ಮೇಯರ್ ಗಂಗಾಂಬಿಕೆ ಫೋನ್ ಇನ್ ಕಾರ್ಯಕ್ರಮ: ಸಮಸ್ಯೆಗಳಿಗೆ ಮೂರೇ ತಾಸಿನಲ್ಲಿ ಪರಿಹಾರ

ವಿಜಯವಾಣಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೇಯರ್ ಗಂಗಾಂಬಿಕೆ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ ಓದುಗರು ತಮ್ಮ ಸಮಸ್ಯೆ ಹೇಳಿಕೊಂಡರು. ಕೆಲ ಸಮಸ್ಯೆಗಳು ತಕ್ಷಣ ಬಗೆಹರಿದರೆ, ಕೆಲವನ್ನು ವಾರದೊಳಗೆ ಬಗೆಹರಿಸುವ ಭರವಸೆಯನ್ನು ಮೇಯರ್ ನೀಡಿದರು. ತ್ಯಾಜ್ಯ, ಕುಡಿಯುವ ನೀರು, ರಸ್ತೆ ಗುಂಡಿ, ಡಾಂಬರೀಕರಣ ಮುಂತಾದ ಸಮಸ್ಯೆಗಳ ಬಗ್ಗೆ ಹಲವು ಪ್ರಶ್ನೆಗಳಿದ್ದವು. ಕೆಲವರು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಪ್ರಶ್ನೆ ಕೇಳಿ ಗಮನ ಸೆಳೆದರು.

ಬೆಂಗಳೂರು: ಹಲವು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳಿಗೆ ‘ವಿಜಯವಾಣಿ’ ಫೋನ್ ಇನ್ ಮುಖಾಂತರ ಕೆಲವೇ ಗಂಟೆಗಳಲ್ಲಿ ಪರಿಹಾರ ಸಿಕ್ಕಿದೆ. ಅಸಮರ್ಪಕ ರಸ್ತೆ ಹಾಗೂ ಕಸದ ಸಮಸ್ಯೆಯಿಂದ ಹೈರಾಣಾಗಿದ್ದ ಹಲವು ನಾಗರಿಕರು ಶನಿವಾರ ವಿಜಯವಾಣಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡ 3 ತಾಸಿನಲ್ಲೇ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಪರಿಹರಿಸಿದರು.

ಸ್ವಚ್ಛತೆಗೆ ಆದ್ಯತೆ: ಫೋನ್​ಇನ್​ನಲ್ಲಿ ಬಂದ ಕರೆಗಳನ್ನೆಲ್ಲ ಖುದ್ದಾಗಿ ಸ್ವೀಕರಿಸಿದ ಮೇಯರ್, ಜನರ ಸಮಸ್ಯೆಗಳನ್ನು ಸಮಾಧಾನವಾಗಿ ಆಲಿಸಿದರು. ಅಲ್ಲದೆ, ಅವರಿಗೆ ಪರಿಹಾರ ನೀಡುವ ಭರವಸೆ ನೀಡಿದರು. ಜತೆಗೆ ಬೆಂಗಳೂರಿನ ಬಗೆಗಿನ ತಮ್ಮ ಕಾಳಜಿ ಮತ್ತು ಗುರಿಯನ್ನು ಜನರೆದುರು ತೆರೆದಿಟ್ಟರು.

ಸೌಂದರ್ಯ ಹಾಗೂ ಉದ್ಯಮ ಕ್ಷೇತ್ರದಿಂದ ವಿಶ್ವಮಟ್ಟದಲ್ಲಿ ಗುರುತಿಸಿ ಕೊಂಡಿರುವ ಬೆಂಗಳೂರು ನಗರ ಈಗ ತ್ಯಾಜ್ಯ ಸಮಸ್ಯೆಯಿಂದ ಬಳಲುತ್ತಿದೆ. ಇರುವ 3 ತಿಂಗಳ ಅವಧಿಯಲ್ಲಿ ಸಮಸ್ಯೆ ನಿವಾರಣೆ ಮಾಡುತ್ತೇನೆ. ಶುದ್ಧ ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕರ ಹಕ್ಕು. ಇದನ್ನು ಜಾರಿಗೊಳಿಸಲು ಶ್ರಮವಹಿಸುತ್ತೇನೆ. ಜಲಮಂಡಳಿ ಅಧಿಕಾರಿಗಳ ಜತೆ ಸಂಪರ್ಕ ಮಾಡಿ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡುತ್ತೇವೆ. ಭವಿಷ್ಯದಲ್ಲಿ ಎದುರಾಗುವ ನೀರು ಅಭಾವಕ್ಕೆ ನಮಗೆ ಉಳಿದಿರುವ ಏಕೈಕ ಮಾರ್ಗ ಮಳೆನೀರು ಸಂಗ್ರಹ. ಈ ಬಗ್ಗೆ ಬಿಬಿಎಂಪಿ ನಾಗರಿಕರಿಗೆ ಅರಿವು ಮೂಡಿಸುವುದರೊಂದಿಗೆ ನಿವೇಶನಗಳಲ್ಲಿ ಇಂಗು ಗುಂಡಿ ನಿರ್ವಿುಸಿಕೊಳ್ಳುವ ಬಗ್ಗೆಯೂ ಮಾಹಿತಿ ನೀಡಲಿದೆ. ಅಲ್ಲದೆ ಇಂಗು ಗುಂಡಿ ನಿರ್ಮಾಣ ಮಾಡುವುದನ್ನು ಕಡ್ಡಾಯ ಮಾಡಲಾಗುವುದು ಎಂದು ಅಭಯ ನೀಡಿದರು.

ಮಳೆಗಾಲ ಪ್ರವಾಹ ತಡೆಯಲು ಬಿಬಿಎಂಪಿ ಸಜ್ಜಾಗಿದ್ದು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಅಲ್ಲಲ್ಲಿ ಇರುವ ಕಸ ವಿಲೇವಾರಿ ಸಮಸ್ಯೆಯನ್ನು ನಿವಾರಣೆ ಮಾಡಲಾಗುವುದು. ಡಾಂಬರು ಹಾಕಿದ ನಂತರ ಇತರ ಕೆಲಸಗಳಿಗಾಗಿ ಒಂದು ವರ್ಷರಸ್ತೆ ಅಗೆಯುವುದನ್ನು ನಿಷೇಧಿಸಲಾಗಿದೆ. ರಸ್ತೆಯಲ್ಲಿ ಜಲಮಂಡಳಿಯ ಪೈಪ್​ಲೇನ್ ಹಾಗೂ ಕೇಬಲ್ ಅಳವಡಿಸುವ ಬಗ್ಗೆ ಎಲ್ಲ ಇಲಾಖೆಯ ಸಭೆ ಕರೆದು ರ್ಚಚಿಸಿ ನಂತರ ಕ್ರಮ ಜರುಗಿಸಲಾಗುವುದು. ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಬಿಬಿಎಂಪಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕೈಗೊಂಡಿದೆ ಎಂದು ಗಂಗಾಂಬಿಕೆ ತಿಳಿಸಿದರು.

# ರಸ್ತೆ ಕಸ ಗುಡಿಸುವ ಪೌರಕಾರ್ವಿುಕರು ಆ ಕಸವನ್ನು ತಂದು ಮನೆ ಮುಂದೆ ಸುರಿದು ಹೋಗುತ್ತಾರೆ. ಇದನ್ನು ನೋಡಿದ ಇತರರು ಅದನ್ನು ಕಸ ಹಾಕುವ ಜಾಗವೆಂದು ಭಾವಿಸಿ ಮತ್ತಷ್ಟು ಕಸ ಎಸೆದು ಹೋಗುತ್ತಿದ್ದಾರೆ. ಈ ಸಂಬಂಧ ಏಳೆಂಟು ತಿಂಗಳಿಂದಲೂ ಅಧಿಕಾರಿಗಳಿಗೆ ದೂರು ನೀಡುತ್ತಲೇ ಬಂದಿದ್ದೇವೆ. ಆದರೆ ಸಮಸ್ಯೆ ಬಗೆಹರಿದಿಲ್ಲ.

| ರಮೇಶ್, ಎಚ್​ಬಿಆರ್ ಲೇಔಟ್

ಎಇಇ ಹಾಗೂ ಹೆಲ್ತ್ ಇನ್​ಸ್ಪೆಕ್ಟರ್ ಸ್ಥಳಕ್ಕೆ ಬಂದು ಪರಿಶೀಲಿಸುತ್ತಾರೆ. ಮುಂದಿನ ದಿನಗಳಲ್ಲಿ ಅಲ್ಲಿ ಕಸ ಹಾಕದಂತೆ ಪೌರಕಾರ್ವಿುಕರಿಗೆ ನಿರ್ದೇಶನ ನೀಡಲಾಗುತ್ತದೆ. ಒಂದು ದಿನದಲ್ಲಿ ಸಮಸ್ಯೆ ಬಗೆಹರಿಯುತ್ತದೆ.

# ನೀರು ಪೂರೈಕೆಯಾಗುತ್ತಿಲ್ಲ. ಒಎಫ್​ಸಿ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು ಸರಿಯಾಗಿ ಮುಚ್ಚದ ಕಾರಣ ಮಳೆ ಬಂದಾಗ ತೀವ್ರ ತೊಂದರೆಯಾಗುತ್ತಿದೆ. ಬೀದಿಬದಿಯ ವ್ಯಾಪಾರಿಗಳಿಂದ ಫುಟ್​ಪಾತ್ ಒತ್ತುವರಿಯಾಗಿದ್ದು ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.

| ಶಿವಕುಮಾರ್, ಭಾರತ್​ನಗರ ಮೊದಲ ಹಂತ

ಹಲವೆಡೆ ನೀರಿನ ಸಮಸ್ಯೆ ತಲೆದೋರಿದೆ. ಜಲಮಂಡಳಿ ಅಧಿಕಾರಿಗಳ ಜತೆ ರ್ಚಚಿಸಿ ಆದ್ಯತೆಯ ಮೇರೆಗೆ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡುತ್ತೇವೆ. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಈಗಾಗಲೇ ಸೂಚನೆ ನೀಡಲಾಗಿದೆ. ಮುಖ್ಯ ಇಂಜಿನಿಯರ್ ಜತೆ ರ್ಚಚಿಸಿ ರಸ್ತೆ ಸರಿಪಡಿಸುತ್ತೇವೆ. ಎಲ್ಲ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುತ್ತದೆ.

# ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಶೌಚಗೃಹವಿಲ್ಲ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

| ಚಂದ್ರಶೇಖರ್, ವಿದ್ಯಾರಣ್ಯಪುರ

ಕೂಡಲೇ ಅಧಿಕಾರಿಗಳೊಂದಿಗೆ ರ್ಚಚಿಸಿ ಶೌಚಗೃಹ ನಿರ್ವಣಕ್ಕೆ ವ್ಯವಸ್ಥೆ ಮಾಡಲಾಗುವುದು.

# ಇಡಬ್ಲ್ಯುಎಸ್ 3ನೇ ಹಂತದಲ್ಲಿ ಇತ್ತೀಚೆಗೆ ಒಳಚರಂಡಿ ಪೈಪ್​ಗಳನ್ನು ಬದಲಿಸಲಾಗಿದ್ದು, ಕಾಮಗಾರಿ ಬಳಿಕ ರಸ್ತೆಯನ್ನು ಸರಿಯಾಗಿ ಮುಚ್ಚಿಲ್ಲ. ಮಳೆ ಬಂದಾಗ ಕೆಸರುಂಟಾಗಿ ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಒಂದೆರಡು ಅಪಘಾತಗಳೂ ಸಂಭವಿಸಿವೆ.

| ವಿಜಯ್ ಕುಮಾರ್, ಯಲಹಂಕ ಉಪನಗರ

ಮುಖ್ಯ ಇಂಜಿನಿಯರ್ ಅವರೊಂದಿಗೆ ರ್ಚಚಿಸಿ ರಸ್ತೆಯನ್ನು ಸರಿಪಡಿಸಲಾಗುವುದು. ಒಂದು ವಾರದೊಳಗೆ ವಾಹನ ಸಂಚಾರಯೋಗ್ಯ ರಸ್ತೆಯನ್ನಾಗಿಸಲು ವ್ಯವಸ್ಥೆ ಮಾಡಲಾಗುತ್ತದೆ.

# ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಿದ್ದರೂ ನೀರು ಪೋಲು ಮಾಡುವುದು ಮುಂದುವರಿದಿದೆ. ಭವಿಷ್ಯದಲ್ಲಿ ನೀರಿನ ಕೊರತೆ ನೀಗಿಸಲು ನೀವು ಯಾವ ಕ್ರಮ ಕೈಗೊಳ್ಳುತ್ತೀರಿ?

| ಶಿವಕುಮಾರ್, ಮೂಡಲಪಾಳ್ಯ

ನೀರಿನ ಸಮಸ್ಯೆ ಬಗೆಹರಿಸಲು ಅನೇಕ ಯೋಜನೆಗಳನ್ನು ರೂಪಿಸಿದೆ. ಮಳೆ ಕೊಯ್ಲು, ಕೆರೆಗಳ ಜೀಣೋದ್ಧಾರ, ಇಂಗುಗುಂಡಿಗಳ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದ್ದು, ಪಾಲಿಕೆ ಜತೆ ಕೈಜೋಡಿಸಬೇಕು.

# ಒಂದು ವರ್ಷದಿಂದ ನೀರು ಪೂರೈಕೆಯಾಗುತ್ತಿಲ್ಲ. ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿಕೊಳ್ಳ ಲಾಗುತ್ತಿದೆ. ಇಡೀ ಪ್ರದೇಶದಲ್ಲಿ ಇದೇ ಪರಿಸ್ಥಿತಿ ಇದೆ.

| ಗೌರಿ ಶಂಕರ್, ಪರಪ್ಪನ ಅಗ್ರಹಾರ

ಜಲಮಂಡಳಿ ಅಧಿಕಾರಿಗಳೊಂದಿಗೆ ರ್ಚಚಿಸಿ, ಯಾವ ಕಾರಣಕ್ಕೆ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಇತರ ವಾರ್ಡ್​ಗಳಿಗೆ ಹೇಗೆ ನೀರು ಸರಬರಾಜು ಮಾಡಲಾಗುತ್ತಿದೆಯೇ ಅದೇ ರೀತಿ ಸಿಂಗಸಂದ್ರ ವಾರ್ಡ್​ಗೂ ನೀರು ಪೂರೈಕೆ ಮಾಡಲು ಆದಷ್ಟು ಬೇಗ ವ್ಯವಸ್ಥೆ ಮಾಡುತ್ತೇನೆ.

# ಬೀದಿ ದೀಪಗಳಿಲ್ಲ. ವಿದ್ಯುತ್ ಕೇಬಲ್​ಗಳನ್ನು ಬದಲಿಸಿಲ್ಲ. ಅನೇಕ ಬಾರಿ ವಿಜಯವಾಣಿ ಮೂಲಕವೂ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಇಲ್ಲಿ ಬಿಜೆಪಿ, ಕಾಂಗ್ರೆಸ್ ಎಂದು ತಾರತಮ್ಯ ಮಾಡುತ್ತಿದ್ದಾರೆ. ಪಕ್ಕದ ರಸ್ತೆಗಳಲ್ಲಿ ವಿದ್ಯುತ್ ಕೇಬಲ್ ಹಾಕಿದ್ದಾರೆ. ಕಾಂಗ್ರೆಸ್​ನವರು ಇದ್ದಾರೆ ಎಂಬ ಕಾರಣಕ್ಕೆ ನಮ್ಮ ರಸ್ತೆಗೆ ಹಾಕಿಲ್ಲ.

| ಬೆಟ್ಟಸ್ವಾಮಿ, ಹನುಮಂತನಗರ

ಬೀದಿ ದೀಪಗಳನ್ನು ಹಾಕಿಸಲಾಗುವುದು. ಕೇಬಲ್ ಬಗ್ಗೆ ಮಾಹಿತಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ.

# ಚರಂಡಿ, ರಾಜಕಾಲುವೆಗಳ ಹೂಳೆತ್ತುವ ಕೆಲಸ ವಿಳಂಬವಾಗುತ್ತಿದೆ. ವಾರ್ಡ್ ಸಮಿತಿ ಸಭೆಗಳು ನಡೆಯುತ್ತಿದೆಯೇ ಇಲ್ಲವೆ ಎಂಬ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇಲ್ಲ.

| ರಾಜಶೇಖರ್, ಕೋಡಿಚಿಕ್ಕನಹಳ್ಳಿ

ಹೂಳೆತ್ತುವ ಕೆಲಸ ಶೀಘ್ರ ಮುಗಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಮತ್ತೊಮ್ಮೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಇನ್ನು ವಾರ್ಡ್ ಸಮಿತಿ ಸಭೆ ಪ್ರತಿ ತಿಂಗಳ ಮೊದಲ ಶನಿವಾರದಂದು ನಡೆಯುತ್ತದೆ. ಸಭೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದಲ್ಲಿ ಸಹಾಯಕ ಇಂಜಿನಿಯರ್ ಅವರಿಂದ ದೊರೆಯುತ್ತದೆ.

# ಬಾಲಾಜಿ ನಗರ 8ರಿಂದ 14ನೇ ಅಡ್ಡರಸ್ತೆಯಲ್ಲಿ ಇನ್ನೂ ಮಣ್ಣಿನ ರಸ್ತೆ ಇದ್ದು, ಅದಕ್ಕೆ ಡಾಂಬರು ಹಾಕುವ ಕೆಲಸವಾಗಿಲ್ಲ. ಸ್ಥಳೀಯರು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

| ಚಂದ್ರಶೇಖರ್, ಮಲ್ಲತ್​ಹಳ್ಳಿ

ರಸ್ತೆ ಡಾಂಬರೀಕರಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕೆಲಸ ಆರಂಭವಾಗಲಿದೆ.

ರಸ್ತೆ ದುರಸ್ತಿಗೆ ಸೂಚನೆ

ಯಲಹಂಕ ಉಪನಗರದಲ್ಲಿ ರಸ್ತೆ ಅಗೆತಕ್ಕೆ ಸಂಬಂಧಪಟ್ಟ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಮೇಯರ್, ಯಲಹಂಕ ವಲಯ ಮುಖ್ಯ ಇಂಜಿನಿಯರ್​ಗೆ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿಗೆ ಯೋಜನೆ ರೂಪಿಸುವಂತೆ ಸೂಚಿಸಿದರು. ನಂತರ ಕರೆ ಮಾಡಿ ಸಮಸ್ಯೆ ಹೇಳಿಕೊಂಡವರಿಗೆ ಆ ವಿಷಯ ತಿಳಿಸಿ, ದುರಸ್ತಿಯಾಗದಿದ್ದರೆ ಮತ್ತೆ ದೂರು ನೀಡುವಂತೆ ಹೇಳಿದರು.

ಸಂಜೆಯೊಳಗೆ ಸ್ಥಳ ಪರಿಶೀಲನೆ

ಮೇಯರ್ ಪ್ರತಿನಿಧಿಸುವ ಜಯನಗರ ವಾರ್ಡ್​ನ ಕನಕನಪಾಳ್ಯ 3ನೇ ಅಡ್ಡರಸ್ತೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ನಾಗರಿಕರೊಬ್ಬರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ತಮ್ಮ ವಾರ್ಡ್​ನ ಸಮಸ್ಯೆ ಬಗೆಹರಿಸಲು ಮುಂದಾದ ಮೇಯರ್, ಸ್ಥಳಕ್ಕೆ ತೆರಳಿ ಅಲ್ಲಿನ ನಿವಾಸಿಗಳೊಟ್ಟಿಗೆ ಸಮಾಲೋಚನೆ ನಡೆಸಿದರು. ಅಲ್ಲಿ ನೀರಿನ ಸಮಸ್ಯೆ ಇಲ್ಲದಿರುವುದನ್ನು ಖಾತರಿ ಪಡಿಸಿಕೊಂಡರು.

ಡಾಂಬರು ಹಾಕಿದ ರಸ್ತೆ ಅಗೆದರೆ ಕ್ರಮ

ಡಾಂಬರು ಹಾಕಿದ ರಸ್ತೆಗಳನ್ನು ನೀರಿನ ಪೈಪ್ ಅಳವಡಿಕೆ ಹಾಗೂ ಇತರೆ ಯಾವುದೇ ಕೆಲಸಕ್ಕಾಗಿ ಒಂದು ವರ್ಷ ಅಗೆಯುವಂತಿಲ್ಲ. ನಿಯಮ ಧಿಕ್ಕರಿಸಿ ಅಗೆದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಎಚ್ಚರಿಸಿದರು. ನಿಶ್ಚಿತ್ ಎಂಬುವರ ಕರೆಗೆ ಅವರು ಉತ್ತರಿಸಿದರು. ರಸ್ತೆಗೆ ಡಾಂಬರು ಹಾಕಿದ ನಂತರ ಯಾವುದೇ ಇಲಾಖೆ ಕೆಲಸ ಮಾಡಬೇಕಾದರೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಏಕಾಏಕಿ ರಸ್ತೆ ಅಗೆಯುವಂತಿಲ್ಲ. ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತಿದೆ. ಜಲಮಂಡಳಿ, ಬೆಸ್ಕಾಂ, ಬಿಎಸ್​ಎನ್​ಎಲ್ ಸೇರಿ ಇತರ ಇಲಾಖೆಗಳ ಅಧಿಕಾರಿಗಳ ಜತೆ ರ್ಚಚಿಸಿ ಈ ರೀತಿಯ ಸಮಸ್ಯೆ ನಿವಾರಿಸಲಾಗುವುದು ಎಂದರು.

ಮನೆ ಮುಂದಿನ ಕಸಕ್ಕೆ ಸಿಕ್ತು ಮುಕ್ತಿ

ಎಚ್​ಬಿಆರ್ ಲೇಔಟ್​ನಲ್ಲಿ ತಮ್ಮ ಮನೆ ಮುಂದೆ ತ್ಯಾಜ್ಯ ಸುರಿಯಲಾಗುತ್ತಿದೆ. ಅದರಿಂದ ನೆಮ್ಮದಿಯಾಗಿ ಜೀವನ ನಡೆಸುವುದು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ರಮೇಶ್ ಕರೆ ಮಾಡಿ ದೂರಿದರು. ಫೋನ್ ಇನ್ ಮುಗಿದ ನಂತರ ಸ್ಥಳೀಯ ವಾರ್ಡ್ ಇಂಜಿನಿಯರ್ ಮತ್ತು ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್​ಗೆ ಕರೆ ಮಾಡಿ ಕೂಡಲೇ ತ್ಯಾಜ್ಯ ತೆರವುಗೊಳಿಸುವಂತೆ ಗಂಗಾಂಬಿಕೆ ಸೂಚಿಸಿದರು. ಮೇಯರ್ ಸೂಚಿಸಿದ 1 ಗಂಟೆಯಲ್ಲಿ ತ್ಯಾಜ್ಯ ನಿವಾರಣೆ ಮಾಡಿದ ಅಧಿಕಾರಿಗಳು, ಇನ್ನು ಮುಂದೆ ಅಲ್ಲಿ ತ್ಯಾಜ್ಯ ವಿಲೇವಾರಿ ಮಾಡದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *