ಲತಾ ಮೇಯರ್, ಚನ್ನಬಸಪ್ಪ ಉಪಮೇಯರ್

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆಯೇರಿದ್ದು, ನೂತನ ಮೇಯರ್ ಆಗಿ ಲತಾ ಗಣೇಶ್ ಹಾಗೂ ಉಪಮೇಯರ್ ಆಗಿ ಎಸ್.ಎನ್.ಚನ್ನಬಸಪ್ಪ 14 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.

ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಲತಾ ಗಣೇಶ್, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಮಂಜುಳಾ, ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಚನ್ನಬಸಪ್ಪ ಹಾಗೂ ಮೈತ್ರಿಕೂಟದ ಪರವಾಗಿ ಎಚ್.ಸಿ.ಯೋಗೀಶ್ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿ ಅಭ್ಯರ್ಥಿಗಳ ಪರವಾಗಿ 26 ಹಾಗೂ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ 12 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಅಂತಿಮವಾಗಿ 14 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ವಿಜಯಶಾಲಿಗಳೆಂದು ಚುನಾವಣಾಧಿಕಾರಿ ಶಿವಯೋಗಿ ಕಳಸದ್ ಘೊಷಿಸಿದರು.

ಪಾಲಿಕೆಯ 35 ಸದಸ್ಯರ ಜತೆಗೆ ಶಾಸಕರಾದ ಕೆ.ಎಸ್.ಈಶ್ವರಪ್ಪ, ಅಶೋಕ ನಾಯ್್ಕ ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ್ ಸೇರಿ ಒಟ್ಟು 40 ಮಂದಿ ಮತದಾನ ಮಾಡುವ ಅಧಿಕಾರ ಹೊಂದಿದ್ದರು. ಆಯನೂರು ಮಂಜುನಾಥ್ ಗೈರಾಗಿದ್ದರಿಂದ ಈ ಸಂಖ್ಯೆ 39ಕ್ಕೆ ಕುಸಿಯಿತು.

20 ಸದಸ್ಯ ಬಲದ ಬಿಜೆಪಿಯನ್ನು ಪಕ್ಷೇತರ ಸದಸ್ಯರಾದ ಧೀರರಾಜ್ ಹೊನ್ನವಿಲೆ, ರಾಹುಲ್ ಬಿದರೆ ಹಾಗೂ ಮಂಜುನಾಥ್, ಇಬ್ಬರು ಶಾಸಕರು ಹಾಗೂ ಓರ್ವ ಎಂಎಲ್​ಸಿ ಬೆಂಬಲಿಸಿದರು. ಕಾಂಗ್ರೆಸ್​ನ 7 ಸದಸ್ಯರಿಗೆ ಪಕ್ಷೇತರ ಸದಸ್ಯೆ ರೇಖಾ ರಂಗನಾಥ್, ಎಸ್​ಡಿಪಿಐ ಸದಸ್ಯೆ ಶಬಾನಾ ಖಾನಂ, ಜೆಡಿಎಸ್​ನ ಇಬ್ಬರು ಬೆಂಬಲ ಸೂಚಿಸಿದರು. ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮತವೂ ಸೇರಿ ಒಟ್ಟು 12 ಮತಗಳು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಚಲಾವಣೆಯಾದವು.

ನೂತನ ಸದಸ್ಯರಿಗೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಪ್ರಮಾಣ ವಚನ ಬೋಧಿಸಿದರು. ಮೇಯರ್, ಉಪಮೇಯರ್ ಚುನಾವಣೆ ಬಳಿಕ ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರ ಆಯ್ಕೆ ಸಂಬಂಧ ಚುನಾವಣೆ ನಡೆಯಿತು. ಅಪರ ಜಿಲ್ಲಾಧಿಕಾರಿ ಸಂಗಪ್ಪ, ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಪಾಲ್ಗೊಂಡಿದ್ದರು.

ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ: ನಾಲ್ಕೂ ಸ್ಥಾಯಿ ಸಮಿತಿಗೆ ತಲಾ ಏಳು ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ವಿಶೇಷವೆಂದರೆ ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಎಸ್​ಡಿಪಿಐಗೂ ಅವಕಾಶ ನೀಡಲಾಗಿದೆ. ಸದಸ್ಯರ ವಿವರ ಕೆಳಗಿನಂತಿದೆ.

* ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ:

ಬಿಜೆಪಿಯ ಸುರೇಖಾ ಮುರಳೀಧರ್, ವಿಶ್ವನಾಥ್, ಲಕ್ಷ್ಮೀ ಶಂಕರನಾಯ್ಕ, ಪ್ರಭಾಕರ್, ವಿಶ್ವಾಸ್, ಜೆಡಿಎಸ್​ನ ಸತ್ಯನಾರಾಯಣ ರಾಜ್, ಎಸ್​ಡಿಪಿಐನ ಶಬನಾ ಖಾನಂ.

*ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ

ಬಿಜೆಪಿಯ ಸುವರ್ಣಾ ಶಂಕರ್, ರಾಹುಲ್ ಬಿದರಿ, ಎನ್.ಎಸ್.ಮಂಜುನಾಥ್, ಆರತಿ ಪ್ರಕಾಶ್, ಅನಿತಾ ರವಿಶಂಕರ್, ಎಸ್.ಶಿವಕುಮಾರ್, ಕಾಂಗ್ರೆಸ್​ನ ಆರ್.ಸಿ.ನಾಯ್್ಕ

*ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ

ಬಿಜೆಪಿಯ ಕೆ. ಶಂಕರ್, ಎಸ್.ಜಿ.ರಾಜು, ಸಂಗೀತಾ, ಕಲ್ಪನಾ ರಮೇಶ್, ಮೀನಾ ಗೋವಿಂದರಾಜ್, ಕಾಂಗ್ರೆಸ್​ನ ರೇಖಾ ರಂಗನಾಥ್, ಮೆಹಕ್ ಷರೀಫ್

*ಲೆಕ್ಕಪತ್ರ ಸ್ಥಾಯಿ ಸಮಿತಿ

ಭಾನುಮತಿ ಶೇಟ್, ಆಶಾ ಚಂದ್ರಪ್ಪ, ಧೀರರಾಜ್ ಹೊನ್ನವಿಲೆ, ಕಾಂಗ್ರೆಸ್​ನ ಮಂಜುಳಾ ಶಿವಣ್ಣ, ಯಮುನಾ ರಂಗೇಗೌಡ, ರಮೇಶ್ ಹೆಗ್ಡೆ