More

  ಎಂಬಿಪಿಗೆ ಸಿದ್ದು ಬಲ, ಡಿಕೆಶಿ ಯತ್ನ ವಿಫಲ?

  ನವದೆಹಲಿ: ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್ ಆಯ್ಕೆ ಮಾಡುವುದೇ ಸೂಕ್ತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವಿವರಣೆ ನೀಡಿದ್ದಾರೆ.

  ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಆಹ್ವಾನದ ಮೇರೆಗೆ ದೆಹಲಿಗೆ ಬಂದಿದ್ದ ಸಿದ್ದರಾಮಯ್ಯ, ಮಂಗಳವಾರ ಸಂಜೆ 4.30ಕ್ಕೆ ಸೋನಿಯಾರನ್ನು ಭೇಟಿಯಾಗಿ ರಾಜ್ಯ ಕಾಂಗ್ರೆಸ್ ಸ್ಥಿತಿ-ಗತಿ, ಉಪ ಚುನಾವಣೆ ಸೋಲು, ಪಕ್ಷ ಸಂಘಟನೆ, ಜಾತಿವಾರು ಲೆಕ್ಕಾಚಾರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

  ಈ ಸಂದರ್ಭ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಎಂ.ಬಿ.ಪಾಟೀಲ್​ರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕೆಂದು ಸಲಹೆ ನೀಡಿದ ಅವರು, ಪಕ್ಷ ಸಂಘಟನೆಗೆ ಆರ್ಥಿಕ ಸಂಪನ್ಮೂಲದ ಕ್ರೋಡೀಕರಣವೂ ಬೇಕಿದೆ. ಮೂರು ವರ್ಷಗಳಲ್ಲಿ ಬಿಜೆಪಿಯಲ್ಲಿ ಲಿಂಗಾಯತರ ಬಲಿಷ್ಠ ನಾಯಕ ಎಂದು ಗುರುತಿಸಿಕೊಂಡಿರುವ ಯಡಿಯೂರಪ್ಪ ಬದಿಗೆ ಸರಿಯುವುದರಿಂದ ಕಳೆದುಹೋದ ಲಿಂಗಾಯತ ಮತಗಳನ್ನು ಸೆಳೆಯಲು ಉತ್ತರ ಕರ್ನಾಟಕದವರನ್ನೇ ಆಯ್ಕೆ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ.

  ಕೆಲ ದಿನಗಳ ಹಿಂದೆ ಎಂ.ಬಿ.ಪಾಟೀಲ್​ರನ್ನು ನಿವಾಸಕ್ಕೆ ಕರೆಸಿಕೊಂಡಿದ್ದ ಸೋನಿಯಾ ಗಾಂಧಿ, ಸುಮಾರು ಒಂದು ತಾಸು ಮಾತುಕತೆಯಲ್ಲಿ ರಾಜ್ಯ ಕಾಂಗ್ರೆಸ್ ಕುರಿತ ಸಮಗ್ರ ಮಾಹಿತಿ ಪಡೆದುಕೊಂಡಿದ್ದರು. ಇದೀಗ ಸಿದ್ದರಾಮಯ್ಯ ಕೂಡ ಪಾಟೀಲ್ ಪರ ಲಾಬಿ ಮಾಡಿರುವುದು ಕುತೂಹಲ ಕೆರಳಿಸಿದೆ.

  ಏತನ್ಮಧ್ಯೆ, ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಕೂಡ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದರೂ ಅವರ ಮೇಲಿರುವ ಆರ್ಥಿಕ ಅವ್ಯವಹಾರದ ಆರೋಪಗಳು ಹೈಕಮಾಂಡ್ ಅನ್ನು ಚಿಂತೆಗೆ ತಳ್ಳಿದೆ. ವರಿಷ್ಠರಲ್ಲಿ ಡಿಕೆಶಿ ಪರ ಒಲವಿದೆ. ಆದರೆ, ಇಡಿ-ಐಟಿ ತನಿಖೆಗಳು ಕಟ್ಟಿ ಹಾಕಿದೆ. ಅದನ್ನು ಮೀರಿ ಹೈಕಮಾಂಡ್ ಡಿಕೆಶಿಗೆ ಮಣೆ ಹಾಕುವುದೇ ಎಂಬುದನ್ನು ಕಾದುನೋಡಬೇಕು.

  ಕಾರ್ಯಾಧ್ಯಕ್ಷರಾಗಿ ಕೃಷ್ಣ ಬೈರೇಗೌಡ?: ಡಿಕೆಶಿಗೆ ಅಧ್ಯಕ್ಷ ಸ್ಥಾನ ನೀಡದಿದ್ದರೆ ಒಕ್ಕಲಿಗರು ಸಿಟ್ಟಾಗುವುದು ಸಹಜ. ಹೀಗಾಗಿ ಕೃಷ್ಣ ಬೈರೇಗೌಡರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಬಹುದು. ಇದರಿಂದ ಪ್ರಬಲ ಲಿಂಗಾಯತ-ಒಕ್ಕಲಿಗ ಸಮುದಾಯದವರಿಬ್ಬರಿಗೂ ಆದ್ಯತೆ ನೀಡಲಾಗಿದೆ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆನ್ನಲಾಗಿದೆ. ಉಪ ಚುನಾವಣೆ ಸೋಲಿನ ಬಳಿಕ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಅದನ್ನು ಅಂಗೀಕರಿಸದ ಹೈಕಮಾಂಡ್ ಸಿದ್ದರಾಮಯ್ಯರನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಿದೆ.

  ನಿವಾಸಿ ಆಯುಕ್ತರ ವಿರುದ್ಧ ಆಕ್ರೋಶ: ಸಿದ್ದರಾಮಯ್ಯ ಭೇಟಿ ಮಾಡಲೆಂದು ಜಮೀರ್ ಅಹ್ಮದ್, ಕೆ.ಎನ್.ರಾಜಣ್ಣ, ಅಶೋಕ್ ಪಟ್ಟಣ, ಐವನ್ ಡಿಸೋಜಾ ಸೇರಿ ವಿವಿಧ ಮುಖಂಡರು ಕರ್ನಾಟಕ ಭವನಕ್ಕೆ ಬಂದಿದ್ದರು. ಈ ಸಂದರ್ಭ ಸಿದ್ದರಾಮಯ್ಯ ವಾಸ್ತವ್ಯವಿದ್ದ ಕೋಣೆಗೆ ಬಂದ ನಿವಾಸಿ ಆಯುಕ್ತ ನಿಲಯ್ ಮಿತಾಶ್, ದೆಹಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕರ್ನಾಟಕ ಭವನದಲ್ಲಿ ಯಾವುದೇ ರಾಜಕೀಯ ಚಟುವಟಿಕೆ ಮಾಡುವಂತಿಲ್ಲ ಎಂಬ ಆದೇಶ ಬಂದಿದೆ ಎಂದರು. ಇದರಿಂದ ಗಲಿಬಿಲಿಗೊಂಡ ಕೈ ಮುಖಂಡರು, ದಿಲ್ಲಿ ಚುನಾವಣೆಗೂ ಕರ್ನಾಟಕ ಭವನಕ್ಕೂ ಏನು ಸಂಬಂಧ? ನಾವೇನು ಚುನಾವಣಾ ಪ್ರಚಾರ ಮಾಡುತ್ತಿದ್ದೇವಾ? ಎಂದು ಸಿಟ್ಟಾದರು. ನಾವು ಶಾಸಕರಾಗಿದ್ದರೂ, ನೀತಿ ಸಂಹಿತೆ ಕಾರಣ ಕೊಟ್ಟು ಸರ್ಕಾರಿ ಕಾರು ಕೊಟ್ಟಿಲ್ಲ ಎಂದು ಸಿದ್ದರಾಮಯ್ಯರಲ್ಲಿ ಅಸಮಾಧಾನ ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಜಮೀರ್, ಅರೇ, ನಂಗೆ ಕೊಟ್ಟವ್ರೆ. ನೀವ್ ಬೇಕಾದ್ರೆ ಅದನ್ನ ಯೂಸ್ ಮಾಡ್ಕಳಿ ಎಂದಾಗ ಅಶೋಕ್ ಪಟ್ಟಣ ಕಕ್ಕಾಬಿಕ್ಕಿಯಾಗಿದ್ದರು. ಮಾಜಿ ಶಾಸಕ ಕೆ.ಎನ್.ರಾಜಣ್ಣ, ‘ಕರ್ನಾಟಕ ಭವನ ಅನ್ನೋದು ಈ ಐಎಎಸ್ ಆಫಿಸರ್​ಗಳಿಗೆ ನಿರಾಶ್ರಿತ ಕೇಂದ್ರವಾಗಿಬಿಟ್ಟಿದೆ. ಕರ್ನಾಟಕದವ್ರನ್ನ ನಿವಾಸಿ ಆಯುಕ್ತರನ್ನಾಗಿ ಮಾಡದೆ ಇದ್ದಿದ್ದಕ್ಕೆ ಇದನ್ನೆಲ್ಲಾ ಕೇಳ್ಬೇಕಾದ್ದೆ. ಮೊದಲು ಇವರನ್ನೆಲ್ಲ ರಾಯಚೂರು, ಬಳ್ಳಾರಿಗೆ ಹಾಕಿ ಕನ್ನಡದವ್ರನ್ನ ತರ್ಬೆಕು’ ಎಂದು ಕಿಡಿಕಾರಿದರು.

  ಜನರನ್ನು ಭ್ರಷ್ಟರನ್ನಾಗಿ ಮಾಡಿದ್ದೇವೆ

  ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಗೆಲ್ಲಲು ಮತದಾರರನ್ನು ಭ್ರಷ್ಟರನ್ನಾಗಿ ಮಾಡಿರುವುದೇ ಪ್ರಮುಖ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ದುಡ್ಡು ಕೊಟ್ಟೋರಿಗೆ ಜನ ವೋಟ್ ಹಾಕಿದ್ದಾರೆ. ನಾವು (ರಾಜಕೀಯ ವ್ಯವಸ್ಥೆ) ಜನರನ್ನ ಭ್ರಷ್ಟರನ್ನಾಗಿ ಮಾಡಿದ್ದೇವೆ. ಇದನ್ನ ಸರಿಪಡಿಸಬೇಕಾದ ನೀವು (ಮಾಧ್ಯಮ) ಕೂಡ ಸುಮ್ಮನಿದ್ದೀರಿ. ಇದರ ವಿರುದ್ಧ ನೀವೇಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು. ಉಪಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷ ಗೆಲ್ಲುವುದು ಸಹಜ. ಹಿಂದೆ ನಾವು ಉಪಚುನಾವಣೆ ಗೆದ್ದಿದ್ದೆವು ಎಂದರು.

  ಎದುರಾಳಿ ಬಣ ಜಾಗೃತ

  ಕೆಪಿಸಿಸಿ ಮೇಲೆ ಹಿಡಿತ ಸಾಧಿಸಲು ಸಿದ್ದರಾಮಯ್ಯ ಪ್ರಯತ್ನಿಸಿರುವಾಗಲೇ, ಅವರ ಎದುರಾಳಿ ಬಣ ಜಾಗೃತವಾಗಿದೆ. ಎಂ.ಬಿ.ಪಾಟೀಲ್​ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸುವ ಸಿದ್ದರಾಮಯ್ಯ ಪ್ರಯತ್ನ ವಿಫಲಗೊಳಿಸಲು ಹೈಕಮಾಂಡ್ ಮೇಲೆ ಒತ್ತಡ ತರಲಾರಂಭಿಸಿದೆ.

  ಇಂದು ರಾಹುಲ್ ಭೇಟಿ

  ದೆಹಲಿಯಲ್ಲೇ ಉಳಿದುಕೊಂಡಿರುವ ಸಿದ್ದರಾಮಯ್ಯ, ಬುಧವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ವರಿಷ್ಠ ಮುಖಂಡ ಅಹ್ಮದ್ ಪಟೇಲ್, ಎ.ಕೆ.ಆಂಟನಿ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಗ್ಗೆ ನಿಲುವು ಖಚಿತಪಡಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts