ಮಾಯಾವತಿ ಪ್ರಧಾನಿ, ಅಖಿಲೇಶ್ ಮುಖ್ಯಮಂತ್ರಿ

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಉತ್ತರಪ್ರದೇಶದಲ್ಲಿ ಮಾಡಿಕೊಂಡಿರುವ ಮೈತ್ರಿ, ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಲಿದೆ ಎಂದು ಮಾಜಿ ಸಚಿವ, ಶಾಸಕ ಎನ್.ಮಹೇಶ್ ಹೇಳಿದರು.

ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ 63ನೇ ಹುಟ್ಟಹಬ್ಬದ ಅಂಗವಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಕಲ್ಯಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಉತ್ತರಪ್ರದೇಶದಲ್ಲಿ ಈ ಹಿಂದೆಯೂ ಬಿಎಸ್‌ಪಿ-ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಕಾರಣಾಂತರಗಳಿಂದ ಮೈತ್ರಿ ಮುಂದುವರಿಯಲಿಲ್ಲ. ಆದರೆ, ಇದೀಗ ಮತ್ತೊಮ್ಮೆ ಮೈತ್ರಿಗೆ ಕಾಲ ಪಕ್ವವಾಗಿದೆ. ಎಸ್‌ಪಿ-ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳದಿದ್ದರೆ ಮತ ವಿಭಜನೆಯಾಗಿ ಉಭಯ ಪಕ್ಷಗಳಿಗೆ ನಷ್ಟ ಉಂಟಾಗುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಿಎಸ್‌ಪಿ-ಎಸ್‌ಪಿ ಮೈತ್ರಿಕೂಟ ಉತ್ತರಪ್ರದೇಶದ ಒಟ್ಟು 80 ಕ್ಷೇತ್ರಗಳ ಪೈಕಿ 50 ರಿಂದ 60 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದೆ. ಈ ಮೈತ್ರಿ ಉತ್ತರಪ್ರದೇಶ ಸುತ್ತಮುತ್ತಲಿನ 9 ರಾಜ್ಯಗಳ ಮೇಲೂ ಪರಿಣಾಮ ಬೀರಲಿದೆ. ಮೈತ್ರಿ ತಂತ್ರ ಫಲಿಸಿದ್ದೇ ಆದಲ್ಲಿ ಮಾಯಾವತಿ ಪ್ರಧಾನಿ, ಅಖಿಲೇಶ್ ಯಾದವ್ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಯಾವತಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಪ್ರತಿಯೊಬ್ಬ ಬಿಎಸ್‌ಪಿ ಕಾರ್ಯಕರ್ತ ಶ್ರಮಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ರಾಜ್ಯದಲ್ಲಿ ಬಿಎಸ್‌ಪಿ ಖಾತೆ ತೆರೆಯಬೇಕು. ಚಾಮರಾಜನಗರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವೇ ಎಂಬುದನ್ನು ಆಲೋಚಿಸಬೇಕು. ನಾವು ಭಾವನಾತ್ಮಕ ತಪ್ಪುಗಳನ್ನು ಮತ್ತೆ ಮತ್ತೆ ಮಾಡಬಾರದು. ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕೆಂದು ಕರೆ ನೀಡಿದರು.
ಪಕ್ಷದ ರಾಜ್ಯ ಉಸ್ತುವಾರಿ ಡಾ.ಅಶೋಕ್‌ಕುಮಾರ್ ಸಿದ್ಧಾರ್ಥ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ನಗರಾಧ್ಯಕ್ಷ ಡಾ.ಬಸವರಾಜು, ನಗರ ಪಾಲಿಕೆ ಸದಸ್ಯೆ ಬೇಗಂ ಪಲ್ಲವಿ, ಪ್ರಮುಖರಾದ ಮಾದೇಶ್ ಉಪ್ಪಾರ್, ಸೋಸಲೆ ಸಿದ್ದರಾಜು, ಭೀಮನಹಳ್ಳಿ ಸೋಮೇಶ್, ಅಮೃತಾ ಅತ್ರಾಡಿ, ರಾಹುಲ್, ಸಿದ್ದಯ್ಯ, ಗಂಗಾಧರ್ ಬಹುಜನ್, ನಾಗೇಶ್, ನರಸಿಂಹಮೂರ್ತಿ, ಮಾದಪ್ಪ ಇತರರು ಇದ್ದರು.

‘ಬಿಜೆಪಿಗೆ ಆನೆ ಬಲ’ ನಾನ್ಸೆನ್ಸ್…: ರಾಜ್ಯದಲ್ಲಿ ಬಿಜೆಪಿಗೆ ಬಿಎಸ್‌ಪಿ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದು ಶಾಸಕ ಎನ್.ಮಹೇಶ್ ಸ್ಪಷ್ಟಪಡಿಸಿದರು.
ಬಿಜೆಪಿಗೆ ‘ಆನೆ’ ಬಲ ಎಂಬುದಾಗಿ ಕೆಲವು ಮಾಧ್ಯಮಗಳು ತಪ್ಪು ವರದಿ ಮಾಡಿವೆ. ನಾನು ಬಿಜೆಪಿಗೆ ಬೆಂಬಲ ನೀಡುತ್ತೇನೆ ಅನ್ನುವುದು ನಾನ್ಸೆನ್ಸ್ ಎಂದು ಕಿಡಿಕಾರಿದರು. ಇಂಥ ಸುಳ್ಳು ಸುದ್ದಿಗಳನ್ನು ಕಾರ್ಯಕರ್ತರು ನಂಬಬಾರದು. ರಾಜಕಾರಣ ಮಾಡುವವರು ಮುಂಬೈ, ದೆಹಲಿಗೆ ಹೋಗಿದ್ದಾರೆ. ನಾನು ಕಾರ್ಯಕರ್ತರ ನಡುವೆಯೇ ಇದ್ದೇನೆ. ನಿಮಗೆ (ಕಾರ್ಯಕರ್ತರು) ಯಾವುದೇ ರೀತಿಯ ಅನುಮಾನ ಇದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ. ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದರು.