ಮೆಡಿಕಲ್ ಶಾಪ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಔಷಧ ಮಾರಾಟಗಾರರು ದೇಶವ್ಯಾಪಿ ನೀಡಿರುವ ಬಂದ್ ಕರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಪ್ರದೇಶದ ಔಷಧ ಮಳಿಗೆಗಳು ಶುಕ್ರವಾರ ಸೇವೆ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಿದರೆ, ಹಳ್ಳಿ ಪ್ರದೇಶದ ಸಣ್ಣ ಮಳಿಗೆಗಳು ತೆರೆದಿದ್ದವು.
ಮೆಡಿಕಲ್‌ಗಳು ಬಂದ್ ಆಚರಿಸಿದರೂ ಜೆನರಿಕ್ ಔಷಧ ಮಳಿಗೆಗಳು ಎಂದಿನಂತೆ ಸೇವೆ ಒದಗಿಸಿದ್ದರಿಂದ ಗ್ರಾಹಕರಿಗೆ ತೊಂದರೆಯಾಗಲಿಲ್ಲ. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳ ಒಳಗಿನ ಔಷಧ ಮಳಿಗೆಗಳು ತೆರೆದಿದ್ದರಿಂದ ಸಮಸ್ಯೆಯಾಗಲಿಲ್ಲ. ಹೊರರೋಗಿಗಳು ಆಸ್ಪತ್ರೆಗಳ ಔಷಧ ಮಳಿಗೆಗಳಿಂದ ಅಗತ್ಯ ಮದ್ದು ಖರೀದಿಸಿದರು.
ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾ, ತಾಲೂಕು, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಔಷಧ ದಾಸ್ತಾನು ಮಾಡಿದ್ದರಿಂದ ಹೆಚ್ಚಿನ ಸಮಸ್ಯೆಯಾಗಲಿಲ್ಲ. ಮಂಗಳೂರಿನಲ್ಲಿ ವ್ಯವಹರಿಸುತ್ತಿರುವ ಕೆಲವು ಆನ್‌ಲೈನ್ ಔಷಧ ಮಾರಾಟ ಮಳಿಗೆಗಳು ಎಂದಿನಂತೆ ವ್ಯಾಪಾರ ನಡೆಸಿದ್ದವು. ಇವುಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.