ಬಳ್ಳಾರಿ: ನಿರ್ಲಕ್ಷಿಸಿದರೆ ಅಪಾಯಕಾರಿಯಾಗುವ ದಡಾರವನ್ನು ತಡೆಯಲು ಮಗುವಿನ ವಯಸ್ಸು ಒಂಬತ್ತು ತಿಂಗಳು ತುಂಬಿದ ನಂತರ ತಪ್ಪದೆ ದಡಾರ-ರುಬೆಲ್ಲಾ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ ಹೇಳಿದರು.
ನಗರದಲ್ಲಿ ಲಸಿಕಾ ಕಾರ್ಯ ಪರಿಶೀಲಿಸಿ ಮಾತನಾಡಿದರು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆವರು ಸಾಲೆಯಿಂದ ದೇಹದ ಮೇಲೆ ನುಚ್ಚು ಗುಳ್ಳೆಗಳು ಕಂಡು ಬರುವುದು ಸಹಜವಾಗಿದ್ದು, ಇದೇ ರೀತಿ ಕಂಡು ಬರುವ ದಡಾರ ಸೋಂಕು ಹರಡುವ ಮೈತುಂಬಾ ನುಚ್ಚು ಗುಳ್ಳೆಗಳ ಹಾಗೂ ಅಂತಹ ಮಕ್ಕಳಿಗೆ ಕೆಮ್ಮು, ಜ್ವರ, ಮೂಗಿನಿಂದ ಸುರಿಯುವುದು ಕಂಡು ಬಂದು ಆರೋಗ್ಯದಲ್ಲಿ ಗಂಭೀರ ಪರಿಣಾಮ ಉಂಟಾಗಬಹುದು. ಮುಂಜಾಗ್ರತೆಯಾಗಿ ಮಕ್ಕಳಿಗೆ ದಡಾರ-ರುಬೆಲ್ಲಾ ಲಸಿಕೆ ಹಾಕಿಸಬೇಕು ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾ ವೈದ್ಯಾಧಿಕಾರಿ ಆರ್.ಎಸ್ ಶ್ರೀಧರ ಮಾತನಾಡಿ, ಸೋಂಕಿತರಿಗೆ ಸುಮಾರು 10 ದಿನಗಳ ನಂತರ ದಡಾರದ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.
ದಡಾರದ ಅತ್ಯಂತ ಪ್ರಮುಖ ಲಕ್ಷಣವೆಂದರೆ ಕೆಂಪು ಬಣ್ಣದ ದದ್ದು (ಗುಳ್ಳೆ), ಆದರೆ ಇದು ಸಾಮಾನ್ಯವಾಗಿ ಮೊದಲ ಲಕ್ಷಣವಲ್ಲ. ದಡಾರವು ಸಾಮಾನ್ಯವಾಗಿ ಜ್ವರ ತರಹದ ಕಾಯಿಲೆಯಾಗಿ ಪ್ರಾರಂಭವಾಗುತ್ತದೆ. 2 ರಿಂದ 4 ದಿನಗಳವರೆಗೆ ಇರುತ್ತದೆ ಎಂದು ತಿಳಿಸಿದರು.