ರನ್​ಮೆಷಿನ್​ಗೆ ಕಡೆಗೂ ದಕ್ಕಿದ ಅವಕಾಶ!

ಬೆಂಗಳೂರು: ಕಳೆದ ದೇಶೀಯ ಕ್ರಿಕೆಟ್ ಋತುವಿನಿಂದ ಆರಂಭವಾಗಿ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 13 ಶತಕ, 16 ಅರ್ಧಶತಕದೊಂದಿಗೆ 53.19ರ ಸರಾಸರಿಯಲ್ಲಿ 4043 ರನ್ ಬಾರಿಸಿರುವ ಕರ್ನಾಟಕದ ಬ್ಯಾಟ್ಸ್​ಮನ್ ಮಯಾಂಕ್ ಅಗರ್ವಾಲ್ ಸಹಜವಾಗಿಯೇ ರಾಷ್ಟ್ರೀಯ ತಂಡದಲ್ಲಿ ಅವಕಾಶ ನಿರೀಕ್ಷಿಸಿದ್ದರು. ಅಕ್ಟೋಬರ್​ನಲ್ಲಿ ಸ್ವದೇಶದಲ್ಲೇ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ ಪಡೆದರೂ ‘ಟೀಮ್ ಮ್ಯಾನೇಜ್​ವೆುಂಟ್’ ಯುವ ಬ್ಯಾಟ್ಸ್​ಮನ್ ಪೃಥ್ವಿ ಷಾಗೆ ಮಣೆ ಹಾಕಿದ ಪರಿಣಾಮ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿರಲಿಲ್ಲ. ಬಳಿಕ ಆಸ್ಟ್ರೇಲಿಯಾ ಪ್ರವಾಸದಿಂದಲೂ ಮಯಾಂಕ್ ಅವರನ್ನು ನಿರ್ಲಕ್ಷಿಸಲಾಗಿತ್ತು. ಆದರೆ ಪೃಥ್ವಿ ಷಾ ಗಾಯಗೊಂಡ ಪರಿಣಾಮ ಅನಿರೀಕ್ಷಿತವಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ 27 ವರ್ಷದ ಮಯಾಂಕ್ ಸಿಕ್ಕ ಮೊದಲ ಅವಕಾಶದಲ್ಲಿಯೇ ಗಮನಾರ್ಹ ನಿರ್ವಹಣೆ ತೋರಿದ್ದಾರೆ. ಮಯಾಂಕ್ ತಂದೆ ಅನುರಾಗ್ ಅಗರ್ವಾಲ್ ಮೂಲತಃ ಉತ್ತರ ಭಾರತದವರಾದರೂ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಉದ್ಯಮಿಯಾಗಿರುವ ಅನುರಾಗ್ ಅಗರ್ವಾಲ್, ಮಗನ ಕ್ರೀಡಾ ಬದುಕಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿ ಮಯಾಂಕ್ ಕುಟುಂಬ ನೆಲೆಸಿದೆ. ಕಳೆದ ಜೂನ್​ನಲ್ಲಿ ಬಹುಕಾಲದ ಗೆಳತಿ ಹಾಗೂ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರ ಪುತ್ರಿ ಆಶಿತಾ ಸೂದ್​ರನ್ನು ಮದುವೆಯಾಗಿದ್ದರು. ನಗರದ ಪ್ರತಿಷ್ಠಿತ ಬಿಷನ್ ಕಾಟನ್ ಸ್ಕೂಲ್​ನಲ್ಲಿದ್ದಾಗ ಕ್ರಿಕೆಟ್ ಜೀವನ ಆರಂಭಿಸಿದ ಮಯಾಂಕ್, ಆರ್​ಬಿಎನ್​ಎನ್​ಪಿ ಮೈದಾನದಲ್ಲಿ ಸರಸ್ವತಿ ವಿದ್ಯಾ ಮಂದಿರ ಶಾಲಾ ತಂಡದ ವಿರುದ್ಧ ನಡೆದ 13 ವಯೋಮಿತಿ ಬಿಟಿಆರ್ ಟ್ರೋಫಿಯಲ್ಲಿ ಶತಕ ಸಿಡಿಸಿದ್ದು ಇನ್ನು ಕಣ್ಣಿಗೆ ಕಟ್ಟಿದಂತಿದೆ ಎನ್ನುತ್ತಾರೆ ಶಾಲಾ ಕೋಚ್ ರಾಮದಾಸ್.

ರನ್ ಹೊಳೆ ಹರಿಸಿದ್ದ ಮಯಾಂಕ್: ಕಳೆದ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಒಂದು ತಿಂಗಳ ಅವಧಿಯಲ್ಲಿ ಸಾವಿರ ರನ್ ಸಿಡಿಸಿ ದಾಖಲೆಯನ್ನೇ ನಿರ್ವಿುಸಿದ್ದರು. ಈ ಅವಧಿಯಲ್ಲಿ ಒಂದು ತ್ರಿಶತಕ ಹಾಗೂ 4 ಶತಕ ಸಿಡಿಸಿದ್ದ ಮಯಾಂಕ್ ಅಂದೇ ಆಯ್ಕೆಗಾರರ ಗಮನಸೆಳೆದಿದ್ದರು. ಕೇವಲ 27 ದಿನಗಳ ಅವಧಿಯಲ್ಲಿ 1003 ರನ್ ಪೇರಿಸಿದ್ದು ದೇಶೀಯ ಕ್ರಿಕೆಟ್ ಮಟ್ಟಿಗೆ ದಾಖಲೆಯಾಗಿದೆ. 2013ರಲ್ಲಿ ಜಾರ್ಖಂಡ್ ವಿರುದ್ಧ ಮೈಸೂರಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಮಯಾಂಕ್, 90 ರನ್ ಸಿಡಿಸಿ ಗಮನಸೆಳೆದಿದ್ದರು. ರಾಷ್ಟ್ರೀಯ ತಂಡದ ಪದಾರ್ಪಣೆಯಲ್ಲೂ ಅರ್ಧಶತಕ ಸಿಡಿಸಿರುವುದು ವಿಶೇಷ.

ಶಾಲಾ ದಿನಗಳಲ್ಲೇ ಕ್ರೀಡೆಯ ಬಗ್ಗೆ ಮಯಾಂಕ್​ಗೆ ವಿಶೇಷ ಆಸಕ್ತಿ ಇತ್ತು. ಅದರಲ್ಲೂ ಕ್ರಿಕೆಟ್ ಅಂದರೆ ಅವನಿಗೆ ಪಂಚಪ್ರಾಣ. ಆತನಲ್ಲಿದ್ದ ಶ್ರದ್ಧೆ, ಆಸಕ್ತಿಯೇ ಇಲ್ಲಿವರೆಗೂ ತಂದು ನಿಲ್ಲಿಸಿದೆ. ನಾನು ಕಂಡಂತೆ ನಾಲ್ಕನೇ ತರಗತಿಯಿಂದಲೂ ಆತ ಕ್ರಿಕೆಟ್ ಆಡುತ್ತಿದ್ದಾನೆ. ಆತ್ಮವಿಶ್ವಾಸದಿಂದ ಮಯಾಂಕ್ ಮೈದಾನಕ್ಕಿಳಿಯುವುದನ್ನು ರೂಡಿಸಿಕೊಂಡಿದ್ದಾನೆ. ಇದೇ ಅವನ ಪ್ಲಸ್ ಪಾಯಿಂಟ್.

| ಕೆ.ಎಸ್.ರಾಮದಾಸ್ ಮಯಾಂಕ್ ಶಾಲಾ ಕೋಚ್