ಜೀವನ ಸಂಧ್ಯಾ ಕಾಲದಲ್ಲಿ ಮಕ್ಕಳಿಂದ ದೂರವಾದ ವೃದ್ಧಾಶ್ರಮದ ಮಾತೆಯರ ಮನದ ನೋವು

ಚಿಕ್ಕಮಗಳೂರು: ಏನ್ ಮಾಡಿದ್ರೆ ಏನ್ ಪ್ರಯೋಜನ. ಹೆತ್ತ ತಾಯ್ಗೆ ತುತ್ತು ಅನ್ನ ಹಾಕ್ದ ಮಕ್ಳ ತಗಂಡ್ ಏನ್ ಮಾಡ್ಲಿ. ಕಷ್ಟ ಕಾಲ್ದಲ್ಲೂ ಹೆತ್ತು ಬೆಳೆಸಿ ದೊಡ್ಡವರನ್ನಾಗಿ ಮಾಡ್ದೆ. ಈಗ ಮನೆ ಬಿಟ್ಟು ನಾನೇ ಹೋಗ್ಹಂಗೆ ಮಾಡವ್ನೆ…

ಹೀಗೆ ನೋವನ್ನು ತೋಡಿಕೊಂಡ ತಾಯಿ ಗೌರಮ್ಮ. ವಯಸ್ಸು 80, ನಡೆಯಲಾಗುತ್ತಿಲ್ಲ. ಇಬ್ಬರು ಗಂಡು ಮಕ್ಕಳು, ಅದರಲ್ಲಿ ಒಬ್ಬ ಮೃತನಾಗಿದ್ದಾನೆ. ಇದ್ದ ಮಗನ ಜತೆ ಹೊಂದಾಣಿಕೆಯಾಗದೆ ವೃದ್ಧಾಶ್ರಮ ಸೇರಿದ ವಯೋವೃದ್ಧೆಯ ಕತೆ ಇದು. ಮಗನ ಜತೆ ಸರಿ ಬರದಿದ್ದಾಗ ಶಿವಮೊಗ್ಗ ಸಮೀಪದ ಹಾರ್ನಳ್ಳಿ ಮಗಳ ಮನೆಗೆ ಹೋಗಿದ್ದರು. ಒಂದು ವರ್ಷದ ನಂತರ ಅಲ್ಲಿಯೂ ಅಳಿಯ ಕ್ಯಾತೆ ತೆಗೆದ, ನಿಮ್ಮಮ್ಮನನ್ನ ಎಷ್ಟು ದಿನ ಇಲ್ಲಿ ಇಟ್ಕೊಳ್ಳೋದು? ಎಂದು ನನಗೆ ಕೇಳಿಸುವ ಹಾಗೇಯೇ ಮಾತನಾಡಿದ. ಇವರ ಸಹವಾಸವೇ ಬೇಡವೆಂದು ಇಲ್ಲಿಗೆ ಬಂದಿದ್ದೇನೆ ಎಂದರು.

ನಗರ ಹೊರವಲಯದ ಆದಿಶಕ್ತಿನಗರ ಕದ್ರಿಮಿದ್ರಿ ರಸ್ತೆಯಲ್ಲಿ ಚಿಕ್ಕಮಗಳೂರು ರೋಟರಿ ಇನ್ನರ್ ವ್ಹೀಲ್ ಟ್ರಸ್ಟ್ ನಡೆಸುವ ಜೀವನ ಸಂಧ್ಯಾ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ಗೌರಮ್ಮ ತಮ್ಮ ಬದುಕಿನ ವಿಕ್ಷಿಪ್ತ ಘಟನೆಗಳನ್ನು ಅಮ್ಮನ ದಿನಾಚರಣೆ ದಿನ ಭಾನುವಾರ ವಿಜಯವಾಣಿ ಮುಂದೆ ತೆರೆದಿಟ್ಟರು.

ನಗರದವರೇ ಆದ ಗೌರಮ್ಮ ಇಲ್ಲಿಗೆ ಬಂದು ಮೂರು ವರ್ಷವಾಗಿದೆ. ತಾಯಂದಿರ ದಿನಾಚರಣೆಯಂದಾದರೂ ಮಗ ಬಂದು ಮಾತನಾಡಿಸುತ್ತಾನೆಂಬ ಅವರ ನಿರೀಕ್ಷೆ ಸುಳ್ಳಾಗಿದೆ. ಇವರಿಗಷ್ಟೇ ಅಲ್ಲ ವೃದ್ಧಾಶ್ರಮದಲ್ಲಿ 60ರಲ್ಲಿ 53 ವೃದ್ಧೆಯರಿಗೂ ಇಂಥ ಕರುಳು ಹಿಚುಕಿಕೊಳ್ಳುವ ಅನುಭವವಾಯಿತು.

53 ವೃದ್ಧೆಯರಲ್ಲಿ ಐವರಿಗೆ ಮಾತ್ರ ಮಕ್ಕಳಿಲ್ಲ. ಉಳಿದಂತೆ ಎಲ್ಲಿರಿಗೂ ಮಕ್ಕಳಿದ್ದಾರೆ. ಆದರೆ, ಜನ್ಮನೀಡಿದ ತಾಯಂದಿರ ಮಕ್ಕಳಿಗೆ ಅಮ್ಮನ ನೆನಪಾಗಲಿಲ್ಲ. ಮಕ್ಕಳು ಇಂದೂ ಬರಲಿಲ್ಲವಲ್ಲವೆಂಬ ವೇದನೆ ಸಂಧ್ಯಾ ಕಾಲದ ತಾಯಂದಿರ ಮುಖದಲ್ಲಿ ಕಾಣುತ್ತಿತ್ತು.

ಆಧುನಿಕ ಯುಗದ ಓಘದಲ್ಲಿ ಸಿಲುಕಿ ಮಾನವೀಯ ಸಂವೇದನೆ ಕಳೆದುಕೊಂಡ ಮಕ್ಕಳು ಸಂಜೆ ತನಕ ತಾಯ ಒಡಲು ಕಾದರೂ ಬರಲಿಲ್ಲ. ವೃದ್ಧಾಶ್ರಮಕ್ಕೆ ತಾಯಿ ನೆನಪಲ್ಲಿ ಅನ್ನದಾನ ಮಾಡಲು ಬಂದ ದಾನಿಗಳ ತಂಡದಲ್ಲಿ ತಮ್ಮ ಮಕ್ಕಳೇನಾದರೂ ಬಂದಿದ್ದಾರ? ಎಂದು ಹಲವು ವೃದ್ಧ ಕಣ್ಣುಗಳು ಹುಡುಕುತಿದ್ದವು. ಸಂಜೆ ತನಕ ಕಾದರೂ ಮಕ್ಕಳ ಸುಳಿವು ಕಾಣದೆ ಹಲವರು ನಿರಾಸೆಯಿಂದ ಆಶ್ರಮದ ಕೊಠಡಿ ಸೇರಿದರೆ ಮತ್ತೆ ಕೆಲವರು ಪ್ರಾರ್ಥನಾ ಮಂದಿರಲ್ಲಿ ದೇವರೇ ನಿನ್ನ ಬಿಟ್ಟರೆ ಗತಿ ಯಾರಿಲ್ಲಪ್ಪ ಎಂದು ಬೇಡಿಕೊಂಡರು.

ಏನೇ ಆಗಲಿ. ಹೆತ್ತವರನ್ನು ಕೆಲ ಸಣ್ಣಪುಟ್ಟ ಕಾರಣಗಳಿಗೆ ಮನೆಯಿಂದ ಹೊರ ಹೋಗುವಂತೆ ಮಾಡುವುದು ಮಾನವೀಯತೆಗೆ ಕಪ್ಪು ಚುಕ್ಕೆ ಇದ್ದಂತೆ. ಎಂಥ ಸಂಕಟ ಬಂದಾಗಲೂ ಮಕ್ಕಳನ್ನು ಹೊರ ಹಾಕದೆ ಸಾಕಿ ಸಲುಹಿದ ತಂದೆ-ತಾಯಿಗಳು ಕೊನೇ ಸಮಯದಲ್ಲಿ ಬೇಡವೆಂದು ಮಕ್ಕಳು ಹೊರ ಹಾಕುವುದು ಅಮಾನುಷ ಸಂಗತಿ.

ಕೃಷ್ಣ ಡಾಕ್ಟರ್ ಹೋಗ್ಬಿಟ್ರಂತೆ: ಏನಪ್ಪ ಕೃಷ್ಣ ಡಾಕ್ಟರ್ ಹೋಗ್ಬಿಟ್ರಂತೆ..? ಅಯ್ಯೋ ತುಂಬಾ ಒಳ್ಳೇರಪ್ಪ. ಅವರಪ್ಪನ ಕಾಲದಿಂದಲೂ ನಾವು ಅವ್ರತ್ರನೇ ತೋರಿಸ್ತಿದ್ವಿ… ಹೀಗೆ ದೀಢೀರ್ ಚಿಕ್ಕಮಗಳೂರು ನಗರದ ಗಣ್ಯರ ಬಗ್ಗೆ ಕ್ಷೇಮ ವಿಚಾರಿಸಿದವರು ಪಾರ್ವತಿಬಾಯಿ.

ನಗರದ ಗಣ್ಯರ ಆರೋಗ್ಯ ವಿಚಾರಿಸುತ್ತಲೇ ತನ್ನ ಕುಟುಂಬದ ವಿಷಯ ಪರಿಸ್ಥಿತಿ ಇಲ್ಲಿಗೆ ತನ್ನನ್ನು ತಂದಿದೆ ಎಂಬುದನ್ನು ತನ್ನ ದೇ ಶೈಲಿಯಲ್ಲಿ ವಿವರಿಸಿದ್ದು ಹೀಗೆ. ನನ್ಗೆ ಒಬ್ನೆ ಮಗ. ಬೆಂಗಳೂರ್ ಸೇರ್​ಕಂಡವ್ನೆ. ನಾನ್ ಇಲ್ಲಿಗೆ ಸೇರ್ಕೊಂಡು ಏಳು ವರ್ಷ ಆಯ್ತು. ಇಷ್ಟು ದಿನ ಬರ್ದವ್ನು ಇಂದ್ ಬರ್ತನೇನಪ?. ಅವ್ನು ಬರಲ್ಲ, ಬರದೂ ಬೇಡ, ಅವ್ನ ಮುಖ ನೋಡಕು ಇಷ್ಟ ಇಲ್ಲ. ಹೀಗೆ ಕಡ್ಡಿ ಮುರಿದಂತೆ ಒಳಾರ್ಥಗಳನ್ನು ಪದಗಳಲ್ಲಿ ತುಂಬಿ ತನ್ನ ಕುಟುಂಬದಲ್ಲಿ ಉಂಟಾದ ಬಿಕ್ಕಟ್ಟಿನಿಂದ ತಾನು ಮನೆ ಬಿಟ್ಟು ಇಲ್ಲಿಗೆ ಬಂದಿರುವುದಾಗಿ ಅರ್ಥೈಸಲು ಪಾರ್ವತಿಬಾಯಿ ಯತ್ನಿಸಿದರು. ನಗರದವರೇ ಆದ ದೇವಮ್ಮ ಎಂಬುವರಿಗೆ ಮಕ್ಕಳಿಲ್ಲ. ಕಾಫಿ ಕ್ಯೂರಿಂಗ್​ನಲ್ಲಿ ಕೆಲಸ ಮಾಡುತ್ತಿದ್ದ ಅವರು 80ರ ನಂತರ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾದಾಗ ಇಲ್ಲಿಗೆ ಬಂದಿದ್ದಾರೆ. ವೃದ್ಧಾಶ್ರಮದವರು ನಮ್ಮನ್ನು ದೇವರನ್ನು ನೋಡಿಕೊಂಡ ಹಾಗೆ ನೋಡಿಕೊಳ್ಳುತ್ತಾರೆ ಎಂದು ಸ್ಮರಿಸಿದರು. ಸಂಬಂಧಿಕರು ಇದ್ದಾರೆ. ಅವರಿಗೆ ಭಾರವಾಗುವುದು ಬೇಡವೆಂದು ನಾನೇ ಇಲ್ಲಿಗೆ ಬಂದಿದ್ದೇನೆ ಎಂದರು. ಮತ್ತೊಬ್ಬ ವೃದ್ಧೆ ಅಕ್ಕಮ್ಮ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮನೆಯಲ್ಲಿ ಹೊಂದಾಣಿಕೆ ಇಲ್ಲದೆ ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ. ಉಳಿದಂತೆ ಸುಗಂಧಮ್ಮ, ಸಾವಿತ್ರಮ್ಮ, ಲಕ್ಷ್ಮಮ್ಮ ಅವರಿಗೆ ಮಕ್ಕಳಿಲ್ಲದೆ ಸಂಧ್ಯಾ ಕಾಲವೇ ಅವರನ್ನು ಇಲಿಗೆ ಕರೆ ತಂದಿದೆ.

ಎಷ್ಟು ಕಷ್ಟವೋ ಹೊಂದಾಣಿಕೆ ಎಂಬುದು : ಎಷ್ಟು ಕಷ್ಟವೋ ಹೊಂದಾಣಿಕೆ ಎಂಬುದು ಮೂರು ದಿನದ ಬದುಕಿನಲ್ಲಿ. ಹೀಗೆ ಕವಿ ಜಿ.ಎಸ್.ಶಿವರುದ್ರಪ್ಪ ಮನುಷ್ಯ ಚಂಚಲ ಭಾವನೆಗಳನ್ನು ಕಟ್ಟಿಕೊಟ್ಟಿದ್ದಾರೆ.ವೃದ್ಧಾಶ್ರಮದ ನಿವಾಸಿಗಳನ್ನು ಮಾತನಾಡಿಸಿದಾಗ ಕವಿಯ ಸಾಲು ನೆನಪಾಗುತ್ತವೆ. ಬಹುತೇಕ ಕುಟುಂಬದಲ್ಲಿ ಹೊಂದಾಣಿಕೆ ಕೊರತೆ, ತಪ್ಪು ಗ್ರಹಿಕೆ, ಸೊಸೆ ಬಂದ ನಂತರ ಆದ ಸಹಜ ಬದಲಾವಣೆಗಳು ಮನೆ ವೃದ್ಧರನ್ನು ತಲ್ಲಣಗೊಳಿಸಿವೆ. ನವ ನಾಗರಿಕತೆ ಕುಟುಂಬಗಳಲ್ಲಿಯೂ ಪೀಳಿಗೆಯ ನಡುವೆ ವಿಪರೀತ ಅಂತರ ಸೃಷ್ಟಿ ಮಾಡಿದೆ.

ಹೊಸ ಜೀವನ ಶೈಲಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದ ವೃದ್ಧರು ಕುಟುಂಬದಿಂದ ದೂರವಾಗುತ್ತಿದ್ದರೆ, ಅವರನ್ನು ಹೊಂದಿಸಿಕೊಂಡು ಹೋಗಲಾಗದೆ ಕೈಬಿಟ್ಟವರು ಇಲ್ಲಿದ್ದಾರೆ. ವಯಸ್ಸಾದಂತೆ ವೃದ್ಧರಿಗೆ ಶ್ರವಣ ದೋಷ ಸಾಮಾನ್ಯವಾಗುತ್ತದೆ. ಮನೆಯಲ್ಲಿ ಸೋಸೆ ಏನೋ ಮಾತನಾಡಿದರೆ ಇವರಿಗೆ ಇನ್ನೇನು ಕೇಳುತ್ತದೆ. ಹೀಗಾಗಿ ಇಂಥ ತಪ್ಪು ಗ್ರಹಿಕೆಗಳು ಕುಟುಂಬದಲ್ಲಿ ಹಿರಿಯರು ಮತ್ತು ಕಿರಿಯರ ನಡುವೆ ಸಂಘರ್ಷ ಉಂಟು ಮಾಡಿರುವ ಕಾರಣಗಳು ಸಾಕಷ್ಟು ಇವರನ್ನು ಮಾತನಾಡಿಸಿದಾಗ ಸಿಗುತ್ತವೆ.