ಬೆಳಗಾವಿ: ಜಿಲ್ಲೆಯಲ್ಲಿನ ಔಷಧದ ಅಂಗಡಿಗಳಲ್ಲಿ ಕೆಮ್ಮು, ನೆಗಡಿ, ಜ್ವರಕ್ಕೆ ಸಂಬಂಧಿಸಿದ ಔಷಧ ತೆಗೆದುಕೊಳ್ಳುತ್ತಿರುವ ಜನರ ಮಾಹಿತಿ ಕಲೆಹಾಕಬೇಕು. ಅಲ್ಲದೆ, ಅವರನ್ನು ಶೀಘ್ರ ಪರೀಕ್ಷೆಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೂಚನೆ ನೀಡಿದ್ದಾರೆ.
ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜುಲೈ ಮತ್ತು ಆಗಸ್ಟ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶೀಘ್ರವಾಗಿ ಔಷಧ ಖರೀದಿ ಮಾಡುವವರ ಮಾಹಿತಿ ಪತ್ತೆ ಹಚ್ಚಲು ಮುಂದಾಗಬೇಕು ಎಂದರು.
ವೆಂಟಿಲೇಟರ್‌ಗಳಿಗಿಲ್ಲ ಕೊರತೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತ ನಾಡಿ, ಜಿಲ್ಲೆಯಲ್ಲಿ 396 ಕೋವಿಡ್-19 ಪ್ರಕರಣಗಳ ಪೈಕಿ 316 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 74 ಸಕ್ರಿಯ ಪ್ರಕರಣಗಳಿದ್ದು, ಅವರಿಗೆ ಬಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಮ್ಸ್ ನಲ್ಲಿ 85, 9 ತಾಲೂಕು ಆಸ್ಪತ್ರೆಗಳಲ್ಲಿ 900 ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎರಡು ಪ್ರಯೋಗಾಲಯಗಳಲ್ಲಿ ನಿತ್ಯ 500 ಜನರ ಗಂಟಲು ದ್ರವದ ಮಾದರಿ ತಪಾಸಣೆ ಮಾಡಲಾಗುತ್ತಿದೆ. ಈ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಜತೆ ಚರ್ಚಿಸಲಾಗುತ್ತಿದೆ. ಒಟ್ಟು 27 ವೆಂಟಿಲೇಟರ್‌ಗಳಿದ್ದು, ಸದ್ಯಕ್ಕೆ ಕೊರತೆ ಕಂಡುಬಂದಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.
ಶಿಸ್ತು ಕ್ರಮಕ್ಕೆ ಸೂಚನೆ: ಹೊಸ ಮಾರ್ಗಸೂಚಿ ಪ್ರಕಾರ ಜು.7ರಿಂದಲೇ ಎಲ್ಲರಿಗೂ ಹೋಂ ಕ್ವಾರಂಟೈನ್ ಮಾಡಲಾಗುತ್ತಿದ್ದು, ಜಿಪಿಆರ್ ಎಸ್ ಮೂಲಕ ಸೋಂಕಿತರ ಮೇಲೆ ನಿಗಾ ವಹಿಸಲಾಗುತ್ತಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲು ತಹಸೀಲ್ದಾರ್, ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹಿರೇಮಠ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕೆ.ವಿ.ರಾಜೇಂದ್ರ ಮಾತನಾಡಿ, ಹೋಂ ಕ್ವಾರಂಟೈನ್ ಇರುವವರ ಮೇಲೆ ನಿಗಾ ವಹಿಸಲು ಗ್ರಾಪಂ ಮಟ್ಟದಲ್ಲೇ ತಂಡ ನಿಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ನಿತ್ಯ ಒಂದು ಸಾವಿರ ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಅನಿಲ ಬೆನಕೆ, ಮಹಾಂತೇಶ ಕೌಜಲಗಿ, ಡಿ.ಎಂ.ಐಹೊಳೆ, ಪಿ.ರಾಜೀವ್, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜ, ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸೋಂಕಿತ ಮಹಿಳೆಯರಿಗೆ ಹೆರಿಗೆ ಬಳಿಕ ಯಾವ ರೀತಿ ತಪಾಸಣೆ ನೀಡಲಾಗುತ್ತಿದೆ ಹಾಗೂ ಮಕ್ಕಳಿಗೆ ಸೋಂಕು ತಗುಲಿದೆಯೇ ಎಂಬುದರ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಗಡಿ ಗ್ರಾಮಗಳಲ್ಲಿ ವಲಸೆ ಕಾರ್ಮಿಕರ ಪ್ರಮಾಣ ಹೆಚ್ಚುತ್ತಿರುವುದರಿಂದ ಅಧಿಕಾರಿಗಳು ಅಗತ್ಯ ಎಚ್ಚರಿಕೆ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು.
| ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ
ಭಾನುವಾರದ ಲಾಕ್‌ಡೌನ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದರೂ, ಪೂರ್ಣಪ್ರಮಾಣದ ಫಲಿತಾಂಶ ಸಿಗುತ್ತಿಲ್ಲ. ಸೋಂಕು ನಿಯಂತ್ರಣಕ್ಕೆ ನಿರಂತರ ಜಾಗೃತಿ ಅವಶ್ಯವಾಗಿದೆ. ಭವಿಷ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಅಗತ್ಯ ಸಿದ್ಧತೆ ನಡೆಸಬೇಕು.
| ಸುರೇಶ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ
ಕ್ವಾರಂಟೈನ್‌ನಲ್ಲಿರುವ ಸೋಂಕಿತರು ತಪ್ಪಿಸಿಕೊಂಡು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಾಗಾಗಿ ಆಸ್ಪತ್ರೆಗಳಲ್ಲಿನ ಭದ್ರತೆ ಹೆಚ್ಚಿಸಲು ಹಾಗೂ ಸೋಂಕಿತರು ಸಮುದಾಯದ ಜತೆ ಸಂಪರ್ಕ ಸಾಧಿಸದಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
|ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ