ಅಧಿಕ ಕೀಟನಾಶಕದಿಂದ ಕ್ಯಾನ್ಸರ್

ಮಾಯಕೊಂಡ: ಕೃಷಿಯಲ್ಲಿ ಅನಾವಶ್ಯಕ ಖರ್ಚು ತಗ್ಗಿಸಿ ಹೆಚ್ಚು ಲಾಭ ಪಡೆಯುವಂತಾಗಲು ಪರಿಕರ ಮಾರಾಟಗಾರರ ತರಬೇತಿಯಿಂದ ಸಾಧ್ಯ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ರಾಜ್ಯ ನೂಡಲ್ ಅಧಿಕಾರಿ ಡಾ.ಪೆನ್ನೋಬಳಸ್ವಾಮಿ ತಿಳಿಸಿದರು.

ಸಮೀಪದ ಕಾಡಜ್ಜಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ಡಿಪ್ಲೊಮಾ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅತಿ ಹೆಚ್ಚು ಸಂಖ್ಯೆಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ನೀಡಿದ ಕೀರ್ತಿ ದಾವಣಗೆರೆ ಜಿಲ್ಲೆಗೆ ಸಲ್ಲುತ್ತದೆ ಎಂದರು.

ಕೃಷಿ ಕ್ಷೇತ್ರಕ್ಕೆ ಲಭ್ಯವಿರುವ ನೀರಿನ ಸದ್ಬಳಕೆ ಆಗುತ್ತಿಲ್ಲ. ಅಲ್ಪ ನೀರಿನಲ್ಲಿ ಅಧಿಕ ಬೆಳೆ ಬೆಳೆಯುವ ಜ್ಞಾನ ಬೆಳೆಸಿಕೊಳ್ಳಬೇಕು. ನೀರಿನ ಬೆಲೆ ತಿಳಿಯಲು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ರೈತರನ್ನು ಕೇಳಿ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಕೊಟ್ಟಿಗೆ ಗೊಬ್ಬರ ಬಳಕೆ ಹೆಚ್ಚಿಸಿ, ಇಲ್ಲವಾದಲ್ಲಿ ಹಸಿರೆಲೆ ಗೊಬ್ಬರವಾಗಿ ಡಯಾಂಚ ಬೆಳೆಸಿ 45 ದಿನಗಳಲ್ಲಿ ಭೂಮಿಗೆ ಸೇರಿಸಿದಲ್ಲಿ ರಸಗೊಬ್ಬರ ಬಳಕೆ ತಗ್ಗಿಸಬಹುದು. ಇದರಿಂದ ರೈತರ ಆದಾಯ ದ್ವಿಗುಣ ಸಾಕಾರವಾಗುತ್ತದೆ ಎಂದರು.

ಅತಿ ಹೆಚ್ಚು ಕೀಟನಾಶಕದ ಪರಿಣಾಮ ಪಂಜಾಬಿನಲ್ಲಿ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳಿದ್ದಾರೆ. ನಮ್ಮ ರಾಜ್ಯವೂ ಇದರಿಂದ ಹೊರತಾಗುವ ಕಾಲ ದೂರ ಇಲ್ಲ ಎಂದು ಎಚ್ಚರಿಸಿದರು.

ಸಹಾಯಕ ಕೃಷಿ ನಿರ್ದೇಶಕ ಸಿರಿಯಣ್ಣ ಮಾತನಾಡಿ, ತರಬೇತಿ ಪರವಾನಗೆ ನವೀಕರಣಕ್ಕೆ ಸೀಮಿತವಾಗದೆ. ತಾಂತ್ರಿಕ ಮಾಹಿತಿ ಪಡೆದು ರೈತರಿಗೆ ವರ್ಗಾಯಿಸುವ ಹೊಣೆ ನಿಮ್ಮದು. ಈ ಮೂಲಕ ರೈತನ ಸೇವೆ ಮಾಡಬಹುದು ಎಂದರು.

ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಕಲಿಕೆಗೆ ವಯಸ್ಸಿನ ಬೇಧವಿಲ್ಲ. ರೈತರ ಏಳ್ಗೆ ಉದ್ದೇಶ ಪರಿಕರ ಮಾರಾಟಗಾರರಿಗೆ ತರಬೇತಿ ನೀಡಲಾಗುತ್ತಿದೆ. ರಾಸಾಯನಿಕದಿಂದ ಸಾವಯವ ಕಡೆ ಕೃಷಿ ಸಾಗಲು ನಿಮ್ಮ ಸಹಕಾರ ಅಗತ್ಯ. ತರಬೇತಿ ಸದ್ಬಳಕೆ ಮಾಡಿಕೊಳ್ಳಬೇಕು ಹೇಳಿದರು.

ಮಾಲತೇಶ ಪುಟ್ಟಣ್ಣ ಸ್ವಾಗತಿಸಿದರು. ದೇಸಿ ತರಗತಿಯ ಸಂಯೋಜಕ ಸುದರ್ಶನ್ ನಿರೂಪಿಸಿದರು. ತರಬೇತಿ ಕೇಂದ್ರದ ಅಧಿಕಾರಿಗಳು ಸಿಬ್ಬಂದಿ ಮತ್ತು ದೇಸಿ ತರಗತಿ ಪ್ರಶಿಕ್ಷಣಾರ್ಥಿಗಳು ಇದ್ದರು.

ಕೃಷಿ ಕ್ಷೇತ್ರದಲ್ಲಿ ಅಸಾಧ್ಯವೆಂಬುದಿಲ್ಲ: ಇಲಾಖೆ ಕಾರ್ಯಕ್ಕೆ ರೈತರು ಕೈಜೋಡಿಸಿದಲ್ಲಿ ಕೃಷಿ ಕ್ಷೇತ್ರದಲ್ಲಿ ಅಸಾಧ್ಯವೆಂಬುದು ಇಲ್ಲ ಎಂದು ಜಿಲ್ಲಾ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್ ತಿಳಿಸಿದರು. ಭತ್ತ ನಾಟಿ ಕೈಬಿಟ್ಟು ಕೂರಿಗೆ ಪದ್ಧತಿಯತ್ತ ರೈತರು ಒಲವು ಹೊಂದಿದ್ದಾರೆ. ಅವರಿಗೆ ಮಾಹಿತಿ ಅಗತ್ಯವಿದೆ. ಕೂರಿಗೆ ಪದ್ಧತಿಯಿಂದ ಅಧಿಕ ಇಳುವರಿ ಖಚಿತ ಎಂದರು.

Leave a Reply

Your email address will not be published. Required fields are marked *