ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭ

ಕಾರವಾರ: ಆಗಸ್ಟ್ 1 ರಿಂದ ಅಧಿಕೃತವಾಗಿ ಆಳ ಸಮುದ್ರ ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭವಾಗಲಿದ್ದು, ಎರಡು ತಿಂಗಳ ರಜೆಯ ಬಳಿಕ ದೋಣಿಗಳು ಕಡಲಿಗಿಳಿಯಲು ಸಜ್ಜಾಗಿವೆ.

ಸಮುದ್ರದಲ್ಲಿ ಮತ್ಸ್ಯ ಕುಲಗಳ ಸಂತಾನೋತ್ಪತ್ತಿಯ ಕಾಲವಾಗಿದ್ದರಿಂದ ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆಯನ್ನು ಸರ್ಕಾರ ನಿಷೇಧಿಸಿತ್ತು. ಎರಡು ತಿಂಗಳ ಅವಧಿಯಲ್ಲಿ ದೋಣಿಗಳ ರಿಪೇರಿ, ಬಲೆಗಳ ಜೋಡಣೆ ಕಾರ್ಯವನ್ನು ಕೈಗೊಂಡ ಮೀನುಗಾರರು ಕಡಲಿಗೆ ತೆರಳಲು ಸಿದ್ಧರಾಗಿ ದೋಣಿಗಳ ಪೂಜೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಟ್ರಾಲರ್ ಪರ್ಸೀನ್ ಸೇರಿ 2641 ಯಾಂತ್ರೀಕೃತ ದೋಣಿಗಳಿವೆ. ಪ್ರತಿ ವರ್ಷ ಆಗಸ್ಟ್ ಮೊದಲ ವಾರ ಶಿಗಡಿ ನಂತರದಲ್ಲಿ ಬಾಂಗಡೆ, ತೋರಿ ಮುಂತಾದ ಮೀನುಗಳ ಭಾರಿ ಬೇಟೆಯಾಗುತ್ತದೆ. ಈ ಬಾರಿಯೂ ಉತ್ತಮ ಮೀನು ಬೇಟೆಯ ನಿರೀಕ್ಷೆಯಲ್ಲಿದ್ದಾರೆ. ಮೀನುಗಾರಿಕೆಗಾಗಿ ಜಾರ್ಖಂಡ, ಬಿಹಾರ ಹಾಗೂ ಉತ್ತರ ಕರ್ನಾಟಕ ಭಾಗದ ಕಾರ್ವಿುಕರು ಆಗಮಿಸುತ್ತಿದ್ದಾರೆ.

ಸಬ್ಸಿಡಿ ಖೋತಾ ಆತಂಕ: ನಿಷೇಧವಿದ್ದರೂ ಲೈಟ್ ಫಿಶಿಂಗ್ ಮಾಡಿದ ಆರೋಪದ ಮೇಲೆ 2018 ರ ಜನವರಿಯಿಂದ ಇಲ್ಲಿವರೆಗೆ 104 ದೋಣಿಗಳಿಗೆ ತಲಾ 30 ಸಾವಿರ ದಂಡ ವಿಧಿಸಲಾಗಿದೆ. ಆದರೆ, ಎರಡು ದೋಣಿಗಳ ಮಾಲೀಕರನ್ನು ಹೊರತುಪಡಿಸಿ ಉಳಿದವರ್ಯಾರೂ ದಂಡ ಕಟ್ಟಿಲ್ಲ. ದಂಡ ಕಟ್ಟದವರಿಗೆ ಸರ್ಕಾರದಿಂದ ಬರುವ ಡೀಸೆಲ್ ಸಬ್ಸಿಡಿ ಪಾಸ್​ಬುಕ್ ವಿತರಣೆ ಮಾಡದಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮೀನುಗಾರಿಕೆ ಇಲಾಖೆಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ಜಿಲ್ಲೆಯ ಹಲವು ದೋಣಿಗಳ ಮಾಲೀಕರು ಆತಂಕದಲ್ಲಿದ್ದಾರೆ.

ಫಾರ್ವಲಿನ್ ಆತಂಕಕ್ಕೆ ತೆರೆ?: ಮೀನುಗಾರಿಕೆಗೆ ನಿಷೇಧವಿದ್ದ ಸಮಯದಲ್ಲಿ ಮೀನುಗಳಿಗೆ ಭಾರೀ ಬೇಡಿಕೆ ಇತ್ತು. ಈ ಸಂದರ್ಭದಲ್ಲಿ ಮೀನುಗಳು ತಾಜಾ ಕಾಣುವಂತೆ ಮಾಡುವ ಸಲುವಾಗಿ ಮಾನವನ ಶವ ಸಂರಕ್ಷಿಸಿಡಲು ಬಳಸುವ ಅಪಾಯಕಾರಿ ರಾಸಾಯನಿಕ ಫಾರ್ವಲಿನ್ ಬಳಸಿರುವುದು ಗೋವಾ ಸೇರಿ ಕೆಲವೆಡೆ ಪತ್ತೆಯಾಗಿತ್ತು. ಈ ಸುದ್ದಿ ವ್ಯಾಪಕವಾಗಿ ಹರಡಿತ್ತು. ಜಿಲ್ಲೆಯ ಮತ್ಸ್ಯ ಪ್ರಿಯರಿಗೂ ಫಾರ್ವಲಿನ್ ಆತಂಕ ಶುರುವಾಗಿತ್ತು. ಇದರ ಪ್ರಭಾವ ಜಿಲ್ಲೆಯ ಮೀನು ಮಾರುಕಟ್ಟೆಯ ಮೇಲೂ ಉಂಟಾಗಿತ್ತು. ಈಗ ಆಳ ಸಮುದ್ರ ಮೀನುಗಾರಿಕೆ ಪ್ರಾರಂಭವಾಗುವುದರಿಂದ ಸಾಕಷ್ಟು ಮೀನು ಪೂರೈಕೆಯಾಗಲಿದೆ. ವ್ಯಾಪಾರಸ್ಥರು ಫಾರ್ವಲಿನ್ ಬಳಕೆ ಮಾಡುವುದಿಲ್ಲ ಎಂಬ ವಿಶ್ವಾಸ ಮತ್ಸ್ಯ ಖಾದ್ಯ ಪ್ರಿಯರದ್ದು.

ಕೇಂದ್ರ ಸರ್ಕಾರದ ಆದೇಶದಂತೆ ವಿವಿಧ ರಾಜ್ಯಗಳಲ್ಲಿ ಮೇ 30 ರವರೆಗೂ ಲೈಟ್ ಫಿಶ್ಶಿಂಗ್​ಗೆ ಅವಕಾಶ ನೀಡಲಾಗಿತ್ತು. ಅಲ್ಲದೆ, ನಮ್ಮದೇ ರಾಜ್ಯದ ಮಂಗಳೂರು ಪ್ರದೇಶ ವ್ಯಾಪ್ತಿಯಲ್ಲೂ ಲೈಟ್ ಫಿಶಿಂಗ್​ಗೆ ಮೇ ವರೆಗೆ ಅವಕಾಶ ನೀಡಲಾಗಿತ್ತು. ಆದರೆ, ನಮ್ಮ ಜಿಲ್ಲೆಯಲ್ಲಿ ಮಾತ್ರ ಲೈಟ್ ಫಿಶಿಂಗ್ ಆರೋಪದ ಮೇಲೆ ಹಲವು ಮೀನುಗಾರಿಕಾ ದೋಣಿಗಳಿಗೆ 30 ಸಾವಿರ ದಂಡ ವಿಧಿಸಲಾಗಿದೆ. ಇಷ್ಟು ದೊಡ್ಡ ಮೊತ್ತ ತುಂಬಲು ಕಷ್ಟವಾಗುತ್ತದೆ. ಇದರಿಂದ ದಂಡದ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ.

– ಗಣಪತಿ ಮಾಂಗ್ರೆ ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ