ಕಮಲ್​ ನಾಥ್​ ಪ್ರಮಾಣವಚನ ಸಮಾರಂಭಕ್ಕೆ ಮಾಯಾವತಿ, ಅಖಿಲೇಶ್​ ಯಾದವ್​ ಗೈರು!

ಭೋಪಾಲ್​: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಇಂದು ಕಮಲ್​ನಾಥ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್​ ಸರ್ಕಾರ ರಚಿಸಲು ಬೆಂಬಲ ವ್ಯಕ್ತಪಡಿಸಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಅವರು ಸಮಾರಂಭದಲ್ಲಿ ಗೈರಾಗಲಿದ್ದಾರೆ.

ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿರುವ ಏಕೈಕ ಶಾಸಕ ರಾಜೇಶ್​ ಕುಮಾರ್​​ ಅವರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕಮಲ್​ನಾಥ್​​ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಬಿಜ್ವಾರ ಕ್ಷೇತ್ರದ ನಮ್ಮ ಶಾಸಕ ರಾಜೇಶ್​ ಕುಮಾರ್​ ಅವರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಖಿಲೇಶ್​ ಯಾದವ್​ ಅವರು ಭಾನುವಾರ ಸಂಜೆಯೇ ಟ್ವೀಟ್​ ಮೂಲಕ ತಿಳಿಸಿದ್ದರು.

ಬಹುಜನ ಸಮಾಜ ಪಕ್ಷದ ಶಾಸಕರು ಹಾಗೂ ಇತರರು ಭೋಪಾಲ್​ನಲ್ಲಿ ನಡೆಯುವ ಕಮಲ್​ನಾಥ್​ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

ಬಿಎಸ್​ಪಿ ಮಧ್ಯಪ್ರದೇಶದಲ್ಲಿ ಇಬ್ಬರು ಹಾಗೂ ರಾಜಸ್ಥಾನದಲ್ಲಿ ಆರು ಶಾಸಕರನ್ನು ಹೊಂದಿದೆ. ಮುಂದಿನ ಲೋಕಸಭಾ ಚುನಾವಣೆಗೆ ವಿರೋಧಿ ಬಣಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್​ ಜತೆ ಕೈಜೋಡಿಸುವಂತೆ ಬಿಎಸ್​ಪಿಗೆ ಆಹ್ವಾನ ನೀಡಿದೆ.

ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಎಸ್​ಪಿ ತನ್ನ ಬೆಂಬಲ ವ್ಯಕ್ತಪಡಿಸಿರುವುದರ ಜತೆಗೆ ಕಾಂಗ್ರೆಸ್​ ನೀತಿ ಹಾಗೂ ಆದರ್ಶಗಳನ್ನೂ ತಿರಸ್ಕರಿಸಿದೆ. ಆದರೆ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಗಾಗಿ ಕಾಂಗ್ರೆಸ್​ಗೆ ಬೆಂಬಲ ನೀಡಿದ್ದೇವೆ ಎಂದು ಮಾಯಾವತಿ ತಿಳಿಸಿದ್ದರು. ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬೆಂಬಲ ನೀಡುವ ಕುರಿತು ಮಾತನಾಡದಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕೆಲವು ತಿಂಗಳ ಹಿಂದಷ್ಟೇ ಬಿಎಸ್​ಪಿ ಕಾಂಗ್ರೆಸ್ ನೀಡಿದ್ದ ತನ್ನ​ ಬೆಂಬಲವನ್ನು ಹಿಂಪಡೆದಿತ್ತು.

ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ನಡೆದ ಮುಖ್ಯಮತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾಯಾವತಿ ಹಾಗೂ ಅಖಿಲೇಶ್​ ಯಾದವ್​ ಅವರು ಜೆಡಿಎಸ್​​ ಹಾಗೂ ಕಾಂಗ್ರೆಸ್​ ನಾಯಕರೊಂದಿಗೆ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು. (ಏಜೆನ್ಸೀಸ್​)