ಎಂಸ್ಯಾಂಡ್ ಅಕ್ರಮ ಸಾಗಣೆ ಟಿಪ್ಪರ್‌ಗಳ ವಶ

ಮಾಯಕೊಂಡ: ಆನಗೋಡು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಎಂ.ಸ್ಯಾಂಡ್ ಓವರ್‌ಲೋಡ್ ಮಾಡಿ ಸಾಗಿಸುತ್ತಿದ್ದ ಹಲವು ವಾಹನಗಳನ್ನು ಆನಗೋಡು ಗ್ರಾಮಸ್ಥರು ಕಳೆದ ಎರಡು ದಿನಗಳಿಂದ ತಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸುತ್ತಿದ್ದಾರೆ.

ಎಂಸ್ಯಾಂಡ್ ಇದ್ದ ಟಿಪ್ಪರ್‌ಲಾರಿಗಳನ್ನು ತಡೆದ ಗ್ರಾಮಸ್ಥರು, ವೇ ಬ್ರಿಡ್ಜ್‌ನಲ್ಲಿ ತೂಗಿದಾಗ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವುದು ಕಂಡು ಬಂತು. ಕೂಡಲೇ ಆರ್‌ಟಿಒ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು.

ಸ್ಥಳಕ್ಕಾಗಮಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಿಬ್ಬಂದಿ ವಿನಯಾ ಬಣಕಾರ್ ಮತ್ತು ಕಂದಾಯ ನಿರೀಕ್ಷಕ ಪ್ರಭು ಪರ್ಮಿಟ್ ಪಡೆಯದ 7, ಓವರ್‌ಲೋಡ್ ಮಾಡಿದ 6 ಲಾರಿಗಳಿಗೆ ದಂಡ ವಿಧಿಸಿದರು. ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಕಿರಣ್‌ುಮಾರ್ ದೂರು ದಾಖಲಿಸಿಕೊಂಡು, ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಶುಕ್ರವಾರವೂ 5 ಟಿಪ್ಪರ್‌ಗಳನ್ನು ತಡೆದು ಸಂಬಂಧಪಟ್ಟವರಿಗೆ ಒಪ್ಪಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಗಡಿ ಭಾಗ ಮತ್ತಿತರ ಕಡೆಗಳಿಂದ ಈ ಮಾರ್ಗವಾಗಿ ಪ್ರತಿನಿತ್ಯ ನೂರಾರು ವಾಹನಗಳಲ್ಲಿ ಪ್ರತಿನಿತ್ಯ ಎಂ.ಸ್ಯಾಂಡ್ ರವಾನೆಯಾಗುತ್ತಿದೆ.

ನಿಗದಿತ ತೂಕಕ್ಕಿಂತ ಹೆಚ್ಚು ಎಂ.ಸ್ಯಾಂಡ್ ಸಾಗಿಸುವುದರಿಂದ ರಸ್ತೆಗಳು ಹಾನಿಯಾಗುತ್ತಿವೆ. ಎಂಸ್ಯಾಂಡ್‌ಗೆ ನೀರು ಹಾಕದೇ, ಟಾರ್ಪಾಲಿನ್ ಮುಚ್ಚದಿರುವುದರಿಂದ ಊರಿನ ತುಂಬಾ ಧೂಳು ತುಂಬುತ್ತಿದೆ ಎಂಬುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಅತಿ ವೇಗದ ಸಂಚಾರದಿಂದ ಅಪಘಾತಗಳು ಹೆಚ್ಚಿವೆ. ಧೂಳಿಂದ ಜನ ರೋಗಕ್ಕೆ ತುತ್ತಾಗಿದ್ದಾರೆ. ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಈ ವೇಳೆ ಗ್ರಾಮಸ್ಥರು ಆರೋಪಿಸಿದರು.

ಈ ಮಧ್ಯೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಹಿಸಿದ ವಾಹನಗಳನ್ನು ತಮ್ಮ ಸುಪರ್ಧಿಗೆ ಪಡೆಯಲು ಪೊಲೀಸರು ವಿಳಂಬ ಮಾಡಿದ್ದರಿಂದ ಸ್ಥಳದಲ್ಲಿ ಗೊಂದಲದ ಸ್ಥಿತಿ ಕಂಡು ಬಂತು.

ಗ್ರಾಪಂ ಅಧ್ಯಕ್ಷ ರವಿ, ಮುಖಂಡರಾದ ಕರಿಬಸಪ್ಪ, ಬಸವರಾಜ, ಪ್ರಕಾಶ್, ಸಿರಾಜ್, ಶಾಕೀರ್, ನಸ್ರುಲ್ಲಾ, ರುದ್ರೇ ಶ್ ಇತರರಿದ್ದರು.