ಕೈ ತೆಕ್ಕೆಗೆ ಮೇಯರ್ ಪಟ್ಟ

 ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಚತುರ ನಡೆಯಿಂದ 5 ವರ್ಷದ ನಂತರ ನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮೇಯರ್ ಪಟ್ಟ ಅಲಂಕರಿಸಿದೆ. ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್, ಉಪ ಮೇಯರ್‌ಆಗಿ ಜೆಡಿಎಸ್‌ನ ಶಫಿ ಅಹಮ್ಮದ್ ಶನಿವಾರ ಆಯ್ಕೆಯಾದರು.

ಬಿಜೆಪಿಯಿಂದ ಸುನಂದಾ ಪಾಲನೇತ್ರ ಮೇಯರ್, ಸತೀಶ್ ಉಪ ಮೇಯರ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿ ದರು. ಒಟ್ಟು 74 ಸದಸ್ಯ ಬಲದ ಪಾಲಿಕೆಯಲ್ಲಿ (ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ) ಬಿಜೆಪಿ 25, ಜೆಡಿಎಸ್ 22, ಕಾಂಗ್ರೆಸ್ 21, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರು ಇದ್ದಾರೆ. ಈ ಪೈಕಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಮೇಯರ್ ಹಾಗೂ ಉಪ ಮೇಯರ್ ಅಭ್ಯರ್ಥಿಗಳು ತಲಾ 48, ಬಿಜೆಪಿ ಅಭ್ಯರ್ಥಿಗಳು 24 ಮತಗಳನ್ನು ಪಡೆದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಪರವಾಗಿ ನಾಲ್ವರು ಪಕ್ಷೇತರ ಸದಸ್ಯರು ಹಾಗೂ ಬಿಎಸ್‌ಪಿ ಸದಸ್ಯ ಮತ ಚಲಾಯಿಸಿದರು. ಪಕ್ಷೇತರ ಸದಸ್ಯ (ಕಳೆದ ಬಾರಿ ಬಿಜೆಪಿ ನಗರ ಪಾಲಿಕೆ ಸದಸ್ಯ) ಮಾ.ವಿ. ರಾಮಪ್ರಸಾದ್ ತಟಸ್ಥರಾಗಿ ಉಳಿದರು. ಬಿಜೆಪಿ ಸಂಸದ ಪ್ರತಾಪ್ ಸಿಂಹ ಗೈರಾಗಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಪ್ರಾಬಲ್ಯ: ಮೇಯರ್ ಸ್ಥಾನ ತಮಗೆ ನೀಡಬೇಕೆಂದು ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಹಾಗೂ ಜೆಡಿಎಸ್ ನಗರಪಾಲಿಕೆ ಸದಸ್ಯರು ಬಿಗಿಪಟ್ಟು ಹಿಡಿದಿದ್ದರು. ಆದರೆ, ಸಿದ್ದರಾಮಯ್ಯ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡರೊಂದಿಗೆ ಮಾತುಕತೆ ನಡೆಸಿ ಮೇಯರ್ ಪಟ್ಟವನ್ನು ಕಾಂಗ್ರೆಸ್‌ಗೆ ಪಡೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ನಗರ ಪಾಲಿಕೆ ಆಡಳಿತದಲ್ಲಿ ಸಿದ್ದರಾಮಯ್ಯ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

5 ವರ್ಷದ ನಂತರ ಮೇಯರ್: 5 ವರ್ಷದ ನಂತರ ಕಾಂಗ್ರೆಸ್ ನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನ ಅಲಂಕರಿಸಿದೆ. ಕಳೆದ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಆಡಳಿತ ನಡೆಸಿತ್ತು. ಇದೀಗ 5 ವರ್ಷದ ನಂತರ ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಮೈತ್ರಿ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಇದೇ ಸಂದರ್ಭ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆ ನಡೆಯಿತು. ಪ್ರಾದೇಶಿಕ ಆಯುಕ್ತ ಯಶ್ವಂತ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಜೆಡಿಎಸ್‌ನಲ್ಲಿ ಅತೃಪ್ತಿ: ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಒಲಿದ ಹಿನ್ನೆಲೆಯಲ್ಲಿ ಸಚಿವರಾದ ಜಿ.ಟಿ. ದೇವೇಗೌಡ ಹಾಗೂ ಸಾ.ರಾ. ಮಹೇಶ್ ಮನದಲ್ಲಿ ಅತೃಪ್ತಿ ಮನೆಮಾಡಿದೆ.

ಒಂದು ಹಂತದಲ್ಲಿ ಸಾ.ರಾ. ಮಹೇಶ್ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಕುರಿತು ಪರೋಕ್ಷ ಹೇಳಿಕೆ ನೀಡಿದ್ದರು. ಈ ವಿಚಾರ ತಿಳಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮೈತ್ರಿ ಧರ್ಮ ಪಾಲನೆ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಸ್ಥಳೀಯ ಮುಖಂಡರು ಅತೃಪ್ತಿಯ ನಡುವೆ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವ ನಿರ್ಧಾರಕ್ಕೆ ಬಂದರು.

‘ಮೈಸೂರಿನಲ್ಲಿ ನಮ್ಮದೇನು ನಡೆಯಲ್ಲ. ಎಲ್ಲ ಹೈಕಮಾಂಡ್ ತೀರ್ಮಾನದಂತೆ ನಡೆದಿದೆ. ಮೇಯರ್ ಆಯ್ಕೆ ವಿಚಾರವೂ ಹೈಕಮಾ ಂಡ್ ಹೇಳಿದಂತೆ ಆಗಿದೆ. ವರಿಷ್ಠರು ಹೇಳಿದ ಮೇಲೆ ಕೇಳಲೇ ಬೇಕು. ಅವರು ಹೇಳಿದ ಮೇಲೆ ಶಿರಬಾಗಿ ಒಪ್ಪಿಕೊಂಡಿದ್ದೇವೆ’ ಎಂದು ಸಚಿವ ಜಿ.ಟಿ. ದೇವೇಗೌಡ ಅಸಮಾಧಾನ ಹೊರ ಹಾಕಿದರು.

ಸಚಿವ ಸಾ.ರಾ. ಮಹೇಶ್ ಕೂಡ ಅತೃಪ್ತಿ ವ್ಯಕ್ತಪಡಿಸಿದರು. ‘ನಮಗಿಂತ ದೊಡ್ಡ ಸ್ಥಾನ ಸಿದ್ದರಾಮಯ್ಯನವರದ್ದು. ಅವರೇ ನಮ್ಮನ್ನೆಲ್ಲ ಸಚಿವರನ್ನಾಗಿ ಮಾಡಿದ್ದು. ಆದರೆ ಇಲ್ಲಿ ಆ ಬಗ್ಗೆ ಚರ್ಚೆ ಬೇಡ. ವರಿಷ್ಠರ ತೀರ್ಮಾನ ಪ್ರಕಾರ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟಿ ದ್ದೇವೆ. ಮುಂದಿನ ಬಾರಿ ನಾವು ಮೇಯರ್ ಆಗುತ್ತೇವೆ’ ಎಂದು ಹೇಳಿದರು.

ಮಾ.ವಿ. ರಾಮಪ್ರಸಾದ್ ತಟಸ್ಥ ನಿಲುವು: ಸತತ ಎರಡು ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿ ಟಿಕೆಟ್ ವಂಚಿತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಮಾ.ವಿ.ರಾಮಪ್ರಸಾದ್, ಚುನಾವಣೆಯಲ್ಲಿ ತಟಸ್ಥ ನಿಲುವು ತಳೆದರು. ಯಾರ ಪರ, ವಿರೋಧವಾಗಿ ಮತ ಚಲಾಯಿಸಲಿಲ್ಲ.

ರಾಮಪ್ರಸಾದ್ ಮೈಸೂರು ಪೇಟ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಅಲ್ಲದೆ ‘ವಾರ್ಡ್‌ನ ಮತದಾರರು, ಕಾರ್ಯಕರ್ತರು ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ’ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಮೈತ್ರಿಕೂಟ ವಿರುದ್ಧ ಮತ ಚಲಾಯಿಸದ ಬಿಜೆಪಿ: ಬಿಜೆಪಿಯ ಮೇಯರ್ ಹಾಗೂ ಉಪ ಮೇಯರ್ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದ ಬಿಜೆಪಿ ಸದಸ್ಯರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸುವ ಆಸಕ್ತಿ ತೋರಲಿಲ್ಲ. ಹೀಗಾಗಿ ಬಿಜೆಪಿ ಪರವಾಗಿ 24, ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಕೂಟ ಪರವಾಗಿ 48 ಮತಗಳು ಚಲಾವಣೆಯಾಯಿತು. ಆದರೆ, ಬಿಜೆಪಿ ವಿರುದ್ಧವಾಗಿ 48, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟ ಪರವಾಗಿ ಯಾವುದೇ ಮತ ಚಲಾವಣೆಯಾಗಲಿಲ್ಲ. ಮೈತ್ರಿಕೂಟದ ವಿರುದ್ಧ ಬಿಜೆಪಿ ಮತ ಚಲಾವಣೆ ಮಾಡದೆ ಇದ್ದಾಗ ಮೈತ್ರಿಕೂಟದ ಸದಸ್ಯರು ಮೇಜುಕುಟ್ಟಿ ಹರ್ಷ ವ್ಯಕ್ತಪಡಿಸಿದರು.

ಪ್ರತಾಪ್ ಸಿಂಹ ಗೈರು: ಬಿಜೆಪಿ ಸಂಸದ ಪ್ರತಾಪ್‌ಸಿಂಹ ಸಭೆಗೆ ಗೈರಾದರು. ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಳ್ಳುವ ಸಂದರ್ಭ ಸದಸ್ಯರ ಹಾಜರಾತಿ ಪಡೆಯಲಾಗುತ್ತದೆ. ಆದರೆ, ಈ ಸಂದರ್ಭ ಪ್ರತಾಪ್ ಸಿಂಹ ಹಾಜರಾಗಲಿಲ್ಲ. ಆದರೆ, ಮೇಯರ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡು ಉಪಮೇಯರ್ ಆಯ್ಕೆ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿರುವ ಸಂದರ್ಭ ಆಗಮಿಸಿದರು. ಹೀಗಾಗಿ ಅವರು ಸಭೆಗೆ ಹಾಜರಾದರೂ ಗೈರು ಎಂದು ಪರಿಗಣಿಸಲಾಯಿತು. ಸ್ವಲ್ಪ ಹೊತ್ತು ಸಭೆಯಲ್ಲಿ ಇದ್ದ ಪ್ರತಾಪ್ ಸಿಂಹ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಮುನ್ನ ಸ್ಥಳದಿಂದ ನಿರ್ಗಮಿಸಿದರು.

ಸಿಂಹ-ತನ್ವಿರ್ ಮಾತುಕತೆ: ಮೇಯರ್, ಉಪ ಮೇಯರ್ ಚುನಾವಣೆಗೆ ತಡವಾಗಿ ಆಗಮಿಸಿದ ಪ್ರತಾಪ್ ಸಿಂಹ, ಬಿಜೆಪಿ ಸದಸ್ಯರು ಇದ್ದ ಕಡೆಗೆ ತೆರಳುವ ಆಸಕ್ತಿ ತೋರದೆ ನೇರವಾಗಿ ಶಾಸಕ ತನ್ವಿರ್ ಸೇಠ್ ಇರುವಲ್ಲಿಗೆ ತೆರಳಿ ಸಾಕಷ್ಟು ಹೊತ್ತು ಮಾತುಕತೆ ನಡೆಸಿದರು. ನಂತರ ಪಕ್ಕದಲ್ಲೇ ಇದ್ದ ಸಚಿವ ಜಿ.ಟಿ. ದೇವೇಗೌಡರೊಂದಿಗೆ ಮಾತುಕತೆಯಲ್ಲಿ ನಿರತರಾದರು. ಈ ಸಂದರ್ಭ ಚುನಾವಣಾಧಿಕಾರಿ ನಿರ್ದೇಶನ ಪ್ರಕಾರ ಪ್ರತಾಪ್ ಸಿಂಹ ತಮ್ಮ ಆಸನಕ್ಕೆ ತೆರಳಿದರು.

ಮೈತ್ರಿ ಕೂಟಕ್ಕೆ ಜೈ ಅಂದ ಸಂದೇಶ್ ನಾಗರಾಜ್: ಜೆಡಿಎಸ್‌ನೊಂದಿಗೆ ಮುನಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಶನಿವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದರು.

‘ಜೆಡಿಎಸ್ ಸ್ಥಳೀಯ ಮುಖಂಡರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆದರೆ, ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ ನನಗೆ ಕರೆ ಮಾಡಿ ಮತ ಚಲಾವಣೆ ಮಾಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದೇನೆ. ಇನ್ನು ಮೂರುವರೆ ವರ್ಷ ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ಮುಂದಿನ ನಿರ್ಧಾರವನ್ನು ಮುಂದೆ ನೋಡೋಣ’ ಎಂದು ಸಂದೇಶ್ ನಾಗರಾಜ್ ಹೇಳಿದರು.

ಸಿದ್ದರಾಮಯ್ಯ ಹೆಸರಿನಲ್ಲಿ ಪ್ರಮಾಣ ವಚನ!: ಸತ್ಯ ಮತ್ತು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಸಾಮಾನ್ಯ. ಆದರೆ, ಕೆಲವು ಸದಸ್ಯರು ತಂದೆ, ತಾಯಿ, ಮತದಾರರು, ತಮ್ಮ ಮುಖಂಡರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪಕ್ಷೇತರ ಸದಸ್ಯ ಸಮೀವುಲ್ಲಾ(ಅಜ್ಜು) ‘ಸಚಿವ ಜಮೀರ್ ಅಹಮದ್ ಖಾನ್, ಸಹೋದರ ಅಜೀಜುಲ್ಲಾ(ಅಜ್ಜು)’ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಜೆಡಿಎಸ್ ಸದಸ್ಯೆ ತಸ್ನಿಂ ‘ಭೂಮಿ ಮತ್ತು ಸತ್ಯದ ಹೆಸರಿನಲ್ಲಿ’, ಮಾಜಿ ಮೇಯರ್ ಸಂದೇಶ್ ಸ್ವಾಮಿ ಪುತ್ರ ಸಾತ್ವಿಕ್, ‘ವಿಧಾನ ಪರಿಷತ್ ಸದಸ್ಯರೂ ಆದ ದೊಡ್ಡಪ್ಪ ಸಂದೇಶ್ ನಾಗರಾಜ್’ ಹೆಸರಿನಲ್ಲಿ, ಪಕ್ಷೇತರ ಸದಸ್ಯ ಮಾ.ವಿ. ರಾಮಪ್ರಸಾದ್ ‘ವಾರ್ಡ್‌ನ ಮತದಾರರು, ಕಾರ್ಯಕರ್ತರು ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ’ ಹೆಸರಿನಲ್ಲಿ, ಕಾಂಗ್ರೆಸ್ ಸದಸ್ಯೆ ಶೋಭಾ ಸುನಿಲ್ ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೆಸರಿನಲ್ಲಿ’ ಪ್ರಮಾಣವಚನ ಸ್ವೀಕರಿಸಿದರು.

ಸ್ಥಾಯಿ ಸಮಿತಿಗೆ ಆಯ್ಕೆ: ತೆರಿಗೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಸದಸ್ಯರಾಗಿ ರುಕ್ಮಿಣಿ ಮಾದೇಗೌಡ, ಶೋಭಾ ಸುನಿಲ್, ಪ್ರೇಮಾ ಶಂಕರೇಗೌಡ, ಶಿವಕುಮಾರ್, ವೇದಾವತಿ, ಶರತ್ ಕುಮಾರ್, ಬಶೀರ್ ಅಹಮದ್, ಪಟ್ಟಣ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಸದಸ್ಯರಾಗಿ ಲಕ್ಷ್ಮೀ, ಆರ್. ನಾಗರಾಜ್, ಕೆ.ವಿ. ಶ್ರೀಧರ್, ಸೈಯದ್ ಅಸ್ರತುಲ್ಲಾ, ಅಶ್ವಿನಿ ಅನಂತು, ರಂಗಸ್ವಾಮಿ, ಶಾಂತಮ್ಮ, ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರಾಗಿ ಮಹಮ್ಮದ್ ರಫೀಕ್, ಬೇಗಂ, ಶ್ರೀನಿವಾಸ್, ರೂಪಾ, ಚಂಪಕಾ, ಉಷಾ, ಅಯೂಬ್ ಖಾನ್, ಆರೋಗ್ಯ , ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರಾಗಿ ರಮೇಶ್, ತಸ್ನಿಂ, ಲೋಕೇಶ್ ಪಿಯಾ, ಸಿ. ಶ್ರೀಧರ್, ಸಮೀವುಲ್ಲಾ, ಗೀತಾಶ್ರೀ ಯೋಗಾನಂದ್ ಸಾತ್ವಿಕ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ತಟಸ್ಥರಾಗಿ ಉಳಿದ ಪಕ್ಷೇತರ ಸದಸ್ಯ ಮಾ.ವಿ. ರಾಮಪ್ರಸಾದ್‌ಗೆ ಯಾವುದೇ ಸ್ಥಾಯಿ ಸಮಿತಿಯಲ್ಲಿ ಸ್ಥಾನ ದೊರೆಯಲಿಲ್ಲ.