ವೈದ್ಯಕೀಯ ತ್ಯಾಜ್ಯ ವಿಲೇಗೆ ಘಟಕ

ಗೋಪಾಲಕೃಷ್ಣ ಪಾದೂರು ಉಡುಪಿ

ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಿ ಅದನ್ನು ಬೇರ್ಪಡಿಸಿ ವ್ಯವಸ್ಥಿತ ವಿಲೇವಾರಿ ಮಾಡುವ ಎಸ್‌ಎಲ್‌ಆರ್‌ಎಂ (ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಕೇಂದ್ರ) ಘಟಕ ಕಾರ್ಯನಿರ್ವಹಿಸುತ್ತಿದ್ದು, ತ್ಯಾಜ್ಯ ವಿಲೇವಾರಿಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ.

ಕಳೆದ 20 ವರ್ಷದಿಂದ ಪಾಳುಬಿದ್ದಿದ್ದ ಜಿಲ್ಲಾ ಸರ್ಜನ್ ವಸತಿ ನಿಲಯವನ್ನು 7.5 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ, 3 ತಿಂಗಳ ಹಿಂದೆ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಕೇಂದ್ರ ಆರಂಭಿಸಲಾಗಿದೆ. ದಿನಕ್ಕೆ 40 ಕೆ.ಜಿ. ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಆಸ್ಪತ್ರೆಯ 159 ಬಗೆಯ ತ್ಯಾಜ್ಯಗಳನ್ನು ಇಲ್ಲಿ ವಿಂಗಡಿಸಿ, ಮಾರಾಟ ಮಾಡಲಾಗುತ್ತದೆ. ಇದರಿಂದ ಆಸ್ಪತ್ರೆಗೆ ತ್ಯಾಜ್ಯ ನಿರ್ವಹಣೆ ಜತೆಗೆ ಆದಾಯವೂ ಲಭಿಸುವಂತಾಗಿದೆ.

ಬಯೋಮೆಡಿಕಲ್ ವೇಸ್ಟ್ ಪ್ರತ್ಯೇಕ: ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಳಸಿದ ಸಿರೀಂಜ್, ಕಾಟನ್‌ವೇಸ್ಟ್, ಗುಲ್ಕೋಸ್ ಬಾಟಲ್‌ಗಳನ್ನು ಪ್ರತ್ಯೇಕವಾಗಿ ಬಯೋಮೆಡಿಕಲ್ ವೇಸ್ಟ್‌ಗೆ ಕಳುಹಿಸಲಾಗುತ್ತದೆ. ಡಿಎಚ್‌ಒ ಆಫೀಸ್, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಆಯುರ್ವೇದಿಕ್ ಆಸ್ಪತ್ರೆ, ಸರ್ವೇಕ್ಷಣಾ ಇಲಾಖೆಗಳಿಂದ ಪ್ರತಿದಿನ ಮೆಡಿಸಿನ್ ರ‌್ಯಾಪರ್, ರಟ್ಟಿನ ಬಾಕ್ಸ್, ಪೆನ್‌ಗಳು, ನೀರಿನ ಬಾಟಲ್, ಮದ್ದಿನ ಬಾಟಲಿ ಮೊದಲಾದ ಘನತ್ಯಾಜ್ಯಗಳನ್ನು ಸಂಗ್ರಹಿಸಿ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ವಿಂಗಡಿಸಲಾಗುತ್ತದೆ. ಹೀಗೆ ಕಳೆದ ಮೂರು ತಿಂಗಳಿಂದ 15 ಟನ್‌ಗೂ ಅಧಿಕ ಘನತ್ಯಾಜ್ಯ ವಿಂಗಡಿಸಿ ಶೇಖರಣೆ ಮಾಡಲಾಗಿದ್ದು, ಏಲಂ ಮೂಲಕ ಮಾರಾಟ ಮಾಡಲಾಗುತ್ತದೆ. ಇಬ್ಬರು ಸಿಬ್ಬಂದಿ ಘನತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಸ ಕಾಂಪೋಸ್ಟ್: ಆಸ್ಪತ್ರೆ ಆವರಣ ಮತ್ತು ಪಕ್ಕದ ತರಗಲೆಗಳನ್ನು ಸಂಗ್ರಹಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಊಟದ ತ್ಯಾಜ್ಯ, ನರ್ಸಿಂಗ್ ತರಬೇತಿ ಸಂಸ್ಥೆ, ಆಸ್ಪತ್ರೆ ಕ್ಯಾಂಟೀನ್, ಹೊರಗಿನಿಂದ ತರುವ ಆಹಾರಗಳ ತ್ಯಾಜ್ಯ ಸೇರಿದಂತೆ ಹಸಿ ತ್ಯಾಜ್ಯ ಬಳಸಿ ಅಡುಗೆ ಅನಿಲವನ್ನಾಗಿಸಿ ಆಸ್ಪತ್ರೆಯ ಅಡುಗೆ ಕೋಣೆಗೆ ಬಳಸುವ ಯೋಜನೆ ಇದ್ದು, ಅಂದಾಜು 7 ಲಕ್ಷ ರೂ. ವೆಚ್ಚದಲ್ಲಿ ಎಸ್‌ಎಲ್‌ಆರ್‌ಎಂ ಸಹಭಾಗಿತ್ವದಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ.

ಆಸ್ಪತ್ರೆಯ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಘನತ್ಯಾಜ್ಯಗಳನ್ನು ವಿಂಗಡಿಸಿ ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಏಲಂ ಮೂಲಕ ಮಾರಾಟ ಮಾಡಲು ಚಿಂತಿಸಲಾಗಿದೆ. ಬಯೋ ಮೆಡಿಕಲ್ ವೇಸ್ಟ್ ಘಟಕ ಪಡುಬಿದ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ತಾಜ್ಯ ತೆಗೆದುಕೊಂಡು ಹೋಗುತ್ತಿದ್ದಾರೆ.
ಡಾ. ಮಧುಸೂದನ್ ನಾಯಕ್
ಜಿಲ್ಲಾ ಸರ್ಜನ್, ಉಡುಪಿ