ಸಿನಿಮಾ

ರೋಗಕ್ಕೂ ಆರೋಗ್ಯಕ್ಕೂ ಊಟವೇ ಮುಖ್ಯ ಕಾರಣ

ಸರಿಯಾಗಿ ಹೇಗೆ ಊಟ ಮಾಡಬೇಕು ಎಂಬುದು ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇಂದು ನಾವು ಆಯುರ್ವೆದ ಶಾಸ್ತ್ರದ ಪ್ರಕಾರ ಊಟ ಮಾಡುವ ರೀತಿಯನ್ನು ತಿಳಿದುಕೊಳ್ಳೋಣ. ಇವುಗಳನ್ನು ಎಷ್ಟು ಸಾಧ್ಯವೋ ಅಷ್ಟು ಪಾಲಿಸಿದರೆ ನಾವು ದೈಹಿಕವಾಗಿ ಮಾನಸಿಕವಾಗಿ ಜೀವನವಿಡೀ ಸದೃಢರಾಗಿರಲು ಸಾಧ್ಯವಾಗುತ್ತದೆ. ಏಕೆಂದರೆ ರೋಗಕ್ಕೂ ಆರೋಗ್ಯಕ್ಕೂ ಊಟವೇ ಪ್ರಧಾನ ಕಾರಣ.

ಮೊದಲನೆಯದಾಗಿ ಸರಿಯಾಗಿ ಹಸಿವೆಯಾಗುವ ಮೊದಲೇ ಇನ್ನೊಂದು ಆಹಾರ ಸೇವಿಸಲೇಬಾರದು. ಹಾಗೇನಾದರೂ ಸೇವಿಸಿದರೆ ಅಮೃತವೂ ವಿಷವೇ ಆಗುತ್ತದೆ ಎನ್ನುತ್ತದೆ ಆಯುರ್ವೆದ. ಹಾಗಾಗಿ ಆಗಾಗ ಕುರುಕಲು ತಿಂಡಿಗಳನ್ನು ತಿನ್ನುವ ಅಭ್ಯಾಸ ಇರುವವರು ಎಚ್ಚರಿಕೆ ವಹಿಸಲೇಬೇಕು.

ಆಯುರ್ವೆದ ಹೇಳುವ ಪ್ರಕಾರ ಶುಚಿಯಾಗಿರುವ ಆಹಾರವನ್ನು ಮಾತ್ರ ಸೇವಿಸಬೇಕು. ಆಹಾರ ಮೂರು ರೀತಿಯಲ್ಲಿ ಶುಚಿಯಾಗಿರಬೇಕು. ಮೊದಲನೆಯದಾಗಿ, ನಾವು ಅಡುಗೆಯಲ್ಲಿ ಬಳಸುವ ಆಹಾರ ಪದಾರ್ಥಗಳನ್ನು ರಾಸಾಯನಿಕಗಳ ಬಳಕೆ ಇಲ್ಲದೇ ಸಾವಯವ ಪದ್ಧತಿಯಲ್ಲಿ ಬೆಳೆದಂಥವುಗಳನ್ನು ಆಯ್ದುಕೊಳ್ಳಬೇಕು. ಎರಡನೆಯದಾಗಿ ಅಡುಗೆ ಮಾಡುವಾಗ ಶುಚಿಯ ಬಗ್ಗೆ ಕಾಳಜಿ ವಹಿಸಬೇಕು. ರಾಸಾಯನಿಕಗಳು ಹೆಚ್ಚಾಗಿರುವ ಸಕ್ಕರೆ, ರಿಫೈಂಡ್ ಎಣ್ಣೆ, ಮೈದಾ ಮುಂತಾದವುಗಳನ್ನು ಬಳಸಿ ಅಶುಚಿ ಮಾಡಬಾರದು. ಮೂರನೆಯದಾಗಿ ಊಟ ಮಾಡುವಾಗ ಮನಸ್ಸು ಶುಚಿಯಾಗಿರಬೇಕು, ಸಿಟ್ಟು, ಭಯ, ಉದ್ವೇಗ ಇರಬಾರದು.

ನಿತ್ಯವೂ ಜಡ್ಡಿನ ಅಂಶ ಇರುವ ಆಹಾರ ಸೇವಿಸಬೇಕು. ಅಂದರೆ ನಿತ್ಯವೂ ಒಳ್ಳೆಯ ಕೊಬ್ಬನ್ನು (ಉದಾ: ಹಾಲು, ಮನೆಯಲ್ಲೇ ತಯಾರಿಸಿದ ತುಪ್ಪ, ಗಾಣದಲ್ಲಿ ತೆಗೆದ ಶುದ್ಧ ಎಣ್ಣೆ ಮುಂತಾದವು) ಹೆಚ್ಚಾಗಿ ಬಳಸಬೇಕು. ಮಾಡಿರುವ ಅಡುಗೆ ಬಿಸಿ ಇರುವಾಗಲೇ ಸೇವಿಸಬೇಕು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗದಿದ್ದರೆ ಅಡುಗೆ ಮಾಡಿದ ನಂತರ ಎಷ್ಟು ಸಾಧ್ಯವೊ ಅಷ್ಟು ಬೇಗ ಊಟ ಮಾಡುವುದು ಒಳ್ಳೆಯದು ಮತ್ತು ರೆಫ್ರಿಜರೇಟರ್ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಅತಿಯಾಗಿ ತಿಂದರೆ ನೂರಾರು ರೋಗಗಳಿಗೆ ಕಾರಣವಾದ ಅಗ್ನಿಮಾಂದ್ಯ ಉಂಟಾಗುತ್ತದೆ. ಊಟಕ್ಕೆ ಕುಳಿತಾಗ ಆ ದಿನ ನಮ್ಮ ಊಟದ ಸಾಮರ್ಥ್ಯ ಎಷ್ಟಿದೆಯೋ ಅದರ ಮುಕ್ಕಾಲು ಭಾಗ ಅಂದರೆ ಮುಕ್ಕಾಲು ಹೊಟ್ಟೆ ಮಾತ್ರ ಆಹಾರದಿಂದ ತುಂಬಬೇಕು. ಎಂದು ಅಷ್ಟಾಂಗ ಹೃದಯ ಗ್ರಂಥದಲ್ಲಿ ಹೇಳುತ್ತಾರೆ. ಸುಲಭವಾಗಿ ಜೀರ್ಣವಾಗುವಂತಹ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಜೀರ್ಣಕ್ಕೆ ಕಷ್ಟವಾಗುವ ಆಹಾರ ಪದಾರ್ಥಗಳನ್ನು (ಉದಾ: ಕರಿದ ಪದಾರ್ಥಗಳನ್ನು) ಅಪರೂಪಕೊಮ್ಮೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಬಹುಶಃ ಇದೇ ಕಾರಣದಿಂದಲೇ ನಮ್ಮ ಹಿರಿಯರು ಹಬ್ಬಗಳಂದು ಮಾತ್ರ ಇಂತಹ ವಿಶೇಷ ತಿನಿಸು ಸೇವಿಸುತ್ತಿದ್ದರು. ಆದರೆ ನಾವು ಪ್ರತಿದಿನವೂ ಜೀರ್ಣಕ್ಕೆ ಕಷ್ಟವಾಗುವ ಆಹಾರ ಸೇವಿಸುತ್ತೇವೆ. ಇದರಿಂದಾಗಿ ಡಯಾಬಿಟಿಸ್, ಪಿಸಿಓಡಿ, ಬೊಜ್ಜಿನಂತಹ ತೊಂದರೆಗಳು ಉಂಟಾಗುತ್ತವೆ.

ಚರಕ ಸಂಹಿತೆಯು, ಮನಸ್ಸನ್ನು ಸಂಪೂರ್ಣವಾಗಿ ಊಟದಲ್ಲಿಯೇ ಇಟ್ಟು ಊಟ ಮಾಡಬೇಕು ಎನ್ನುತ್ತದೆ. ಟಿವಿ ನೋಡುತ್ತಾ, ಮೊಬೈಲ್​ನಲ್ಲಿ ಮಾತನಾಡುತ್ತಾ ಸೇವಿಸಿದರೆ ಅಮೃತವನ್ನು ಉಂಡರೂ ವಿಷವಾಗಿ ಪರಿಣಮಿಸುತ್ತದೆ. ಆಯುರ್ವೆದವು ಸಿಹಿ, ಹುಳಿ, ಉಪ್ಪು, ಕಹಿ, ಖಾರ, ಒಗರು; ಈ ಆರೂ ರುಚಿಗಳನ್ನು ನಿತ್ಯವೂ ಸೇವಿಸುವುದು ಬಲವನ್ನು ಕೊಡುವಲ್ಲಿ ಅತ್ಯಂತ ಶ್ರೇಷ್ಠ ಎಂದಿದೆ. ಹಾಗಾಗಿ ನಾವು ಎಲ್ಲಾ ರುಚಿಗಳನ್ನು ನಿತ್ಯವೂ ಸೇವಿಸಬೇಕು. ಅತಿಯಾಗಿ ಖಾರವನ್ನು ಅಥವಾ ಹುಳಿಯನ್ನು ಸೇವಿಸುವುದು, ಕಹಿಯನ್ನು ತಿನ್ನದೇ ಇರುವುದು ಇಂತಹ ಹಲವು ತಪ್ಪುಗಳನ್ನು ನಾವು ನಿತ್ಯವೂ ಮಾಡುತ್ತೇವೆ. ಇದರಿಂದ ಉಂಟಾಗುವ ರೋಗಗಳು ಮತ್ತು ಅವುಗಳ ಸಂಪೂರ್ಣ ವಿವರಣೆಯನ್ನು ಆಯುರ್ವೆದ ಗ್ರಂಥಗಳಲ್ಲಿ ನೋಡಬಹುದು.

ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದ

Latest Posts

ಲೈಫ್‌ಸ್ಟೈಲ್