ಔಷಧೀಯ ಗುಣಗಳ ಕಪ್ಪುಜೀರಿಗೆ

ಕಲೋಂಜಿ, ನೈಜೆಲ್ಲ ಸ್ಯಾಟಿವ ಎಂದೆಲ್ಲ ಕರೆಯಲ್ಪಡುವ ಕರಿಜೀರಿಗೆಯ ಬೀಜಗಳನ್ನು ಬಳಸುವ ರೂಢಿ ಅನೇಕರಲ್ಲಿದೆ. ಕಪ್ಪಾದ ಸಣ್ಣ ಸಣ್ಣ ಬೀಜಗಳಿವು. ಇದನ್ನು ಸಾಂಬಾರಪದಾರ್ಥವಾಗಿ ಬಳಸಬಹುದಾಗಿದ್ದು, ಪದಾರ್ಥಕ್ಕೆ ಉತ್ತಮ ರುಚಿ ಹಾಗೂ ಸುವಾಸನೆಯನ್ನು ಒದಗಿಸುತ್ತದೆ. ಭಾರತದಲ್ಲಿ ಕರ್ರಿ, ದಾಲ್​ಗಳ ತಯಾರಿಕೆಯಲ್ಲಿ ಹಾಗೂ ತರಕಾರಿಗಳನ್ನು ಹುರಿಯುವಾಗ ಪ್ಲೇವರ್ ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಆದರೆ ಇದರ ಬಳಕೆ ರುಚಿ, ಪರಿಮಳಕ್ಕೆ ಮಾತ್ರ ಸೀಮಿತವಲ್ಲ. ಅನೇಕ ಆರೋಗ್ಯ ಸಹಕಾರಿ ಗುಣಗಳಿಂದ ಭರಿತವಾದಂತಹ ಬೀಜಗಳಿವು.

ಕಪ್ಪುಜೀರಿಗೆ ಬೀಜಗಳಲ್ಲಿ ವಿಟಮಿನ್​ಗಳು, ಅಮೈನೋ ಆಮ್ಲಗಳು, ಸಪೋನಿನ್, ಓಲಿಕ್ ಆಮ್ಲ, ಪ್ರೋಟೀನ್, ಕಬ್ಬಿಣ, ಸೋಡಿಯಂ, ಪೊಟ್ಯಾಷಿಯಂ, ಕ್ಯಾಲ್ಶಿಯಂ ಹೆಚ್ಚಿನ ಪ್ರಮಾಣದಲ್ಲಿವೆ. ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಇವು ಬಹಳ ಸಹಕಾರಿ. ಕಿತ್ತಳೆಯ ರಸಕ್ಕೆ ಸ್ವಲ್ಪ ಪ್ರಮಾಣದಲ್ಲಿ ಕಪ್ಪುಜೀರಿಗೆ ಎಣ್ಣೆಯನ್ನು ಸೇರಿಸಿ ದಿನಕ್ಕೆರಡು ಬಾರಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ಕಡಿಮೆಯಾಗುತ್ತದೆ. ಮುಖಕ್ಕೆ ಹೊಳಪು ಬರುತ್ತದೆ ಹಾಗೂ ಕಪ್ಪು ಕಲೆ ಸಹ ಕಡಿಮೆಯಾಗುತ್ತದೆ. ಹಿಮ್ಮಡಿಗೆ ಹಚ್ಚುವುದರಿಂದ ಹಿಮ್ಮಡಿ ಒಡಕು ಕಡಿಮೆಯಾಗುತ್ತದೆ.

ನೆನಪಿನಶಕ್ತಿಯ ವೃದ್ಧಿಗೆ ಕಪ್ಪುಜೀರಿಗೆ ಬೀಜಗಳು ಉತ್ತಮ. ಈ ಬೀಜಗಳನ್ನು ಜಜ್ಜಿಕೊಂಡು ಜೇನುತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿಯ ಹೆಚ್ಚಳಕ್ಕೆ ಸಹಾಯವಾಗುತ್ತದೆ. ವೃದ್ಧರು ಸೇವಿಸುವುದರಿಂದ ಮರೆಗುಳಿತನವನ್ನು ತಡೆಗಟ್ಟಲು ಸಹಾಯವಾಗಬಹುದು. ಅಲ್ಲದೆ ಬಿಸಿನೀರಿಗೆ ಕಪ್ಪುಜೀರಿಗೆ ಪುಡಿಯನ್ನು (ಕಪ್ಪುಜೀರಿಗೆ ಬೀಜಗಳನ್ನು ಆಗಲೇ ಪುಡಿ ಮಾಡಿ ಹಾಕಬೇಕು) ಹಾಕಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಉಸಿರಾಟದ ಸಮಸ್ಯೆಗಳು ಕಡಿಮೆಯಾಗುತ್ತದೆ. ಅಸ್ತಮಾವನ್ನು ಹತೋಟಿ ಮಾಡಲು ಸಾಧ್ಯ. ಆದರೆ ಪರಿಣಾಮ ಗೊತ್ತಾಗಲು 45 ದಿನಗಳವರೆಗೆ ಕನಿಷ್ಠ ನಿಯತವಾಗಿ ಮಾಡುವುದು ಮುಖ್ಯ ಮತ್ತು ಈ ಸಮಯದಲ್ಲಿ ತಂಪುಪಾನೀಯಗಳಿಂದ ಆದಷ್ಟು ದೂರವಿರುವುದು ಉತ್ತಮ. ನಾಳಿನ ಅಂಕಣದಲ್ಲಿ

ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.