ್ಯವಿರುವ ಅತಿ ಸುಲಭ ಮತ್ತು ಸರಳ ಯೋಜನೆ ಇದಾಗಿದೆ. ಜಿಎಸ್​ಟಿ ವ್ಯವಸ್ಥೆಯಲ್ಲಿರುವ ಹಲವು ಕ್ಲಿಷ್ಟಕರ ಸಂಪ್ರದಾಯಗಳನ್ನು ಬದಿಗೆ ಸರಿಸಿ ನಿಗದಿತ ವಹಿವಾಟು ಮೊತ್ತಕ್ಕೆ ಜಿಎಸ್​ಟಿಯನ್ನು ವಾರ್ಷಿಕವಾಗಿ ಪಾವತಿಸುವ ಯೋಜನೆ ಇದಾಗಿದೆ. 1 ಕೋಟಿ ರೂ.ಗೂ ಅಧಿಕ ವಾರ್ಷಿಕ ವಹಿವಾಟು ಇರುವ ತೆರಿಗೆ ಪಾವತಿದಾರರು ಈ ಯೋಜನೆಗೆ ಸೇರ್ಪಡೆಗೊಳ್ಳಲು ಅವಕಾಶ ಇದೆ.

ಈಶಾನ್ಯ ರಾಜ್ಯಗಳ ತೆರಿಗೆ ಪಾವತಿದಾರರಿಗೆ ವಾರ್ಷಿಕ ವಹಿವಾಟು ಮಿತಿಯನ್ನು 75 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ಆದರೆ ಏ.1ರಿಂದ ಈ ವಹಿವಾಟು ಮಿತಿಯನ್ನು 1.5 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಮತ್ತಷ್ಟು ಸಣ್ಣ ಉದ್ದಿಮೆದಾರರು ಮತ್ತು ತೆರಿಗೆ ಪಾವತಿದಾರರು ಸಂಯೋಜಿತ ಯೋಜನೆಗೆ ಸೇರ್ಪಡೆಗೊಳ್ಳಲು ಅವಕಾಶ ಸಿಗಲಿದೆ.

Leave a Reply

Your email address will not be published. Required fields are marked *