ಟೀಕಿಸುವ ಭರದಲ್ಲಿ ಮಾಯಾವತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರಪ್ರದೇಶದ ಬಿಜೆಪಿ ಶಾಸಕಿ ಸಾಧನಾ

ಚಂದೌಲಿ: ಉತ್ತರ ಪ್ರದೇಶದಲ್ಲಿ ಎಸ್​ಪಿ ಜತೆಗೆ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರ ಬಗ್ಗೆ ಬಿಜೆಪಿಯ ಶಾಸಕಿ ಸಾಧನಾ ಸಿಂಗ್​ ನಾಲಗೆ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾರೆ.

“ನನ್ನ ಪ್ರಕಾರ ಮಾಯಾವತಿ ಅತ್ತ ಹೆಂಗಸೂ ಅಲ್ಲ, ಇತ್ತ ಗಂಡಸೂ ಅಲ್ಲ. ಕೇವಲ ಅಧಿಕಾರಕ್ಕಾಗಿ ಆಕೆ ತಮ್ಮ ಪ್ರತಿಷ್ಠೆ ಮಾರಿಕೊಂಡಿದ್ದಾರೆ,” ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

ಚಂದೌಲಿ ಎಂಬಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಗಲ್​ಸರಾಯ್​ ಕ್ಷೇತ್ರದ ಬಿಜೆಪಿ ಶಾಸಕಿ ಸಾಧನ ಸಿಂಗ್​, ” ಮಾಯಾವತಿಗೆ ಪ್ರತಿಷ್ಠೆ, ಘನತೆ ಎಂಬುದೇ ಗೊತ್ತಿಲ್ಲ. ಆಕೆ ಅತ್ತ ಗಂಡಸೂ ಅಲ್ಲ, ಇತ್ತ ಹೆಂಗಸೂ ಅಲ್ಲ. ನಪುಂಸಕರಿಗಿಂತಲೂ ಕಡೆ. ದ್ರೌಪದಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ಸೇಡು ತೀರಿಸಿಕೊಂಡಿದ್ದಳು. ಅದು ಮಹಿಳೆಯ ಆತ್ಮಾಭಿಮಾನದ ಸಂಕೇತವೂ ಹೌದು. ಆದರೆ, ಈಕೆಯನ್ನು (ಮಾಯಾವತಿ) ನೋಡಿ. ಈಕೆಯಿಂದ ಎಲ್ಲವನ್ನೂ ದೋಚಲಾಯಿತು. ಆದರೂ, ಈಗ ಅಧಿಕಾರಕ್ಕಾಗಿ ಮರ್ಯಾದೆ ಮರೆತು ಮೈತ್ರಿ ಮಾಡಿಕೊಂಡಿದ್ದಾರೆ,” ಎಂದು ಕಟು ಶಬ್ಧಗಳಿಂದ ಟೀಕೆ ಮಾಡಿದ್ದಾರೆ.

ಮುಂದುವರಿದು ಮತ್ತಷ್ಟು ಮಾತನಾಡಿರುವ ಸಾಧನಾ, “ನನಗೆ ಇಂದು ಸಿಕ್ಕಿರುವ ಈ ಅವಕಾಶವನ್ನು ಮಾಯಾವತಿಯ ನಡೆಯನ್ನು ಖಂಡಿಸಲು ಬಳಸುತ್ತೇನೆ. ಆಕೆ ಮಹಿಳಾ ಕುಲಕ್ಕೇ ಅಪಮಾನ. ಲಖನೌ ಗೆಸ್ಟ್​ ಹೌಸ್​ ಪ್ರಕರಣದಲ್ಲಿ ಬಿಜೆಪಿ ನಾಯಕರು ಆಕೆಯನ್ನು ರಕ್ಷಿಸಿದ್ದರು. ಆದರೆ ಆಕೆ ತನ್ನ ಸುಖಕ್ಕಾಗಿ ಮತ್ತು ಅಧಿಕಾರಕ್ಕಾಗಿ ಎಲ್ಲವನ್ನೂ ಮಾರಿಕೊಂಡಿದ್ದಾರೆ. ಈ ದೇಶದ ಮಹಿಳೆಯರೆಲ್ಲರೂ ಮಾಯಾವತಿ ನಡೆಯನ್ನು ಖಂಡಿಸಬೇಕು,” ಎಂದೂ ಸಾಧನಾ ಒತ್ತಾಯಿಸಿದ್ದರು.

ಇತ್ತ, ಸಾಧನಾ ಟೀಕೆಯನ್ನು ಬಿಎಸ್​ಪಿ ಖಂಡಿಸಿದೆ. ಸಾಧನಾ ಸಿಂಗ್​ ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಬಿಎಸ್​ಪಿ ನಾಯಕ ಸತೀಶ್​ ಚಂದ್ರ ಮಿಶ್ರಾ ಕಿಡಿ ಕಾರಿದ್ದಾರೆ.

ಉತ್ತರ ಪ್ರದೇಶದ ಎಸ್​ಪಿ-ಬಿಎಸ್​ಪಿ ಮೈತ್ರಿಯಿಂದ ಆಗಬಹುದಾದ ಅಪಾಯಕ್ಕೆ ಹೆದರಿ ಬಿಜೆಪಿ ಚಡಪಡಿಸುತ್ತಿದೆ. ಅದರ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ ಎಂದು ಮಿಶ್ರಾ ವಾಗ್ದಾಳಿ ನಡೆಸಿದ್ದಾರೆ.