ಅತ್ಯಾಚಾರ ಸಂತ್ರಸ್ತರು ಮೃತಪಟ್ಟರೂ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತಿಲ್ಲ: ಸುಪ್ರೀಂ

ನವದೆಹಲಿ: ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆಯ ಗುರುತನ್ನು ಮಾಧ್ಯಮಗಳು ಮತ್ತು ಪೊಲೀಸರು ಬಹಿರಂಗ ಪಡಿಸುವಂತಿಲ್ಲ. ಒಂದು ವೇಳೆ ಸಂತ್ರಸ್ತೆಯು ಮೃತಪಟ್ಟಿದ್ದರೂ ಕೂಡ ಅವರ ಗುರುತನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ.
ಯಾವುದೇ ಕಾರಣಕ್ಕೂ ಸಾರ್ವಜನಿಕ ಮೆರವಣಿಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹೆಸರನ್ನು ಬಹಿರಂಗ ಪಡಿಸುವಂತಿಲ್ಲ ಎಂದಿರುವ ಕೋರ್ಟ್‌, ಈ ಕುರಿತು ಮಾರ್ಗಸೂಚಿಗಳನ್ನು ರಚಿಸಿದೆ.

ಪಾಲಕರ ಒಪ್ಪಿಗೆಯಿದ್ದರೂ ಕೂಡ ಪೊಲೀಸರು ಅಥವಾ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೂ ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಅಲ್ಲದೆ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಎಫ್‌ಐಆರ್‌ಗಳನ್ನು ವಿಶೇಷವಾಗಿ ಅಪ್ರಾಪ್ತರು ಒಳಗೊಂಡಿರುವ ಪ್ರಕರಣಗಳ ವಿವರವನ್ನು ಸಾರ್ವಜನಿಕಗೊಳಿಸಬಾರದು ಎಂದು ನ್ಯಾಯಾಲಯ ತಿಳಿಸಿದೆ.

ಅತ್ಯಾಚಾರದ ಬಳಿಕ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವ ಸಂತ್ರಸ್ತರ ಕುರಿತು ಕಳವಳ ವ್ಯಕ್ತಪಡಿಸಿರುವ ಕೋರ್ಟ್‌, ಅತ್ಯಾಚಾರದಿಂದ ಬದುಕುಳಿದವರನ್ನು ಸಮಾಜದಲ್ಲಿ ಅಸ್ಪೃಷ್ಯರಂತೆ ಪರಿಗಣಿಸುವುದು ದುರದೃಷ್ಟಕರ ಎಂದು ಹೇಳಿದೆ.

ಸುಪ್ರೀಂ ಕೋರ್ಟ್​ನಿಂದ ಹೊರಡಿಸಲಾದ ಮಾರ್ಗದರ್ಶಿ ಸೂತ್ರಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಳ್ಳಬೇಕು. ಅತ್ಯಾಚಾರ ಸಂತ್ರಸ್ತರಿಗೆ ಕೌನ್ಸೆಲಿಂಗ್ ಮತ್ತು ಪುನರ್ವಸತಿ ಕಲ್ಪಿಸಲು ಒಂದು ವರ್ಷದೊಳಗಾಗಿ ಪ್ರತಿ ಜಿಲ್ಲೆಯಲ್ಲಿಯೂ ” ಒನ್‌ ಸ್ಟಾಪ್‌ ಕೇಂದ್ರ” ಗಳನ್ನು ಸ್ಥಾಪಿಸುವುದೂ ಸೇರಿದಂತೆ ಇತರೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ. (ಏಜೆನ್ಸೀಸ್)