ಮೆಲ್ಬೋರ್ನ್: ಪುರುಷರ ಕ್ರಿಕೆಟ್‌ನ ಮೊದಲ ಟೆಸ್ಟ್ ಪಂದ್ಯಕ್ಕೆ 2027ರಲ್ಲಿ ಬರೋಬ್ಬರಿ 150 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಇದರ ಸಂಭ್ರಮಾಚರಣೆಯಾಗಿ ಏಕೈಕ ಅಹರ್ನಿಶಿ ಪಂದ್ಯ ಆಯೋಜಿಸುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ) ಮಂಗಳವಾರ ತಿಳಿಸಿದೆ. 2027ರ ಮಾರ್ಚ್ 11ರಿಂದ 15ರವರೆಗೆ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಂಸಿಜಿ) ಆತಿಥೇಯ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಏಕೈಕ ಟೆಸ್ಟ್ ಪಂದ್ಯ ನಿಗದಿಗೊಳಿಸಲಾಗಿದ್ದು, ಎಂಸಿಜಿಯಲ್ಲಿ ನಡೆಯಲಿರುವ ಮೊದಲ ಪಿಂಕ್‌ಬಾಲ್ ಟೆಸ್ಟ್ ಪಂದ್ಯ ಇದಾಗಿರಲಿದೆ.
ಎಂಸಿಜಿಯಲ್ಲೇ 1877ರಲ್ಲಿ ನಡೆದ ಮೊದಲ ಟೆಸ್ಟ್ ಹಾಗೂ 1977ರಲ್ಲಿ ನೂರನೇ ವರ್ಷದ ಆಚರಣೆ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ಗೆದ್ದು ಬೀಗಿತ್ತು. ಇವೆರಡೂ ಪಂದ್ಯಗಳು ಹಗಲಿನಲ್ಲಿ ಕೆಂಪು ಚೆಂಡಿನೊಂದಿಗೆ ಆಡಲಾಗಿತ್ತು.150ನೇ ವಾರ್ಷಿಕೋತ್ಸವದ ಆಚರಣೆ ಎಂಸಿಜಿಯಲ್ಲಿ ನಡೆಯಲಿರುವ ಪ್ರಮುಖ ಕ್ರೀಡಾ ಕಾರ್ಯಕ್ರವವಾಗಿದ್ದು,ವಿದ್ಯುತ್ ದೀಪಗಳ ಅಡಿಯಲ್ಲಿ ಆಡುವುದು ಕ್ರಿಕೆಟ್‌ನ ಶ್ರೀಮಂತ ಪರಂಪರೆ ಹಾಗೂ ಅಧುನಿಕತೆಯನ್ನು ಪ್ರತಿಬಿಂಬಿಸಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಟೊಡ್ಡ ಗ್ರೀನ್‌ಬರ್ಗ್ ತಿಳಿಸಿದ್ದಾರೆ. ಆಸ್ಟ್ರೇಲಿಯಾ ತಂಡ ಇದುವರೆಗೆ 13 ಅಹರ್ನಿಶಿ ಪಂದ್ಯಗಳನ್ನಾಡಿದ್ದು, 12ರಲ್ಲಿ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ 2025-26ರ ಆಶಸ್ ಟೆಸ್ಟ್ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.
