ದೇಶದ ಪ್ರಗತಿ ಹಳ್ಳಿಗಳಲ್ಲಿ ಅಡಗಿದೆ

ಮಾಯಕೊಂಡ: ದೇಶದ ಪ್ರಗತಿ, ಕೀರ್ತಿ ಹಳ್ಳಿಗಳ ಅಭಿವೃದ್ಧಿಯಲ್ಲಿ ಅಡಗಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಸಮೀಪದ ಕೈದಾಳೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು ಎಂದು ಕಿವಿಮಾತು ಹೇಳಿದರು.

ಹಳ್ಳಿಗಳ ಪ್ರಗತಿ ಕುಂಠಿತವಾದರೆ ಸಾಮಾಜಿಕ ಸಂಕಷ್ಟ ಎದುರಾಗುತ್ತದೆ. ಸರ್ಕಾರಗಳು ಯಾವುದೇ ಬರಲಿ ಅಧಿಕಾರಿಗಳು ಸಮಾಜದ ಕಟ್ಟಕಡೆಯ, ಅರ್ಹ ವ್ಯಕ್ತಿಗೂ ಸೌಲಭ್ಯ ತಲುಪಿಸುವತ್ತ ಸಾಗಬೇಕಿದೆ. ಸಮಾಜದ ಸರ್ವತೋಮುಖ ಅಭಿವೃದ್ಧಿಯಿಂದ ಸಾಮಾಜಿಕ ಸಮತೋಲನ ಸಾಧ್ಯ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜಪ್ಪ ಮಾತನಾಡಿ, ಕೈದಾಳೆ ಗ್ರಾಮವು ಇತರೆ ಹಳ್ಳಿಗಳಿಗಿಂತ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿದೆ ಎಂದು ತಿಳಿಸಿದರು.

ಪರಿಸರ ಸಂರಕ್ಷಣೆಗೆ ಗ್ರಾಮೀಣ ಜನರು ಮೊದಲ ಆದ್ಯತೆ ನೀಡಬೇಕು. ಗಿಡ-ಮರ ಬೆಳೆಸುವುದು ಬದುಕಿನ ಭಾಗವಾಗಬೇಕು. ಅರಣ್ಯ ನಾಶದಿಂದಾಗುವ ದುಷ್ಪಪರಿಣಾಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಹದಡಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಸಿ.ನಿಂಗಪ್ಪ ಮಾತನಾಡಿ, ಕೈದಾಳೆ ಗ್ರಾಮವು ಸಂಸದರ, ಶಾಸಕರ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದು, ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುಪ್ರಸಾದ್, ಗ್ರಾಮದ ಮುಖಂಡರಾದ ತಿಪ್ಪೇಸ್ವಾಮಿ, ಚಿದಾನಂದಪ್ಪ, ಮಂಜುನಾಥ್, ಮಮತಾ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *