ಮೆಸ್ಕಾಂನಿಂದ ಜಿಲ್ಲೆಗೆ 172 ಕೋಟಿ ರೂ.

ಚಿಕ್ಕಮಗಳೂರು: ದೀನ್​ದಯಾಳ್ ಉಪಾಧ್ಯಾಯ ಯೋಜನೆಯಡಿ ಜಿಲ್ಲೆಗೆ 172.28 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯ ಬಿಪಿಎಲ್ ಪಡಿತರ ಚೀಟಿದಾರರ 13,386 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ತಿಳಿಸಿದರು.

ನಗರದಲ್ಲಿ ಶನಿವಾರ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲಿಸಿ ಸುದ್ದಿಗಾರರ ಜತೆ ಮಾತನಾಡಿ, ಒಟ್ಟು ಅನುದಾನದ ಶೇ.40ರಷ್ಟು ಹಣವನ್ನು ಉಪಕರಣಗಳಿಗೆ ನೀಡಲಾಗಿದೆ. ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು 15.38 ಕೋಟಿ ರೂ. ಒದಗಿಸಲಾಗಿದೆ ಎಂದರು.

ಜಿಲ್ಲೆಯ 60 ಸಾವಿರ ಮೀಟರ್​ಗಳಲ್ಲಿ ಮೀಟರ್ ರೀಡಿಂಗ್ ಕಾಣಿಸದ ಮನೆಗಳ 36 ಸಾವಿರ ಮೀಟರ್​ಗಳನ್ನು ಕಾಣುವಂಥ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಕಡೂರು ವಿಭಾಗದಲ್ಲಿ 56 ಫೀಡರ್ ಕಾಮಗಾರಿಗೆ 144.7 ಕೋಟಿ ರೂ. ಮೀಸಲಿಡಲಾಗಿದೆ. ನಿರಂತರ ಜ್ಯೋತಿ ಯೋಜನೆಯಡಿ 24 ಗಂಟೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದು, ಕೃಷಿ ಪಂಪ್​ಸೆಟ್​ಗಳಿಗೆ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುವುದು. ಸಿಬ್ಬಂದಿ ಕೊರತೆಯಿಂದ ಮಂಗಳೂರು ಉಪವಿಭಾಗದಲ್ಲಿ ಯಾವುದೆ ಹೊಸ ವಿಭಾಗ ತೆರೆಯಲು ಉದ್ದೇಶಿಸಿಲ್ಲ ಎಂದರು.

ಚಿಕ್ಕಮಗಳೂರು ವಿಭಾಗದ ಮಲ್ಲೇನಹಳ್ಳಿ, ಮತ್ತಾವರ, ಗಾಣದಾಳು, ಮಲ್ಲಂದೂರು, ಜೇನುಗದ್ದೆ ಹಾಗೂ ಕಡೂರು ವಿಭಾಗದಲ್ಲಿ ಕುಂಕನಾಡು, ಚೌಳಹಿರಿಯೂರು, ಅಂತರಗಟ್ಟೆಯಲ್ಲಿ ಎಂಯುಎಸ್​ಎಸ್ ಸ್ಟೇಷನ್ ತೆರೆಯಲಾಗುವುದು. ಹಿರೇನಲ್ಲೂರು ಮತ್ತು ಎಮ್ಮೆದೊಡ್ಡಿಯಲ್ಲಿ ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಹೆಚ್ಚುವರಿಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಎಮ್ಮೆದೊಡ್ಡಿಯಲ್ಲಿ ವಿದ್ಯುತ್ ಲೈನ್ ಎಳೆಯಲು ಎದುರಾಗಿರುವ ಜಾಗದ ಸಮಸ್ಯೆ ನಿವಾರಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಿದ್ದು, ಅನುಮೋದನೆ ದೊರೆತರೆ ಕೆಲಸ ಪೂರ್ಣವಾಗಲಿದೆ ಎಂದು ತಿಳಿಸಿದರು.

ಸಾಧಾರಣ ಸ್ಥಿತಿಯಲ್ಲಿರುವ ಜಿಲ್ಲೆಯ ಮೆಸ್ಕಾಂ ಪ್ರಗತಿ ಸಾಧಿಸಲು ಅನುಕೂಲವಾಗುವಂತೆ ಡಿಸೆಂಬರ್ ಅಂತ್ಯದೊಳಗೆ ವಿದ್ಯುತ್ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಿಬ್ಬಂದಿ ಕೊರತೆ ನಡುವೆಯೂ ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ 2400 ಕೊಳವೆ ಬಾವಿಗಳನ್ನು 3 ತಿಂಗಳಲ್ಲಿ ಕೊರೆಸಲಾಗಿದೆ. ಈ ಕೊಳವೆ ಬಾವಿಗೆ ಮೋಟಾರ್ ಇಳಿಸಿ ಅರ್ಜಿ ಸಲ್ಲಿಸಿದರೆ ತಿಂಗಳಲ್ಲಿ 30ರಿಂದ 50 ಬೋರ್​ವೆಲ್​ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಒಟ್ಟು 170 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಬಾಕಿ ಇದೆ ಎಂದು ತಿಳಿಸಿದರು.