ಜನರಲ್ಲಿ ಇರುವ ಮೂಢನಂಬಿಕೆ ನಿವಾರಿಸಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾರಣಾಂತಿಕ ಖಾಯಿಲೆಗಳು ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುಷ್ಠರೋಗ ಜಂಟಿ ನಿರ್ದೇಶಕ ಡಾ. ಮುನಿರಾಜು ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕುಷ್ಠರೋಗ ನಿವಾರಣ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜನರಲ್ಲಿ ಇರುವ ಮೂಢನಂಬಿಕೆಗಳನ್ನು ಬಿಡುವಂತೆ ಜಾಗೃತಿ ಮೂಡಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಕುಷ್ಠರೋಗ ನಿವಾರಣೆ ಅರಿವು ಮೂಡಿಸಬೇಕಿದೆ. ಕುಷ್ಠರೋಗ ಒಂದು ಸೂಕ್ಷ್ಮ ಜೀವಾಣುವಿನಿಂದ ಬರುವುದಾಗಿದೆ. ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುತ್ತದೆ ಎಂದರು.

ಕುಷ್ಠರೋಗಕ್ಕೆ ತುತ್ತಾದ ವ್ಯಕ್ತಿಗಳಿಗೆ ಸ್ಪರ್ಶ ಜ್ಞಾನವಿಲ್ಲದೆ, ಚರ್ಮದ ಮೇಲಿನ ಮಚ್ಚೆಗೆ ಶಾಖ ಸ್ಪರ್ಶ, ನೋವಿನ ಅರಿವಾಗದು. ತಿಳಿಬಿಳಿ ಅಥವಾ ಕೆಂಪು ಇಲ್ಲವೆ ತಾಮ್ರ ವರ್ಣದಾಗಿರಬಹುದು. ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು. ವೈದ್ಯರು ಆರಂಭದ ಹಂತದಲ್ಲಿಯೇ ರೋಗವನ್ನು ಪತ್ತೆಹಚ್ಚಿ ಎಂಡಿಟಿ ನೀಡುವುದರಿಂದ ಕುಷ್ಠರೋಗದಿಂದ ಆಗುವ ಅಂಗವಿಕಲತೆ ತಡೆಯಬಹುದು. ಜಿಲ್ಲಾದ್ಯಂತ ಆಶಾ ಕಾರ್ಯಕರ್ತರು ಕುಷ್ಠರೋಗದ ಬಗ್ಗೆ ಸರಿಯಾದ ಮಾಹಿತಿ ನೀಡಿ ಜನರಲ್ಲಿರುವ ಭೀತಿ ತೊಲಗಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮತ್ತು ಕುಷ್ಠರೋಗ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಅಶ್ವತ್ಥ್​ಬಾಬು, ಆರ್​ಸಿಎಚ್ ಅಧಿಕಾರಿ ಭರತ್, ಮೇಲ್ವಿಚಾರಣಾಧಿಕಾರಿ ಚೆನ್ನಬಸಪ್ಪ, ಜಿಲ್ಲೆಯ ಹಿರಿಯ, ಕಿರಿಯ, ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು ಇದ್ದರು.