ಪತಿ ಸ್ಟುವರ್ಟ್​ ಬಿನ್ನಿ ಹಾಗೂ ತಮ್ಮ ಬಗ್ಗೆ ಟ್ರೋಲ್​ ಮಾಡಿದವರಿಗೆ ತಿರುಗೇಟು ಕೊಟ್ಟ ಮಯಾಂತಿ ಲ್ಯಾಂಗರ್​

ನವದೆಹಲಿ: ಭಾರತದ ಖ್ಯಾತ ಕ್ರೀಡಾ ನಿರೂಪಕಿಯಾಗಿರುವ ಮಯಾಂತಿ ಲ್ಯಾಂಗರ್​ ಅವರು ಪದೇ ಪದೇ ಟ್ರೋಲಿಗರ ಕಣ್ಣಿಗೆ ಗುರಿಯಾಗುತ್ತಿದ್ದಾರೆ. ಕ್ರಿಕೆಟಿಗ ಸ್ಟುವರ್ಟ್​ ಬಿನ್ನಿಯವರ ಧರ್ಮಪತ್ನಿಯಾಗಿರುವ ಮಯಾಂತಿ, ಟ್ರೋಲ್ ಮಾಡಿ ತಮ್ಮ ಗಂಡನ ಇರುವಿಕೆ ಬಗ್ಗೆ ಪ್ರಶ್ನಿಸಿದ್ದ ನೆಟ್ಟಿಗನಿಗೆ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ.

ಮಂಗಳವಾರ ರಾತ್ರಿ ಕಿಂಗ್ಸ್​ ಇಲೆವೆನ್​ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್​ ತಂಡದ ವಿರುದ್ಧ ನಡೆದ ಐಪಿಎಲ್​ ಪಂದ್ಯಾವಳಿಯಲ್ಲಿ ರಾಜಸ್ಥಾನ ಸೋತರು ಕೂಡ ಬಿನ್ನಿ ಅವರ ಪ್ರದರ್ಶನ ಗಮನಾರ್ಹವಾಗಿತ್ತು. ಐಪಿಎಲ್​ 2019ರ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ಬಿನ್ನಿ ಪಂಜಾಬ್​ ವಿರುದ್ಧ ಮೂರು ಸಿಕ್ಸರ್​ ಹಾಗೂ 2 ಬೌಂಡರಿ ಒಳಗೊಂಡ​​ ಅಜೇಯ 33 ರನ್​ ಬಾರಿಸಿದರು.

ಗಂಡನ ಅದ್ಭುತ ಪ್ರದರ್ಶನವನ್ನು ಮುಂದಿಟ್ಟುಕೊಂಡು ನಿಮ್ಮ ಪತಿ ಎಲ್ಲಿ ಎಂದು ಪ್ರಶ್ನಿಸಿದ್ದ ನೆಟ್ಟಿಗನಿಗೆ ಉತ್ತರ ನೀಡಿರುವ ಮಯಾಂತಿ, ಪಂಜಾಬ್​ ವಿರುದ್ಧದ ಬಿನ್ನಿಯ ಅದ್ಭುತ ಪ್ರದರ್ಶನವನ್ನು ನೋಡುವ ಅವಕಾಶವನ್ನು ತಪ್ಪಿಸಿಕೊಂಡ ಟ್ರೋಲಿಗನಿಗೆ ಕ್ಷಮೆ ಇರಲಿ ಎಂದು ವ್ಯಂಗ್ಯವಾಡಿದ್ದಾರೆ.

ಇಂದಿನ ಇನ್ನಿಂಗ್ಸ್​ನಲ್ಲಿ ಬಿನ್ನಿ ಅದ್ಬುತ ಪ್ರದರ್ಶನ ನೀಡಿದ ಬಳಿಕ ಮಯಾಂತಿ ಅವರ ಏಕಾಂಗಿ ಡಿಸ್​​ಪ್ಲೆ ಫೋಟೋ ಬದಲಾಗಿ ಬಿನ್ನಿ ಜತೆಗಿರುವ ಫೋಟೋ ಕಾಣುತ್ತಿದೆ ಎಂದು ಟ್ರೋಲ್​ ಮಾಡಿದ್ದ ಮತ್ತೊಬ್ಬನಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಯಾಂತಿ, ನವನೀತ್​ ನಿಜವಾಗಿಯೂ? ನೀವು ನನ್ನ ನಂಬರ್​ ತಿಳಿದಿಲ್ಲ. ಆ ಫೋಟೋವಿನ ವಾಸ್ತವದ ಬಗ್ಗೆ ನಿಮಗೆ ಗೊತ್ತಿಲ್ಲ. ಆದರೂ ತುಂಬಾ ಹುಡುಕಾಡಿ ಸೂಪರ್​ ಫೋಟೋವನ್ನು ಅಪ್​ಲೋಡ್​ ಮಾಡಿದ ನಿಮಗೆ ಧನ್ಯವಾದಗಳು ಎಂದು ತಿರುಗೇಟು ನೀಡಿದ್ದಾರೆ.

ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಪಂಜಾಬ್​ ಮೊದಲು ಬ್ಯಾಟ್​ ಮಾಡಿ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಗುರಿ ನೀಡಿತ್ತು. ಇದನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್​ 20 ಓವರ್​ಗಳಲ್ಲಿ 172 ರನ್​ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ 12 ರನ್​ ಅಂತರದಲ್ಲಿ ರಾಜಸ್ಥಾನ ಪಂದ್ಯವನ್ನು ಕಳೆದುಕೊಂಡಿತು. (ಏಜೆನ್ಸೀಸ್​)

Leave a Reply

Your email address will not be published. Required fields are marked *