ಬೆಳಗಾವಿ: ಮುಂದಿನ ಮೂರು(2050) ದಶಕಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಪ್ರಮಾಣದಲ್ಲಿ ಸಂಶೋಧನೆಗಳು ನಡೆಯಲಿದ್ದು, ಭವಿಷ್ಯದ ವೈದ್ಯಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ವೈದ್ಯಕೀಯ ಶಿಕ್ಷಣ ಪದ್ಧತಿ ಹಾಗೂ ಪಠ್ಯದಲ್ಲಿ ಪರಿಷ್ಕರಣೆ ಅತ್ಯವಶ್ಯವಾಗಿದೆ ಎಂದು ಮಲೇಷ್ಯಾ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಅಸ್ಮಾ ಇಸ್ಮಾಯಿಲ್ ಹೇಳಿದ್ದಾರೆ.
ನಗರದ ಕೆಎಲ್ಇ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಯುಎಸ್ಎಂ ಹಾಗೂ ಕೆಎಲ್ಇ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ವೈದ್ಯಕೀಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಕ್ಷೀಪ್ರಗತಿಯಲ್ಲಿ ಆವಿಷ್ಕಾರಗಳು ನಡೆಯುತ್ತಿವೆ. ವೈದ್ಯಕೀಯ ಕ್ಷೇತ್ರಗಳ ಪರಿಣತರ ಅಂದಾಜಿನ ಪ್ರಕಾರ 2050ರ ವೇಳೆಗೆ ವಿಶ್ವದಲ್ಲಿ 200 ಕೋಟಿ ಜನರು ವಯಸ್ಸಿನಲ್ಲಿ 60ರ ಗಡಿ ದಾಟಿರುತ್ತಾರೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಿರಿಯ ನಾಗರಿಕರಿಗೆ ಅಂಧತ್ವ, ಕಿವುಡುತನ ಸೇರಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಬೇಕಾದ ಬಹುದೊಡ್ಡ ಸವಾಲುಗಳು ನಮ್ಮ ಮುಂದಿವೆ ಎಂದರು.
ಜಾಗತಿಕ ಮಟ್ಟದ ವೈದ್ಯಕೀಯ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಡ್ರೋನ್, ರೋಬೋಟ್, ಟೆಲಿಮೆಡಿಸಿನ್, ಮೆಡಿಕಲ್ ಡಿವೈಸ್ಗಳ ಆಧಾರದಿಂದಲೂ ಚಿಕಿತ್ಸೆ ನೀಡುವ ಪದ್ಧತಿ ಹಾಗೂ ಆರೈಕೆ ಮಾಡುವುದು ಆರಂಭವಾಗಿದೆ. ಈಗಾಗಲೇ ಆ್ಯಪಲ್ ವಾಚ್ ಧರಿಸುವುದರಿಂದ ನಿಮ್ಮ ಹೃದಯದ ಬಡಿತ, ರಕ್ತದೊತ್ತಡ ಸೇರಿ ಆರೋಗ್ಯದ ಏರುಪೇರುಗಳ ಮಾಹಿತಿಯ ದತ್ತಾಂಶಗಳನ್ನು ಸಂಗ್ರಹಿಸಿ, ತನ್ನ ಸರ್ವರ್ ಸಹಾಯದಿಂದ ್ಯಾಮಿಲಿ ವೈದ್ಯರಿಗೆ ರವಾನಿಸುವಂತಹ ವ್ಯವಸ್ಥೆ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಲಿದೆ ಎಂದರು.
ವೈದ್ಯಕೀಯ ಕ್ಷೇತ್ರಗಳಲ್ಲಿ ಆಗುತ್ತಿರುವ ಮಹತ್ತರ ಆವಿಷ್ಕಾರಗಳ ಬಗ್ಗೆಯೂ ವೈದ್ಯರು ಹೆಚ್ಚಿನ ಆಸಕ್ತಿ ವಹಿಸಿ, ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. 2023ರ ವೇಳೆಗೆ ಅತ್ಯಾಧುನಿಕ ಮೊಬೈಲ್ಗಳು, ನಿಮ್ಮ ಆರೋಗ್ಯದ ಸಮಗ್ರ ಮಾಹಿತಿಯನ್ನು ನಿಮ್ಮ ಅಂಗೈಯಲ್ಲಿ ನೀಡಲಿವೆ. ವೈದ್ಯಕೀಯ ಕ್ಷೇತ್ರವು ಪರಿಪೂರ್ಣ ತರಬೇತಿ ಪಡೆದ ವೈದ್ಯಕೀಯ ಪದವಿ ಪಡೆದ ವೈದ್ಯರನ್ನು ನಿರೀಕ್ಷಿಸುತ್ತಿದೆ ಎಂದರು. ಜಾಗತಿಕ ಮಟ್ಟದಲ್ಲಿ ನಾವು ಇಂದು ಚಿಂತನೆ ಮಾಡಬೇಕಾದ ಅಗತ್ಯವಿದೆ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಡೀ ಜಗತ್ತೆ ಒಂದು ಕುಟುಂಬದಂತಾಗಿದೆ. ವೌಲ್ಯಾಧಾರಿತ ಶಿಕ್ಷಣದ ಜತೆಗೆ ಜಾಗತಿಕ ಆರ್ಥಿಕ ಸವಾಲುಗಳ ಜತೆ ನಾವು ಮುನ್ನುಗ್ಗಬೇಕಾಗಿದೆ ಎಂದು ತಿಳಿಸಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಜಾಗತಿಕ ಮಟ್ಟದ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಆವಿಷ್ಕಾರಗಳ ಕುರಿತು ಚಿಂತನ-ಮಂಥನ ನಡೆಯುತ್ತಿರುವುದು ತುಂಬ ಸಂತಸದ ಸಂಗತಿಯಾಗಿದೆ. ಕೆಎಲ್ಇ ಹಾಗೂ ಮಲೇಷ್ಯಾ ವಿವಿ ಜತೆ 10 ವರ್ಷಗಳಿಂದ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಯುಎಸ್ಎಂ-ಕೆಎಲ್ಇ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ್ ಮಾತನಾಡಿ, 10 ವರ್ಷಗಳಿಂದ ಯುಎಸ್ಎಂ ಹಾಗೂ ಕೆಎಲ್ಇ ಸಂಸ್ಥೆಯೂ ಜತೆಗೂಡಿ ಉತ್ತಮವಾಗಿ ತರಬೇತಿ ಪಡೆದ ವೈದ್ಯರನ್ನು ನಾಡಿಗೆ ನೀಡುತ್ತಿದೆ. ಕಳೆದ ವರ್ಷಗಳಲ್ಲಿ ನಡೆದಿರುವ ಅನೇಕ ಬೆಳವಣಿಗೆ, ಅನುಭವ ಹಂಚಿಕೊಂಡರು.
ಕೆಎಲ್ಇ ವಿವಿ ಕುಲಸಚಿವ ಡಾ.ವಿ.ಡಿ.ಪಾಟೀಲ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ರೋಗಿಗಳು ಮತ್ತು ವೈದ್ಯರ ನಡುವಿನ ಆಪ್ತತೆ, ಬಾಂಧವ್ಯ ಅತ್ಯಂತ ಗಟ್ಟಿಯಾಗಿರಬೇಕು. ಎಷ್ಟೇ ತಂತ್ರಜ್ಞಾನ ಬೆಳೆದರೂ, ವೈದ್ಯರೂ, ಪ್ರೀತಿಯಿಂದ ರೋಗಿಗಳ ಆರೈಕೆ ಮಾಡುವುದನ್ನು ಮುಂದುವರಿಸಬೇಕು ಎಂದರು. ಡಾ.ಅಸ್ಮಾ ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು.