ಸಿಡ್ನಿ: ನವೆಂಬರ್ 22ರಂದು ಆರಂಭವಾಗಲಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಆತಿಥೇಯ ಆಸ್ಟ್ರೇಲಿಯಾ ತಂಡ 13 ಆಟಗಾರರ ತಂಡವನ್ನು ಹೆಸರಿಸಿದೆ. ಯುವ ಆಟಗಾರ ನಾಥನ್ ಮೆಕ್‌ಸ್ವೀನಿ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ ಪಡೆದುಕೊಂಡಿದ್ದು, ಅನುಭವಿ ಉಸ್ಮಾನ್ ಖವಾಜ ಜತೆಯಾಗಿ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್ ಟೆಸ್ಟ್‌ಗೆ 2ನೇ ಹೊಸ ಮುಖ ಎನಿಸಿದ್ದಾರೆ.
ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ದಕ್ಷಿಣ ಆಸ್ಟ್ರೇಲಿಯಾದ 25 ವರ್ಷದ ಬ್ಯಾಟರ್ ಮೆಕ್‌ಸ್ವೀನಿ, ಅನುಭವಿ ಆರಂಭಿಕರಾದ ಮಾರ್ಕಸ್ ಹ್ಯಾರಿಸ್, ಕ್ಯಾಮರಾನ್ ಬ್ಯಾಂಕ್ರ್‌ಟಾ ಅವರನ್ನು ಹಿಂದಿಕ್ಕಿ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಎ ವಿರುದ್ಧದ ಚತುರ್ದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು ಮುನ್ನಡೆಸಿದ್ದ ಮೆಕ್‌ಸ್ವೀನಿ ಮೊದಲ ಬಾರಿಗೆ ಆರಂಭಿಕನಾಗಿ ಆಡಿದ್ದರು. ನಾಥನ್ ಲ್ಯಾನ್ ತಂಡದಲ್ಲಿರುವ ಏಕೈಕ ಸ್ಪಿನ್ ಸ್ಪೆಷಲಿಸ್ಟ್ ಆಗಿದ್ದು, ಪ್ರಮುಖ ವೇಗಿಗಳಾಗಿ ನಾಯಕ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್‌ವುಡ್ ಜತೆ 4ನೇ ವೇಗಿಯಾಗಿ ಸ್ಕಾಟ್ ಬೋಲ್ಯಾಂಡ್ ಆಯ್ಕೆಯಾಗಿದ್ದಾರೆ.
ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಉಸ್ಮಾನ್ ಖವಾಜ, ಅಲೆಕ್ಸ್ ಕ್ಯಾರಿ, ಸ್ಟೀವನ್ ಸ್ಮಿತ್, ಜೋಸ್ ಇಂಗ್ಲಿಸ್, ಮಿಚೆಲ್ ಮಾರ್ಷ್, ನಾಥನ್ ಮೆಕ್‌ಸ್ವೀನಿ, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್‌ವುಡ್, ನಾಥನ್ ಲ್ಯಾನ್, ಸ್ಕಾಟ್ ಬೋಲ್ಯಾಂಡ್.
ಆಸೀಸ್‌ನತ್ತ ಭಾರತ
ಮುಂಬೈ: ಸುದೀರ್ಘ ಆಸೀಸ್ ಪ್ರವಾಸಕ್ಕೆ ತೆರಳುವ ಮುನ್ನ ಭಾರತ ತಂಡದ ಮುಖ್ಯಕೋಚ್ ಗೌತಮ್ ಗಂಭೀರ್ ಮುಂಬೈನಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಎರಡು ಬ್ಯಾಚ್‌ನಲ್ಲಿ ಪ್ರಯಾಣಿಸಲಿದ್ದು, ಭಾನುವಾ ಮೊದಲ ತಂಡ ಭಾರತದಿಂದ ನಿರ್ಗಮಿಸಿದೆ. ವೈಯಕ್ತಿಕ ಕಾರಣಗಳಿಂದ ನಾಯಕ ರೋಹಿತ್ ಶರ್ಮ ಆಸೀಸ್‌ಗೆ ತಡವಾಗಿ ಪ್ರಯಾಣಿಸಿಲಿದ್ದಾರೆ.