ಇಂದೋರ್: ವಾಹನ ಸವಾರರಿಗೆ ಟ್ರಾಫಿಕ್ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್ ಸವಾರರು ಹೆಲ್ಮೆಟ್ ಧರಿಸುವುದಿಲ್ಲ, ಕಾರು ಚಾಲಕರು ಸೀಟ್ ಬೆಲ್ಟ್ ಹಾಕಿಕೊಂಡಿರುವುದಿಲ್ಲ…ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ. ಸವಾರರಿಗೆ ಟ್ರಾಫಿಕ್ ನಿಯಮಗಳನ್ನು ಅರ್ಥ ಮಾಡಿಸಿ, ಅದನ್ನು ಪಾಲಿಸುವಂತೆ ಮಾಡಲು ಅದೆಷ್ಟೋ ಟ್ರಾಫಿಕ್ ಪೊಲೀಸರು ತಮ್ಮದೇ ಆದ ಹೊಸ ಪದ್ಧತಿಗಳನ್ನು ರೂಢಿಸಿಕೊಂಡಿದ್ದನ್ನು ಈಗಾಗಲೇ ನೋಡಿದ್ದೇವೆ.
ಆದರೆ ಈಗ ಮಧ್ಯಪ್ರದೇಶದ ಇಂದೋರ್ನ ಎಂಬಿಎ ವಿದ್ಯಾರ್ಥಿನಿಯೋರ್ವಳು ಸ್ವಯಂಪ್ರೇರಿತಳಾಗಿ ವಾಹನ ಸವಾರರಿಗೆ ಸಂಚಾರಿ ನಿಯಮಗಳನ್ನು ಪಾಲಿಸಲು ವಿಭಿನ್ನವಾಗಿ ಮನವಿ ಮಾಡಿಕೊಳ್ಳುತ್ತಿದ್ದಾಳೆ. ರಸ್ತೆ ಮೇಲೆ ನೃತ್ಯ ಮಾಡುತ್ತ, ವಿಶಿಷ್ಟವಾಗಿ ಹೆಜ್ಜೆ ಹಾಕುತ್ತ ಜನರು ಸಂಚಾರಿ ನಿಯಮ ಪಾಲಿಸುವಂತೆ ಪ್ರೇರೇಪಿಸುತ್ತಿದ್ದಾಳೆ.
ಆಕೆಯ ಹೆಸರು ಶುಭಿ ಜೈನ್. ಪುಣೆಯ ಸಿಂಬೋಸಿಸ್ ಸಂಸ್ಥೆಯ ವಿದ್ಯಾರ್ಥಿನಿ. ಟ್ರಾಫಿಕ್ ನಿಯಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ತಾವು ಕಂಡುಕೊಂಡ ವಿಭಿನ್ನ ಮಾರ್ಗದ ಬಗ್ಗೆ ಎಎನ್ಐ ಜತೆ ಮಾತನಾಡಿರುವ ಶುಭಿ, ನಾನಿದನ್ನು ಸ್ವಯಂಪ್ರೇರಿತವಾಗಿ, ಟ್ರಾಫಿಕ್ ಪೊಲೀಸರ ಕೆಲಸ ಸುಗಮ ಮಾಡುವುದಕ್ಕೋಸ್ಕರ ಕಳೆದ 15ದಿನಗಳಿಂದಲೂ ಮಾಡುತ್ತಿದ್ದೇನೆ. ಈಗೀಗ ಜನರಿಗೆ ನಾನು ಪರಿಚಯವಾಗಿದ್ದೇನೆ. ನನ್ನೆಡೆಗೆ ನೋಡಿ, ನಕ್ಕು, ನಾವು ಹೆಲ್ಮೆಟ್ ಧರಿಸಿದ್ದೇವೆ, ಸೀಟ್ ಬೆಲ್ಟ್ ಹಾಕಿಕೊಂಡಿದ್ದೇವೆ ಎಂದು ತೋರಿಸುತ್ತಾರೆ. ಇದು ನನ್ನಲ್ಲಿ ಇನ್ನೂ ಸ್ಫೂರ್ತಿ ತುಂಬುತ್ತದೆ ಎಂದು ಹೇಳಿದ್ದಾರೆ.
ಬಾಸ್ಕೆಟ್ ಬಾಲ್ ಆಡುವಾಗ ಬಿದ್ದು ಕಾಲು ಪಾದಕ್ಕೆ ಬಲವಾಗಿ ಏಟು ಮಾಡಿಕೊಂಡೆ. ಅದಾದ ಬಳಿಕ ಈ ದೇಶಕ್ಕಾಗಿ ಏನಾದರೂ ಮಾಡಬೇಕು ಎಂದೆನಿಸಿತು ಎಂದು ಶುಭಿ ತಿಳಿಸಿದ್ದಾರೆ.
ಇಂದೋರ್ನಲ್ಲಿ ವಿಷನ್ -2022 ಎಂಬ ಅಭಿಯಾನ ಶುರುವಾಗಿದೆ. ಇದರ ಅನುಷ್ಠಾನಕ್ಕಾಗಿ ಹಲವು ಶಾಲೆ, ಸಂಸ್ಥೆಗಳ ಸಹಕಾರ ಕೋರಿದ್ದು, ಸ್ವಯಂಪ್ರೇರಿತರಾಗಿ ಯಾರು ಬರುತ್ತಾರೋ ಅವರಿಗೆ ಆರು ತಿಂಗಳು ತರಬೇತಿ ನೀಡುತ್ತೇವೆ. ಶುಭಿ ಜೈನ್ ಅವರ ವಿಭಿನ್ನ ಮಾರ್ಗವನ್ನು ಜನ ಅನೇಕ ಜನರು ಮೆಚ್ಚಿಕೊಂಡಿದ್ದಾರೆ ಎಂದು ಇಂಧೋರ್ ಡಿಎಸ್ಪಿ ಉಮಾಕಾಂತ್ ಚೌಧರಿ ತಿಳಿಸಿದ್ದಾರೆ.
ಎಂಬಿಎ ವಿದ್ಯಾರ್ಥಿನಿ ನೃತ್ಯ ಮಾಡುತ್ತ ಟ್ರಾಫಿಕ್ ನಿಯಮಗಳ ಅರಿವು ಮೂಡಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅನೇಕ ಜನರು ಆಕೆಯನ್ನು ಹೊಗಳಿದ್ದಾರೆ. (ಏಜೆನ್ಸೀಸ್)
#WATCH Madhya Pradesh: An MBA student Shubi Jain volunteering to manage traffic on roads in Indore in her unique way, to spread awareness about traffic norms & regulations. pic.twitter.com/hBZd0bt3C5
— ANI (@ANI) November 18, 2019